ಜೆಫ್ ಬೆಝೋಸ್ ಮೊಬೈಲ್ ಸೌದಿ ರಾಜಕುಮಾರನಿಂದ ಹ್ಯಾಕ್ ?

Update: 2020-03-29 19:19 GMT

ರಿಯಾದ್: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಅಮೆಝಾನ್ ಮುಖ್ಯಸ್ಥ ಜೆಫ್ ಬೆಝೋಸ್ ಅವರ ಮೊಬೈಲ್ ಫೋನನ್ನು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹ್ಯಾಕ್ ಮಾಡಿದ್ದಾರೆಂದು bloomberg ವರದಿ ತಿಳಿಸಿದೆ.

ಸೌದಿ ರಾಜಕುಮಾರ ಅವರು 2018ರ ಮಧ್ಯಭಾಗದಲ್ಲಿ ಬೆಝೋಸ್ ಅವರಿಗೆ ಕಳುಹಿಸಿದ್ದ ವಾಟ್ಸ್ಯಾಪ್ ಸಂದೇಶವೊಂದು ಹೊರನೋಟಕ್ಕೆ ಅಪಾಯಕಾರಿ ಎಂದು ಕಂಡರೂ ಅದರಲ್ಲಿನ ಒಂದು ಕೋಡ್ ಅಂತಿಮವಾಗಿ ಬೆಝೋಸ್ ಅವರ ಫೋನ್‍ನಲ್ಲಿನ ಮಾಹಿತಿ ಸೋರಿಕೆಯಾಗಲು ಕಾರಣವಾಗಿದೆ ಎಂದು ತನಿಖಾಕಾರರು ಕಂಡುಕೊಂಡಿದ್ದಾರೆ. ಈ ಸೋರಿಕೆಯಲ್ಲಿ  ಸೌದಿ ರಾಜಕುಮಾರ ಅವರ ಒಂದು ವಾಟ್ಸ್ಯಾಪ್ ಖಾತೆಯೂ ಶಾಮೀಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಸೌದಿ ರಾಜಕುಮಾರ ಅವರ ಖಾಸಗಿ ವಾಟ್ಸ್ಯಾಪ್ ಖಾತೆಯಿಂದ ಜೆಫ್ ಬೆಝೋಸ್ ಅವರಿಗೆ ಕಳುಹಿಸಲಾದ ವೀಡಿಯೋವೊಂದರಿಂದ ಈ ಸೋರಿಕೆ ನಡೆದಿತ್ತು. ಈ ಕುರಿತು ಜಾಗತಿಕ ಉದ್ಯಮಿ ಸಲಹಾ ಸಂಸ್ಥೆ ಎಫ್‍ ಟಿಐ ಕನ್ಸಲ್ಟಿಂಗ್   ವಿಶ್ಲೇಷಣೆ ನಡೆಸಿತ್ತು.

ಬೆಝೋಸ್ ಅವರ ಮೊಬೈಲ್ ಹ್ಯಾಕ್ ಮಾಡಲಾಗಿದೆ ಎಂಬ ವರದಿಗಳನ್ನು ವಿಚಿತ್ರ ಎಂದು ಬಣ್ಣಿಸಿರುವ ಸೌದಿ ದೂತಾವಾಸ, ಸಮರ್ಪಕ ತನಿಖೆಗೆ ಆಗ್ರಹಿಸಿದೆ. ಮೊಬೈಲ್ ಹ್ಯಾಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ವಿಶ್ವಸಂಸ್ಥೆ ತನಿಖೆಯು ಇಂದು ದೃಢೀಕರಿಸುವ ಸಾಧ್ಯತೆಯಿದೆ.

ಬೆಝೋಸ್ ತಮ್ಮ ವಿವಾಹವಾದ 25 ವರ್ಷಗಳ ನಂತರ ಪತ್ನಿ ಮೆಕೆನ್ಝೀ ಅವರಿಂದ ವಿಚ್ಛೇದನ ಪಡೆಯುವುದಾಗಿ ಹೇಳಿದ ಅಚ್ಚರಿಯ ಬೆಳವಣಿಗೆಯ ಒಂದು ವರ್ಷದ ನಂತರ ಈ ಫೋನ್ ಹ್ಯಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಮಾಜಿ ಟಿವಿ ನಿರೂಪಕಿ ಲಾರೆನ್ ಸಂಚೆಝ್ ಹಾಗೂ ಜೆಫ್ ಬೆಝೋಸ್ ಅವರ ವಿವಾಹೇತರ ಸಂಬಂಧವೇ ಈ ವಿಚ್ಛೇದನಕ್ಕೆ  ಕಾರಣ ಎಂದು ಬಹಿರಂಗಪಡಿಸಿದ್ದ ದಿ ನ್ಯಾಷನಲ್ ಎಂಕ್ವೈರರ್ ಬೆಝೋಸ್ ಕಳುಹಿಸಿದ್ದ ಹಲವು ಖಾಸಗಿ ಸಂದೇಶಗಳನ್ನೂ ಬಹಿರಂಗಗೊಳಿಸಿತ್ತು. ಈ ವರದಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ಬೆಝೋಸ್ ಸಾರ್ವಜನಿಕವಾಗಿ ಹೇಳಿಕೊಳ್ಳದ ಹೊರತು ಇನ್ನಷ್ಟು ಖಾಸಗಿ ಸಂದೇಶಗಳನ್ನು ಬಹಿರಂಗಗೊಳಿಸುವುದಾಗಿ ಅದು ಬೆದರಿಕೆ ಹಾಕಿದೆ ಎಂದು ಬೆಝೋಸ್ ನಂತರ ಬ್ಲಾಗ್ ಒಂದರಲ್ಲಿ ಆರೋಪಿಸಿದ್ದರು.

ಅಸಂಗತ: ಸೌದಿ ವಿದೇಶ ಸಚಿವ

ಅಮೆಝಾನ್ ಸ್ಥಾಪಕ ಜೆಫ್ ಬೆರೆಸ್‌ರ ಫೋನ್‌ಗೆ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕನ್ನ ಹಾಕಿದ್ದಾರೆ ಎಂಬ ವರದಿಗಳು ‘ಅಸಂಗತ’ ಎಂದು ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಬುಧವಾರ ಹೇಳಿದ್ದಾರೆ.

 ಸ್ವಿಟ್ಸರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ‘ರಾಯ್ಟರ್ಸ್’ಗೆ ಹೇಳಿಕೆಯೊಂದನ್ನು ನೀಡಿದ ಅವರು, ‘‘ಯುವರಾಜರು ಬೆರೆಸ್ ಫೋನ್‌ಗೆ ಕನ್ನಹಾಕುತ್ತಾರೆ ಎನ್ನುವ ಕಲ್ಪನೆಯೇ ಮೂರ್ಖತನದ್ದು’’ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News