ದೇವರಿಗೂ ಪೌರತ್ವ ಬೇಕಂತೆ: ಅರ್ಜಿ ಸಲ್ಲಿಸಿದ ಅರ್ಚಕ!

Update: 2020-01-22 15:45 GMT
ಫೋಟೊ ಕೃಪೆ: twitter.com/csranga

ಹೈದರಾಬಾದ್,ಜ.22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಚರ್ಚೆ ಹಾಗೂ ಪ್ರತಿಭಟನೆಗಳು ಭುಗಿಲೆದ್ದಿರುವಂತೆಯೇ, ತೆಲಂಗಾಣದ ಚಿಲ್ಕೂರು ಬಾಲಾಜಿ ದೇವಾಲಯದ ಮುಖ್ಯ ಅರ್ಚಕ ಸಿ.ಎಸ್.ರಂಗರಾಜನ್ ಅವರು, ತನ್ನ ಆರಾಧ್ಯದೇವರಿಗೆ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ನೂತನವಾಗಿ ತಿದ್ದುಪಡಿಗೊಂಡ ಪೌರತ್ವ ಕಾಯ್ದೆಯಡಿ ಹೆಚ್ಚಿನ ಎಲ್ಲಾ ನಿರಾಶ್ರಿತರಿಗೆ ಪೌರತ್ವವನ್ನು ನೀಡಬಹುದಾದರೆ, ದೇವಾಲಯದ ಎಲ್ಲಾ ದೇವರುಗಳಿಗೆ ಪೌರತ್ವ ಲಭಿಸಲು ಯಾಕೆ ಸಾಧ್ಯವಿಲ್ಲ ಎಂದವರು ಪ್ರಶ್ನಿಸಿದ್ದಾರೆ.

ದೇವರಿಗೆ ಪೌರತ್ವ ನೀಡಬೇಕೆಂಬ ತನ್ನ ವಾದವನ್ನು ರಂಗರಾಜನ್ ಸಮರ್ಥಿಸಿಕೊಳ್ಳುತ್ತಾರೆ. ‘‘ ಕಾನೂನು ಭಾಷೆಯಲ್ಲಿ ಪ್ರತಿಯೊಂದು ದೇವತೆಯೂ ಶಾಶ್ವತವಾಗಿ ಅಪ್ರಾಪ್ತವಯಸ್ಕವೆನಿಸಿಕೊಳ್ಳುತ್ತದೆ. ಆದುದರಿಂದ ಆ ದೇವತೆಯನ್ನು ಅರ್ಚಕ ಇಲ್ಲವೇ ಯಾರಾದರೂ ಸ್ನೇಹಪರ ವ್ಯಕ್ತಿಯು ಪ್ರತಿನಿಧಿಸಬೇಕಾಗುತ್ತದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯ ಸೆಕ್ಷನ್ 5 (4) ಅನ್ವಯ, ಅಪ್ರಾಪ್ತ ವಯಸ್ಕನಿಗೂ ಪೌರತ್ವದ ಹಕ್ಕನ್ನು ನೀಡಬಹುದಾಗಿದೆ. ಹೀಗೆ, ಈ ಕಾನೂನು ನಿಯಮಾವಳಿಯಡಿ ಎಲ್ಲಾ ದೇವತೆಗಳಿಗೆ ಪೌರತ್ವದ ಹಕ್ಕುಗಳನ್ನು ನೀಡಬಹುದಾಗಿದೆ’’ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

ಶಬರಿಮಲೆ ಕುರಿತು ನೀಡಲಾದ ತೀರ್ಪು ಹಿಂದೂ ದೇವತೆಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಜಾತ್ಯತೀತ ಭಾರತವು ಬೆದರಿಕೆಯಾಗಿದೆಯೆಂಬದನ್ನು ಸಾಬೀತು ಪಡಿಸಿದೆಯೆಂದು ರಂಗರಾಜನ್ ಹೇಳುತ್ತಾರೆ. ‘‘ ಶಬರಿಮಲೆ ತೀರ್ಪಿನ ಪ್ರಕಾರ ಹಿಂದೂ ದೇವತೆಗೆ ಯಾವುದೇ ಸಾಂವಿಧಾನಿಕ ಅಧಿಕಾರವಿರುವುದಿಲ್ಲ. ಶಬರಿಮಲೆಯ ಅರಾಧ್ಯದೇವತೆಯು ಬ್ರಹ್ಮಚಾರಿಯಾಗಲು ಬಯಸಿದ್ದಾನೆ. ಹೀಗಾಗಿ ಋತುಸ್ರಾವ ವಯಸ್ಸಿನ ಮಹಿಳೆಯರಿಗೆ ಅಲ್ಲಿ ಸಂದರ್ಶಿಸಲು ಅವಕಾಶವಿರುವುದಿಲ್ಲ. ಆದರೆ ನ್ಯಾಯಾಲಯ ಅದನ್ನು ಒಪ್ಪುತ್ತಿಲ್ಲ. ದೇವತೆಗೆ ಅಂತಹ ಸಾಂವಿಧಾನಿಕ ಅಧಿಕಾರವಿರಲು ಸಾಧ್ಯವಿಲ್ಲ ಎಂದು ಅದು ಹೇಳುತ್ತಿದೆ’’ ಎಂದು ರಂಗರಾಜನ್ ಅರ್ಜಿಯಲ್ಲಿ ವಾದಿಸಿದ್ದಾರೆ.

  ಆದರೆ ಅಯೋಧ್ಯೆಯ ತೀರ್ಪು ಶಬರಿಮಲೆಯ ತೀರ್ಪಿಗೆ ವ್ಯತಿರಿಕ್ತ ವಾದುದಾಗಿದೆ. ಅಯೋಧ್ಯೆಯಲ್ಲಿ ದೇವತಾ ವಿಗ್ರಹವು ತನ್ನ ಅಸ್ತ್ತಿತ್ವದ ಸದುದ್ದೇಶವನ್ನು ಈಡೇರಿಸುವುದನ್ನು ಮುಂದುವರಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಈ ತೀರ್ಪಿನ ಆಧಾರದಲ್ಲಿ ಹಾಗೂ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಕೇಂದ್ರ ಸರಕಾರವು ಪ್ರತಿಯೊಂದು ದೇವತೆಗೂ ಪೌರತ್ವವನ್ನು ಕೇಂದ್ರ ಸರಕಾರ ನೀಡಬೇಕೆಂದು ನಾವು ಬಯಸಿದ್ದೇವೆ ಎಂದು ರಂಗರಾಜನ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

 ಮೊದಲಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಪೌರತ್ವವನ್ನು ನೀಡಬೇಕಾಗಿದ್ದು, ಇದರಿಂದ ಆ ದೇವತೆಗೆ ತನ್ನ ನೈಶ್ಚಿಕ ಬ್ರಹ್ಮಚರ್ಯದ ಉದ್ದೇಶವನ್ನು ಪಾಲಿಸಲು ಸಾಧ್ಯವಾಗುತ್ತದೆ ಎಂದು ರಂಗರಾಜನ್ ಅರ್ಜಿಯಲ್ಲಿ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News