ಜಮ್ಮು-ಕಾಶ್ಮೀರದ ಮಕ್ಕಳು ರಾಷ್ಟ್ರೀಯವಾದಿಗಳು: ರಾಜನಾಥ್ ಸಿಂಗ್

Update: 2020-01-22 16:01 GMT

ಹೊಸದಿಲ್ಲಿ,ಜ.22: ಜಮ್ಮು-ಕಾಶ್ಮೀರದಲ್ಲಿಯ ಮಕ್ಕಳು ರಾಷ್ಟ್ರೀಯವಾದಿಗಳಾಗಿದ್ದಾರೆ ಮತ್ತು ಅವರನ್ನು ಬೇರೆ ದೃಷ್ಟಿಯಲ್ಲಿ ನೋಡಬಾರದು. ಅವರನ್ನು ತಪ್ಪುದಾರಿಯಲ್ಲಿ ಸಾಗುವಂತೆ ಪ್ರಚೋದಿಸುತ್ತಿರುವವರು ನಿಜವಾದ ತಪ್ಪಿತಸ್ಥರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಇಲ್ಲಿ ಹೇಳಿದರು.

ಎನ್‌ಸಿಸಿ ಗಣರಾಜ್ಯೋತ್ಸವ ದಿನ ಶಿಬಿರಕ್ಕೆ ಭೇಟಿ ನೀಡಿದ್ದ ಸಿಂಗ್,ಎನ್‌ಸಿಸಿಗೆ ಸೇರುವಂತೆ ಜಮ್ಮು-ಕಾಶ್ಮೀರದ ಮಕ್ಕಳನ್ನು ಪ್ರೇರೇಪಿಸುತ್ತಿರುವ ಕುರಿತು ಪ್ರಶ್ನೆಗೆ,ಯುವಜನರು ಕೇವಲ ಯುವಜನರಾಗಿದ್ದಾರೆ. ಕೆಲವೊಮ್ಮೆ ಜನರು ಅವರನ್ನು ಸರಿಯಾದ ರೀತಿಯಲ್ಲಿ ಪ್ರೇರೇಪಿಸುವುದಿಲ್ಲ. ವಾಸ್ತವದಲ್ಲಿ ಅವರನ್ನು ತಪ್ಪು ದಾರಿ ಹಿಡಿಯಲು ಪ್ರೇರೇಪಿಸಲಾಗುತ್ತಿದೆ. ಇದೇ ಕಾರಣದಿಂದ ಮಕ್ಕಳನ್ನು ದೂರಲಾಗದು. ಅವರನ್ನು ತಪ್ಪು ದಾರಿಯಲ್ಲಿ ಸಾಗಲು ಪ್ರೇರೇಪಿಸುತ್ತಿರುವವರು ನಿಜವಾದ ತಪ್ಪಿತಸ್ಥರಾಗಿದ್ದಾರೆ ಎಂದು ಉತ್ತರಿಸಿದರು.

ಕಳೆದ ವಾರ ದಿಲ್ಲಿಯಲ್ಲಿ ಆಯೋಜಿಸಿದ್ದ ರೈಸಿನಾ ಡೈಲಾಗ್ 2020ರಲ್ಲಿ ಭಾಗವಹಿಸಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು,ಕಾಶ್ಮೀರದಲ್ಲಿ 10-12 ವರ್ಷ ಪ್ರಾಯದ ಎಳೆಯ ಮಕ್ಕಳನ್ನೂ ಉಗ್ರಗಾಮಿಗಳನ್ನಾಗಿ ಮಾಡಲಾಗುತ್ತಿದೆ ಮತ್ತು ಇದು ಕಳವಳಕಾರಿಯಾಗಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News