ಶಾಹೀನ್‌ ಬಾಗ್ ಪ್ರತಿಭಟನೆ: ಮಕ್ಕಳಿಗೆ ಮಾನಸಿಕ ಯಾತನೆಯ ಬಗ್ಗೆ ಎನ್‌ಸಿಪಿಸಿಆರ್ ಕಳವಳ

Update: 2020-01-22 16:11 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.22: ದಿಲ್ಲಿಯ ಶಾಹೀನ್‌ ಬಾಗ್‌ನಲ್ಲಿ ಪೌರತ್ವ (ತಿದ್ದುಪಡಿ)ಕಾಯ್ದೆ (ಸಿಎಎ)ಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಕ್ಕಳು ಭಾಗಿಯಾಗಿರುವುದನ್ನು ತೋರಿಸಿರುವ ವೈರಲ್ ವೀಡಿಯೊಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ವು,ಈ ಮಕ್ಕಳನ್ನು ಗುರುತಿಸಿ ಅವರಿಗೆ ಸಮಾಲೋಚನೆ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ವದಂತಿಗಳು ಮತ್ತು ತಪ್ಪುಮಾಹಿತಿಗಳ ಪರಿಣಾಮವಾಗಿ ಮಕ್ಕಳು ಮಾನಸಿಕ ಯಾತನೆಯಿಂದ ನರಳಬಹುದು ಎಂದು ಆಗ್ನೇಯ ದಿಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಅದು ತಿಳಿಸಿದೆ.

‘ಭಾರತದ ಪ್ರಧಾನಿ ಮತ್ತು ಗೃಹಸಚಿವರು ಪೌರತ್ವ ದಾಖಲೆಗಳನ್ನು ಸಲ್ಲಿಸುವಂತೆ ತಮ್ಮನ್ನು ಕೇಳಲಿದ್ದಾರೆ ಮತ್ತು ಹಾಗೆ ಮಾಡಲು ತಾವು ವಿಫಲಗೊಂಡರೆ ತಮ್ಮನ್ನು ದಿಗ್ಬಂಧನ ಕೇಂದ್ರಗಳಿಗೆ ರವಾನಿಸಲಾಗುತ್ತದೆ ಮತ್ತು ಅಲ್ಲಿ ತಮಗೆ ಊಟ ಮತ್ತು ಬಟ್ಟೆ ಕೂಡ ದೊರೆಯುವುದಿಲ್ಲ ಎಂದು ತಮ್ಮ ಹಿರಿಯರು ತಮಗೆ ತಿಳಿಸಿದ್ದಾರೆ ಎಂದು ಈ ಮಕ್ಕಳು ಬೊಬ್ಬೆ ಹೊಡೆಯುತ್ತಿದ್ದಾರೆ ’ಎಂಬ ದೂರನ್ನು ತಾನು ಸ್ವೀಕರಿಸಿರುವುದಾಗಿ ಹೇಳಿರುವ ಆಯೋಗವು,ವೈರಲ್ ಆಗಿರುವ ವೀಡಿಯೊಗಳಲ್ಲಿ ಕಂಡು ಬಂದಿರುವ ಮಕ್ಕಳನ್ನು ಗುರುತಿಸುವಂತೆ ಮತ್ತು ಅಗತ್ಯವಾದರೆ ಅವರಿಗೆ ಮತ್ತು ಹೆತ್ತವರಿಗೆ ತಜ್ಞರೊಂದಿಗೆ ಸಮಾಲೋಚನೆಗೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ಅಗತ್ಯ ನಿರ್ದೇಶಗಳನ್ನು ನೀಡಲು ಅಧಿಕಾರಿಗಳನ್ನು ಆಗ್ರಹಿಸಿದೆ. ಈ ಬಗ್ಗೆ 10 ದಿನಗಳಲ್ಲಿ ತನಗೆ ವರದಿಯನ್ನು ಸಲ್ಲಿಸುವಂತೆ ಅದು ಸೂಚಿಸಿದೆ.

ಶಾಹೀನ್‌ಬಾಗ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಹಸ್ರಾರು ಜನರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News