ಸಿಎಎ ಪ್ರತಿಭಟನೆ ವೇಳೆ ಮಹಿಳೆಯರಿಗೆ ಪೊಲೀಸರಿಂದ ಥಳಿತ: ವೀಡಿಯೊ ಬಹಿರಂಗ

Update: 2020-01-22 16:14 GMT
ಫೈಲ್ ಚಿತ್ರ

ಇಟಾವಾ,ಜ.22: ಇಟಾವಾದಲ್ಲಿ ಮಂಗಳವಾರ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಮಹಿಳಾ ಪ್ರತಿಭಟನಾಕಾರರನ್ನು ಬೆನ್ನಟ್ಟಿ ಲಾಠಿಯಿಂದ ಥಳಿಸುತ್ತಿದ್ದನ್ನು ಮತ್ತು ಅಂಗಡಿಗಳಿಗೆ ನುಗ್ಗಿ ಅವುಗಳನ್ನು ಬಲವಂತದಿಂದ ಮುಚ್ಚಿಸುತ್ತಿದ್ದನ್ನು ಮೊಬೈಲ್ ವೀಡಿಯೊ ಫೂಟೇಜ್ ಬಹಿರಂಗಗೊಂಡಿದೆ.

ಪ್ರತಿಭಟನೆಯನ್ನು ವಿಫಲಗೊಳಿಸಲು ಪ್ರಯತ್ನಿಸಿದ್ದ ಪೊಲಿಸರು ಪಚ್ರಾಹಾ ಪ್ರದೇಶದ ಇಕ್ಕಟ್ಟಾದ ಓಣಿಗಳಲ್ಲಿ ಮಹಿಳೆಯರನ್ನು ಬೆನ್ನಟ್ಟಿ ಅವರನ್ನು ಥಳಿಸುತ್ತಿರುವುದನ್ನು 17 ಸೆಕೆಂಡ್‌ಗಳ ಈ ವೀಡಿಯೊ ತುಣುಕುಗಳು ತೋರಿಸಿವೆ.

ಮಹಿಳೆಯರು ಪೊಲೀಸರತ್ತ ಕೂಗುತ್ತಿರುವುದನ್ನು ಮತ್ತು ತಮ್ಮ ಮೇಲೆ ಏಕೆ ಹಲ್ಲೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸುತ್ತಿರುವುದೂ ಈ ವೀಡಿಯೊ ತುಣುಕುಗಳಲ್ಲಿ ದಾಖಲಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಥಳಿಸಿರುವ ಪೊಲೀಸರು ಮಹಿಳೆಯರೇ ಅಥವಾ ಪುರುಷರೇ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಆದರೆ ಮಹಿಳಾ ಪ್ರತಿಭಟನಾಕಾರರನ್ನು ಮಹಿಳಾ ಪೊಲೀಸರೇ ನಿಭಾಯಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರದೇಶದಲ್ಲಿ ನೆರೆದಿದ್ದ ಪುರುಷರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವುದನ್ನು,ರಸ್ತೆ ಬದಿಯ ಹೋಟೆಲ್‌ಗೆ ನುಗ್ಗಿ ಸಿಬ್ಬಂದಿಗಳನ್ನು ಥಳಿಸಿ ಬಲವಂತದಿಂದ ಮುಚ್ಚಿಸುತ್ತಿದ್ದನ್ನೂ ಇತರ ವೀಡಿಯೊ ತುಣುಕುಗಳು ತೋರಿಸಿವೆ. ಇನ್ನೊಂದು ವೀಡಿಯೊದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದೂ ದಾಖಲಾಗಿದೆ.

ತಮ್ಮ ದಾಳಿಯನ್ನು ಸಮರ್ಥಿಸಿಕೊಂಡಿರುವ ಪೊಲೀಸರು,ಪ್ರತಿಭಟನಾಕಾರರು ತಮ್ಮ ಮೇಲೆ ಕಲ್ಲುತೂರಾಟ ನಡೆಸಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News