ಮುಂಬೈ ಇನ್ನೆಂದಿಗೂ ನಿದ್ರಿಸುವುದಿಲ್ಲ: 24 ಗಂಟೆ ನೀತಿಗೆ ಸಂಪುಟದ ಅಸ್ತು

Update: 2020-01-22 17:12 GMT

ಮುಂಬೈ,ಜ.22: ಮುಂಬೈನ ಮಾಲ್‌ಗಳು,ಮಲ್ಟಿಪ್ಲೆಕ್ಸ್‌ಗಳು ಮತ್ತು ಮಳಿಗೆಗಳು ಜ.27ರಿಂದ ದಿನದ 24 ಗಂಟೆಗಳ ಕಾಲವೂ ತೆರೆದಿರಲಿವೆ. ‘ಮುಂಬೈ 24 ಗಂಟೆಗಳ ನೀತಿ’ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಬುಧವಾರ ಪ್ರಕಟಿಸಿದರು.

 ಸರಕಾರದ ನಿರ್ಧಾರವು ಹೆಚ್ಚು ಆದಾಯ ಮತ್ತು ಉದ್ಯೋಗಗಳ ಸೃಷ್ಟಿಗೆ ನೆರವಾಗುವ ನಿರೀಕ್ಷೆಯಿದೆ. ಸೇವಾ ಕ್ಷೇತ್ರದಲ್ಲಿ ಈಗಾಲೇ ಐದು ಲಕ್ಷ ಜನರು ದುಡಿಯುತ್ತಿದ್ದಾರೆ ಎಂದ ಅವರು,ಲಂಡನ್‌ನ ‘ರಾತ್ರಿ ಆರ್ಥಿಕತೆ ’ಯು ಐದು ಶತಕೋಟಿ ಪೌಂಡ್ ವೌಲ್ಯದ್ದಾಗಿದೆ ಎಂದರು.

ಮಳಿಗೆಗಳು ರಾತ್ರಿಯಿಡೀ ತೆರೆದಿರಬೇಕು ಎನ್ನುವುದು ಕಡ್ಡಾಯವಲ್ಲ, ಉತ್ತಮ ವ್ಯಾಪಾರದ ನಿರೀಕ್ಷೆ ಇರುವವರು ಮಾತ್ರ ರಾತ್ರಿಯಿಡೀ ಮಳಿಗೆಗಳನ್ನು ತೆರೆಯಬಹುದಾಗಿದೆ ಎಂದ ಅವರು,ಮೊದಲ ಹಂತದಲ್ಲಿ ವಸತಿಯೇತರ ಪ್ರದೇಶಗಳಲ್ಲಿಯ ಮಾಲ್‌ಗಳು ಮತ್ತು ಮಿಲ್ ಕಂಪೌಂಡ್‌ಗಳಲ್ಲಿರುವ ಮಳಿಗೆಗಳು,ಹೋಟೆಲ್‌ಗಳು ಮತ್ತು ಥಿಯೇಟರ್‌ಗಳು ರಾತ್ರಿ ತೆರದಿರಲು ಅವಕಾಶ ನೀಡಲಾಗುವುದು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ನರಿಮನ್ ಪಾಯಿಂಟ್‌ಗಳಲ್ಲಿ ಫುಡ್ ಟ್ರಕ್‌ಗಳಿಗಾಗಿ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಆದರೆ ಬಾರ್‌ಗಳು ಮತ್ತು ಪಬ್‌ಗಳು ಎಂದಿನಂತೆ ನಸುಕಿನ 1:30 ಗಂಟೆಗೆ ಮುಚ್ಚುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News