ಪ್ರತಿ ಬಾಗ್ ಕೂಡ ಶಾಹೀನ್‌ ಬಾಗ್ ಆಗಬಹುದು: ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಎಚ್ಚರಿಕೆ

Update: 2020-01-22 17:42 GMT

ಹೊಸದಿಲ್ಲಿ, ಜ. 22: ಕಳೆದ ವಾರ ಜೈಲಿನಿಂದ ಬಿಡುಗಡೆಗೊಂಡಿರುವ ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ತನ್ನ ಮೊದಲ ಸಂದರ್ಶನದ ಸಂದರ್ಭ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮುಸ್ಲಿಮರ ವಿರುದ್ಧ ಮಾತ್ರವಲ್ಲ. ದಲಿತರು, ಬುಡಕಟ್ಟು ಜನರ ವಿರುದ್ಧವೂ ಆಗಿದೆ ಎಂದಿದ್ದಾರೆ.

‘‘ಪ್ರತಿ ಬಾಗ್ ಕೂಡ ಶಾಹೀನ್ ಬಾಗ್ ಆಗುವ ಸಮಯ ಬರಲಿದೆ’’ ಎಂದು ಎನ್‌ಡಿಟಿವಿಗೆ ಬುಧವಾರ ಸಂದರ್ಶನ ನೀಡಿದ ಸಂದರ್ಭ ಅವರು ಎಚ್ಚರಿಕೆ ನೀಡಿದರು. ‘‘ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದಲಿತ ವಿರೋಧಿ. ಅದು ಹಿಂದುಳಿದ ವರ್ಗ, ಬುಡಕಟ್ಟು ಜನರ ವಿರೋಧಿ. ಆದುದರಿಂದ ಇವರು ಹೆಚ್ಚು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಪ್ರತಿ ಬಾಗ್ ಕೂಡ ಶಾಹೀನ್ ಬಾಗ್ ಆಗುವ ಸಮಯ ಬರಲಿದೆ’’ ಎಂದು ಅವರು ಹೇಳಿದ್ದಾರೆ. ಸರಕಾರ ತನ್ನ ಕೆಲಸ ಮಾಡಬೇಕು ಎಂದು ನಾವು ಹೇಳುತ್ತೇವೆ. ಆದರೆ, ಜನರು ಆತಂಕಿತರಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಅವರು ದೇಶವನ್ನು ವಿಭಜಿಸಲು ಬಯಸಿದರೆ,

ಸರಕಾರಕ್ಕೆ ಬಹುಮತ ಇಲ್ಲದೇ ಇದ್ದರೂ ಅದನ್ನು ಮಾಡುತ್ತಾರೆ. ಕಾರ್ಯಸೂಚಿಯಲ್ಲಿರುವುದನ್ನು ಅವರು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಫೆಬ್ರವರಿ 8ರಂದು ನಡೆಯಲಿರುವ ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಅವರು ಬೆಂಬಲಿಗರಲ್ಲಿ ಆಗ್ರಹಿಸಿದರು. ಆದರೆ, ತನ್ನ ಕಾರ್ಯಸೂಚಿ ರಾಜಕೀಯ ಗುರಿ ಹೊಂದಿಲ್ಲ ಎಂದು ಹೇಳಿದರು. ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ. ಯಾಕೆಂದರೆ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತದೆ ಎಂದ ಚಂದ್ರಶೇಖರ್ ಆಝಾದ್, ಕಾಂಗ್ರೆಸ್ ನಮ್ಮನ್ನು (ದಲಿತರು) ಮತ ಬ್ಯಾಂಕ್ ಎಂದು ಪರಿಗಣಿಸಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News