ಮಾಧ್ಯಮದೊಳಗಿನ ಅಸ್ವಸ್ಥರ ಕೈಯಲ್ಲಿ ‘ಸ್ಫೋಟಕ’

Update: 2020-01-23 05:51 GMT

ಮಾನಸಿಕವಾಗಿ ಸ್ವಸ್ಥತೆಯಿರುವ ಯಾರೂ ಇನ್ನೊಬ್ಬರ ಮೇಲೆ ಬಾಂಬು ಹಾಕುವುದಿಲ್ಲ. ಎಲ್ಲ ಉಗ್ರರೂ ಮಾನಸಿಕವಾಗಿ ಅಸ್ವಸ್ಥರೇ ಆಗಿರುತ್ತಾರೆ. ಆದುದರಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟು ಸಿಕ್ಕಿ ಬಿದ್ದ ಆದಿತ್ಯ ರಾವ್ ಎಂಬಾತನನ್ನು ಮಾನಸಿಕವಾಗಿ ಅಸ್ವಸ್ಥ ಎಂದು ಪ್ರತ್ಯೇಕವಾಗಿ ಕರೆಯುವ ಅಗತ್ಯವಿಲ್ಲ. ಮಾನಸಿಕವಾಗಿ ಅಸ್ವಸ್ಥರಾಗಿರುವವರೇ ಆರೆಸ್ಸೆಸ್, ಐಸಿಸ್, ಅಲ್‌ಖಾಯಿದ, ಸಂಘಪರಿವಾರ, ಸನಾತನಸಂಸ್ಥೆಯಂತಹ ಸಂಘಟನೆಗಳನ್ನು ಸೇರಿ ಅಮಾಯಕರ ಮೇಲೆ ತಮ್ಮ ಕ್ರೌರ್ಯವನ್ನು ಮೆರೆಯುತ್ತಿರುವುದು. ‘ಬುದ್ಧಿ ಮಾಂದ್ಯ’ನಾಗಿದ್ದರೆ ಖಂಡಿತವಾಗಿಯೂ ಆದಿತ್ಯ ರಾವ್‌ನ ಬಗ್ಗೆ ಮೃದು ಧೋರಣೆ ತಳೆಯಬಹುದಿತ್ತು. ಆದರೆ ಎಂಬಿಎ ಕಲಿತಿರುವ ಆದಿತ್ಯರಾವ್ ಹೊಟೇಲ್ ಒಂದರಲ್ಲಿ ಕ್ಯಾಶ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ಯೂಟ್ಯೂಬ್ ನೋಡಿ ಸ್ಫೋಟಕ ತಯಾರಿ ನಡೆಸುವಷ್ಟು ಮಾನಸಿಕವಾಗಿ ಸಮರ್ಥನಾಗಿದ್ದ. ಇದೇ ಸಂದರ್ಭದಲ್ಲಿ ಆತ ನಿರುದ್ಯೋಗದ ಕಾರಣದಿಂದ ನಿರಾಶನಾಗಿದ್ದ ಎಂದೂ ಕೆಲವು ಮಾಧ್ಯಮಗಳು ಸಮರ್ಥಿಸಲು ಯತ್ನಿಸುತ್ತಿವೆ.

ಬ್ಯಾಂಕ್ ಸೇರಿದಂತೆ ಹಲವೆಡೆ ಈತ ಉದ್ಯೋಗ ಮಾಡಿದ್ದಾನೆ. ಆಗಾಗ ಅನುಮಾನಾಸ್ಪದವಾಗಿ ಉದ್ಯೋಗಗಳನ್ನು ಬದಲಿಸುತ್ತಾ ಬಂದಿದ್ದಾನೆ. ಇಂಟರ್‌ನೆಟ್, ಯೂಟ್ಯೂಬ್ ಬಳಸುವುದಕ್ಕೆ, ಅವುಗಳ ಮೂಲಕ ಸ್ಫೋಟಕಕ್ಕೆ ಬೇಕಾದ ಸಾಮಗ್ರಿಗಳನ್ನು ತಯಾರಿಸುವುದಕ್ಕೆ, ಏರ್‌ಪೋರ್ಟ್‌ಗೆ ರಿಕ್ಷಾದಲ್ಲಿ ಹೋಗಲು ಆರ್ಥಿಕವಾಗಿ ಸಮರ್ಥನಾಗಿರುವ ಆದಿತ್ಯ ರಾವ್ ಒಂದು ನಿರ್ದಿಷ್ಟ ಉದ್ದೇಶದಿಂದಲೇ ಕಾರ್ಯವೆಸಗಿದ್ದ. ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ವಿರೋಧಿ ಬೃಹತ್ ಚಳವಳಿಯ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ಧರ್ಮದ ಕುರಿತಂತೆ ಜನರಲ್ಲಿ ಆತಂಕ ಬಿತ್ತುವ ಉದ್ದೇಶ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಬೆಂಗಳೂರಿನಲ್ಲಿ ಸಂಘಪರಿವಾರ ಸೃಷ್ಟಿಸಿದ ‘ಮುಖಂಡರ ಹತ್ಯೆಗೆ ಸ್ಕೆಚ್’ ಪ್ರಹಸನದ ಮುಂದಿನ ಭಾಗವನ್ನು ಆತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸುವುದಕ್ಕೆ ಮುಂದಾಗಿದ್ದ. ಅವನು ಇಟ್ಟಿದ್ದ ಸ್ಫೋಟಕವನ್ನು ‘ಬಾಂಬ್’ ಆಗಿ ಪರಿವರ್ತಿಸಿ ರಾಜ್ಯಮಟ್ಟದಲ್ಲಿ ಸ್ಫೋಟಿಸುವುದಕ್ಕೆ ಅವನೊಂದಿಗೆ ಮಾಧ್ಯಮಗಳು ಕೈ ಜೋಡಿಸಿದವು. ಸ್ಫೋಟಕ ಪ್ರಕರಣದಲ್ಲಿ ಆದಿತ್ಯರಾವ್‌ನ ಪಾತ್ರ ಸಣ್ಣದು. ಆತ ವಿಮಾನ ನಿಲ್ದಾಣದಲ್ಲಿ ಇಟ್ಟ ಸ್ಫೋಟಕವನ್ನು ‘ಬೃಹತ್ ಬಾಂಬ್’ ಆಗಿ ಬದಲಾಯಿಸಿ ರಾಜ್ಯದಲ್ಲಿ ಭಯೋತ್ಪಾದನೆ ನಡೆಸಿರುವುದು ಮಾಧ್ಯಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನೊಂದು ಧರ್ಮದ ಜನರ ಕುರಿತಂತೆ ದ್ವೇಷ ಬಿತ್ತುವುದು, ಸಮಾಜದಲ್ಲಿ ಆತಂಕ ಸೃಷ್ಟಿಸುವುದು ಅಸ್ವಸ್ಥತೆಯ ಲಕ್ಷಣವೆಂದಾದರೆ, ನಮ್ಮ ನಾಡಿನ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮದೊಳಗಿರುವ ಪತ್ರಕರ್ತರು ಮಾನಸಿಕವಾಗಿ ಅದೆಂತಹ ಭೀಕರ ರೋಗದಿಂದ ನರಳುತ್ತಿದ್ದಾರೆ ಎನ್ನುವುದು ಈ ಪ್ರಕರಣದ ಮೂಲಕ ಬಹಿರಂಗವಾಗಿದೆ. ಈ ಸಮಾಜವನ್ನು ವಿಚ್ಛಿದ್ರಗೊಳಿಸುವ ಸ್ಫೋಟಕಗಳನ್ನು ಹೊಂದಿರುವ ನಿಜವಾದ ಉಗ್ರರು ಯಾರು ಎನ್ನುವುದು ಒಂದೇ ದಿನದಲ್ಲಿ ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಇಂದು ಆದಿತ್ಯ ರಾವ್ ಬಂಧನಕ್ಕೊಳಗಾಗಿದ್ದಾನೆ. ಆದರೆ ಆತನ ಸಣ್ಣ ಸ್ಫೋಟಕವನ್ನೇ ಬೃಹತ್ ಬಾಂಬ್ ಆಗಿ ಬದಲಾಯಿಸಿ ನಾಡನ್ನು ಬೆಚ್ಚಿ ಬೀಳಿಸಿದವರು ಪತ್ರಕರ್ತರ ಸಭ್ಯ ವೇಷದಲ್ಲಿ ಹೊಸತೊಂದು ಬಾಂಬ್ ಸಿಡಿಸುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದಿತ್ಯ ರಾವ್‌ನ ಹೆಸರು ಆದಿಲ್ ಆಗಿದ್ದಿದ್ದರೆ ಇಂದು ಇದೇ ಮಾಧ್ಯಮಗಳು ಆ ಬಾಂಬ್‌ನ ಹಿಂದಿರುವ ಉಗ್ರಗಾಮಿಗಳ ಗುಂಪಿನ ಬಗ್ಗೆ ಪುಂಖಾನುಪುಂಖ ಕತೆಗಳನ್ನು ಕಟ್ಟಿ ದಿನವಿಡೀ ಮನೆಮನೆಗಳಲ್ಲಿ ಸಿಡಿಸುತ್ತಿದ್ದರು. ಆದುದರಿಂದ ಮೊದಲು ಮಾಧ್ಯಮದೊಳಗಿರುವ ಈ ಪತ್ರಕರ್ತರ ವೇಷದ ಉಗ್ರರ ಮಾನಸಿಕ ಪರೀಕ್ಷೆ ನಡೆಯಬೇಕಾಗಿದೆ ಮತ್ತು ಅದಕ್ಕೆ ಬೇಕಾದ ಔಷಧಿಗಳನ್ನು ಅವರಿಗೆ ಒದಗಿಸಬೇಕಾಗಿದೆ. ವಿಪರ್ಯಾಸವೆಂದರೆ, ಸ್ಫೋಟ ನಡೆಸಿದಾತನ ಹೆಸರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವನದು ಅಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಮಾಧ್ಯಮಗಳ ವರಸೆ ಬದಲಾಯಿತು.

‘ಪೌರತ್ವದ ವಿರುದ್ಧ ಸೇಡು ತೀರಿಸಲು ಇಟ್ಟ ಬೃಹತ್ ಬಾಂಬ್’ ಎಂದೆಲ್ಲ ಬರೆದಿದ್ದ ಪತ್ರಿಕೆಗಳೇ ಮರುದಿನ ಅದೊಂದು ಸಾಮಾನ್ಯ ಸ್ಫೋಟಕ ಎಂದು ಬರೆದವು.ಒಂದು ವೇಳೆ ಆದಿತ್ಯ ರಾವ್‌ನ ಪಾತ್ರ ಬೆಳಕಿಗೆ ಬರದೇ ಇದ್ದಿದ್ದರೆ ಈ ಸ್ಫೋಟಕದ ಹೆಸರಿನಲ್ಲಿ ಮಾಧ್ಯಮಗಳು ಅದೆಷ್ಟೋ ಅಮಾಯಕರನ್ನು ಬಲಿ ಹಾಕುತ್ತಿದ್ದವು. ಜೊತೆಗೆ ನಿನ್ನೆ ಬಾಂಬ್‌ನ ಕುರಿತಂತೆ ಸ್ಫೋಟಿಸುತ್ತಿದ್ದ ಬಿಜೆಪಿಯ ನಾಯಕರೆಲ್ಲ ಏಕಾಏಕಿ ವೌನ ತಾಳಿದ್ದಾರೆ. ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಉಗ್ರ ಬಾಂಬ್ ಇಟ್ಟರೆ ಮಾತ್ರ ದೇಶಕ್ಕೆ ಅಪಾಯ ಎಂದು ಅವರು ನಂಬಿದವರು. ಇಲ್ಲವಾದರೆ, ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾದ ಶಂಕಿತ ಉಗ್ರಗಾಮಿ ಪ್ರಜ್ಞಾ ಸಿಂಗ್‌ಗೆ ಟಿಕೆಟ್ ನೀಡಿ ಆಕೆಯನ್ನು ಸಂಸತ್‌ಗೆ ಆಯ್ಕೆ ಮಾಡುತ್ತಿರಲಿಲ್ಲ. ವಿಧಾನ ಸೌಧದಲ್ಲಿ ಬಾಂಬಿಟ್ಟ ಕುಖ್ಯಾತಿಯನ್ನು ಹೊಂದಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್‌ಗೆ ಬಿಜೆಪಿ ತನ್ನ ಪಕ್ಷದಲ್ಲಿ ಸ್ಥಾನ ಮಾನ ನೀಡುತ್ತಿರಲಿಲ್ಲ. ಬಹುಶಃ ಆದಿತ್ಯ ರಾವ್ ಇಟ್ಟ ಸ್ಫೋಟಕವೇನಾದರೂ ಸ್ಫೋಟಿಸಿದ್ದಿದ್ದರೆ, ಮುಂದಿನ ದಿನಗಳಲ್ಲಿ ಆತನಿಗೂ ಬಿಜೆಪಿಯಿಂದ ಮಂಗಳೂರು ಲೋಕಸಭೆಯ ಟಿಕೆಟ್ ಸಿಕ್ಕಿ ಬಿಡುತ್ತಿತ್ತೇನೋ? ತನ್ನ ಪಕ್ಷದೊಳಗೇ ಇಂತಹವರನ್ನು ಸಾಕುತ್ತಿರುವ ಸರಕಾರ ಈ ತನಿಖೆಯನ್ನು ಸರಿದಾರಿಯಲ್ಲಿ ಮುಗಿಸುತ್ತದೆ ಎಂದು ಭಾವಿಸುವುದೇ ಮೂರ್ಖತನವಾಗಿದೆ.

ಮೇಲ್ನೋಟಕ್ಕೆ ಇದೊಂದು ಪೂರ್ವಯೋಜಿತ ಸಂಚು ಎನ್ನುವುದು ಕಂಡು ಬರುತ್ತದೆ. ಈ ಸಂಚಿನಲ್ಲಿ ಮಾಧ್ಯಮದೊಳಗಿರುವ ಕೆಲವು ಶಕ್ತಿಗಳು, ಪೊಲೀಸ್ ಇಲಾಖೆ ಮತ್ತು ಸಂಘಪರಿವಾರ ಜಂಟಿಯಾಗಿ ಭಾಗಿಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ವಿಮಾನ ನಿಲ್ದಾಣದ ಆವರಣದಲ್ಲಿ ಸ್ಫೋಟಕವನ್ನು ಇಡಲು ಶಂಕಿತ ಉಗ್ರನಿಗೆ ಹೇಗೆ ಸಾಧ್ಯವಾಯಿತು? ಏರ್‌ಪೋರ್ಟ್‌ನ ಒಳಗಿರುವ ಸಿಬ್ಬಂದಿಯೂ ಆರೋಪಿಗೆ ಸಹಕರಿಸಿರಬಹುದೇ? ಸ್ಫೋಟಕವನ್ನು ತಯಾರಿಸುವುದೆಂದರೆ ಅದಕ್ಕೆ ಸೂಕ್ತ ತರಬೇತಿ ಬೇಕಾಗುತ್ತದೆ. ಈಗಾಗಲೇ ಗೌರಿ ಹಂತಕರು ದಕ್ಷಿಣ ಕನ್ನಡದಲ್ಲಿ ತರಬೇತಿ ಪಡೆದಿರುವುದು ಬೆಳಕಿಗೆ ಬಂದಿದೆ. ಗೌರಿ, ಕಲಬುರ್ಗಿ ಹತ್ಯೆಯಲ್ಲೂ ಈತನ ಪಾತ್ರವಿರಬಹುದೇ? ಈ ಸ್ಫೋಟಕಗಳನ್ನು ತಯಾರಿಸಲು ಈತ ಎಲ್ಲಿಂದ ತರಬೇತಿ ಪಡೆದ? ಈತನಿಗೆ ಸಂಘಪರಿವಾರದ ಜೊತೆಗಿರುವ ನಂಟೇನು? ಹಾಗೆಯೇ ಒಂದು ಅಣಕು ಪ್ರದರ್ಶನದಂತೆ, ಸ್ಫೋಟಕ ನಾಶದ ಕಾರ್ಯಾಚರಣೆಯನ್ನು ಇಡೀ ದಿನ ಪ್ರದರ್ಶಿಸಿದ ಪೊಲೀಸ್ ಇಲಾಖೆಯೂ ಮಾಧ್ಯಮಗಳ ಅತಿರಂಜಿತ ವರದಿಗಳ ಬಗ್ಗೆ ಜಾಣ ವೌನವಾಗಿ ಅದನ್ನು ಸಮರ್ಥಿಸಿತು.

ಪೌರತ್ವ ಪ್ರತಿಭಟನೆಯನ್ನು ಮಟ್ಟ ಹಾಕುವುದಕ್ಕಾಗಿಯೇ ವ್ಯವಸ್ಥಿತವಾಗಿ ಈ ಪ್ರಕರಣವೊಂದನ್ನು ರೂಪಿಸಲಾಗಿತ್ತೇ? ಮಂಗಳೂರಿನಲ್ಲಿದ್ದ ಆದಿತ್ಯ ರಾವ್ ಏಕಾಏಕಿ ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದು ಹೇಗೆ? ಆತನನ್ನು ಅಲ್ಲಿಗೆ ತಲುಪಿಸಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಸಿಗಬೇಕಾದರೆ ಗಂಭೀರ ತನಿಖೆಯೊಂದರ ಅಗತ್ಯವಿದೆ. ಮಂಗಳೂರು ಮಾತ್ರವಲ್ಲ, ಈ ನಾಡಿನ ಆಂತರಿಕ ಭದ್ರತೆ ಸುಭದ್ರವಾಗಿರಬೇಕಾದರೆ ಆದಿತ್ಯ ರಾವ್‌ನ ಹಿಂದಿರುವ ಉಗ್ರವಾದಿ ಪ್ರಾಯೋಜಕರು ಬೆಳಕಿಗೆ ಬರಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News