ಸೋಷಿಯಲ್ ಆರ್ಗನೈಸೇಶನ್ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರ

Update: 2020-01-22 19:23 GMT

ಮಂಗಳೂರು : ಸೋಷಿಯಲ್ ಆರ್ಗನೈಸೇಶನ್ ಆಫ್ ಇಂಡಿಯಾ ಪ್ರಸ್ತುತ ಪಡಿಸಿದ ಬಿಸಿಸಿಐ ಯುಎಇ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಯೋಗದೊಂದಿಗೆ ಬರಹಗಾರರು ಹಾಗೂ ಸಮಾಜ ಸೇವಕರ ಸ್ನೇಹ ಸಮ್ಮಿಲನ ಕಾರ್ಯಕ್ರಮವು  ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಜುಬಿಲಿ ಮಿನಿ ಹಾಲ್‌ನಲ್ಲಿ ಮಂಗಳವಾರ ನಡೆಯಿತು.

ಸ್ನೇಹ ಸಮ್ಮಿಲನ ಕಾರ್ಯಕ್ರಮದ ಜೊತೆಗೆ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ, ರಕ್ತದಾನದ ಮಹತ್ವದ ಬಗ್ಗೆ ಅರಿಯುವ ಮೂಡಿಸುವ ಕಿರು ಚಿತ್ರ ಪ್ರದರ್ಶನ ಮತ್ತು ಸಂಸ್ಥೆಯು ಆಯೋಜಿಸಿದ ನೂರು ರಕ್ತದಾನ ಶಿಬಿರಗಳ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಸೋಷಿಯಲ್ ಆರ್ಗನೈಸೇಶನ್ ಆಫ್ ಇಂಡಿಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಸಲಾಂ ಸಮ್ಮಿ  ಸ್ವಾಗತಿಸಿ, ಮಾತನಾಡಿ ''ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಯುವ ಬರಹಗಾರರು ತಮ್ಮ ಮೌಲ್ಯವನ್ನು ಅರಿತುಕೊಳ್ಳಬೇಕು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಬೇಕು" ಎನ್ನುತ್ತಾ ಪತ್ರಿಕೋದ್ಯಮದಲ್ಲಿ ಕಲಿಯಲು ಆಸಕ್ತರಿರುವ ಬಡ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ತಿಳಿಸಿದರು.‌

 ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು‌.ಎಚ್ ಮಾತನಾಡಿ "ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿ‌ಆರ್ ಬಗ್ಗೆ ಮುಸ್ಲಿಂ ಬರಹಗಾರರು ಇನ್ನಷ್ಟು ಅಧ್ಯಯನ ನಡೆಸಿ ಜನರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು. ಸಿಎಎ ಪರವಾಗಿರುವವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ.‌ ಇದನ್ನು ತಲುಪಿಸುವ ಜವಾಬ್ದಾರಿ ಬರಹಗಾರರದ್ದಾಗಬೇಕು" ಎಂದರು.

ಲೇಖಕ ಹಾಗೂ ಸಾಮಾಜಿಕ ಹೋರಾಟಗಾರಾದ ಇಸ್ಮತ್ ಪಜೀರ್ ಮಾತನಾಡಿ, ಪವಿತ್ರ ಕುರ್‌ಆನ್‌ಕ್ಕಿಂತ ದೊಡ್ಡದಾದ ಕ್ರಾಂತಿಕಾರಿ ಮಾಧ್ಯಮ ಇನ್ನೊಂದಿಲ್ಲ.‌ ಹಾಗೆಯೇ ಹಲವಾರು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿರುವ ಬರಹಗಾರರಿಗೆ ಅದರ ಮೌಲ್ಯದ ಬಗ್ಗೆ ಹೇಳಿದರು. ಸಮುದಾಯದಲ್ಲಿ ಮಾಧ್ಯಮವಿದ್ದರೂ ಅದನ್ನು ಬೆಳೆಸುವ ಕೆಲಸಕ್ಕೆ ಹೆಚ್ಚಿನವರು ಆಸಕ್ತಿ ತೋರುತ್ತಿಲ್ಲ.‌ ವಸ್ತುನಿಷ್ಠವಾಗಿ ಸುದ್ದಿ ಬಿತ್ತರಿಸುವ ಮಾಧ್ಯಮಗಳು ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಂದರ್ಭದಲ್ಲಿ ನಾವು ಜೊತೆ ನಿಂತು ಸಹಕರಿಸಬೇಕು ಎಂದರು.

ಹೋಪ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ಸೈಫ್ ಸುಲ್ತಾನ್ ಮಾತನಾಡಿ ಯುವ ಬರಹಗಾರರನ್ನು ಹುರಿದುಂಬಿಸಿದರು. ಬರಹಗಾರರಿಗಿರುವ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಬದಲಾವಣೆ ಸಾಧ್ಯ ಎಂದರು.‌ ಬಳಿಕ ಟಿಆರ್‌ಎಫ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಶುಭ ಹಾರೈಸಿದರು.

ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಇಮ್ತಿಯಾಝ್ ಗೋಲ್ತಮಜಲು ಹಾಗೂ ಸಿರಾಜ್ ಎರ್ಮಾಳ್  ಇವರು ಸ್ಥಳೀಯ ಕ್ರೀಡಾ ಕ್ಷೇತ್ರದಲ್ಲಿ ಮುಸ್ಲಿಂ ಯುವಕರ ಪಾತ್ರ ಮತ್ತು ಉನ್ನತ ಮಟ್ಟದ ಕ್ರೀಡೆಯಲ್ಲಿ ತೇರ್ಗಡೆ ಹೊಂದಲು ತಮ್ಮ ಸಂಸ್ಥೆಯ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರರಾದ ಮುಸ್ತಫಾ ದಮ್ಮಲೆ ಮಾತನಾಡಿ ರಕ್ತದಾನದ ಮಹತ್ವ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ಸಾಧನೆಯ ಬಗ್ಗೆ ವಿವರಣೆ ನೀಡಿದರು. ಸೋಷಿಯಲ್ ಆರ್ಗನೈಸೇಶನ್ ಆಫ್ ಇಂಡಿಯಾದ ಅಧ್ಯಕ್ಷ ಶರೀಫ್ ಅಬ್ಬಾಸ್ ವಲಾಲ್ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು.

ಯುವ ಪ್ರತಿಭೆಗಳಾದ ಲುಕ್ಮಾನ್ ಅಡ್ಯಾರ್, ಖಾಲೀದ್ ಯು.ಕೆ, ಸಫ್ವಾನ್ ಸವಣೂರು, ಇಬ್ರಾಹಿಂ ಖಲೀಲ್ ಪುತ್ತೂರು ಕವಿ ಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ನಡೆಸಿದರು. ಅಶ್ರಫ್ ಅರಬ್ಬೀ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಹಬೀಬ್ ಖಾದರ್ ಹಾಗೂ ಇಮ್ತಿಯಾಝ್ ಎಸ್‌ಎಮ್ ಉಪಸ್ಥರಿದ್ದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಜ.5ರಂದು ನೆಹರೂ ಮೈದಾನದಲ್ಲಿ ನಡೆದ ಎಸ್‌ಡ್ಲ್ಯೂ ಲೀಗ್ 2020 ಕ್ರೀಡಾ ಕೂಟದಲ್ಲಿ ವಿಜೇತರಾದ ಶೈನಿಂಗ್ ರೈಟರ್ಸ್, ರನ್ನರ್ಸ್ ಆದ ರೈಟಿಂಗ್ ಟಸ್ಕರ್ಸ್, ಮೂರನೇ ಸ್ಥಾನ ಗಳಿಸಿದ ಡಿಜೆ ಅಟ್ಯಾಕರ್ಸ್, ಮೋಸ್ಟ್ ಎಂಟರ್ಟೈನ್ಮೆಂಟ್ ಟೀಮ್ ಮೆಲೋಡಿ ಕಿಂಗ್ಸ್ ಹಾಗೂ ಫೇರ್ ಪ್ಲೇ ಟೀಮ್ ಪ್ರಶಸ್ತಿಯನ್ನು ಇಂಕ್ ವಾರಿಯರ್ಸ್‌ ತಂಡಕ್ಕೆ ನೀಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 19 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News