ಬೆಳಪು, ಮಲ್ಲಾರಿನಲ್ಲಿ ಅಕ್ರಮ ವಲಸಿಗರು ಹೇಳಿಕೆ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರ ವಿರುದ್ದ ವ್ಯಾಪಕ ಆಕ್ರೋಶ

Update: 2020-01-23 06:22 GMT

ಪಡುಬಿದ್ರೆ : ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಸುಮಾರು 2,500 ಮನೆಗಳಿದ್ದು, 4,500 ಜನಸಂಖ್ಯೆ ಹೊಂದಿದೆ. 3,541 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಬೆಳಪು ಮತ್ತು ಮಲ್ಲಾರಿನಲ್ಲಿ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿಕೆ ನೀಡಿದ್ದು, ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ನಮ್ಮ ಗ್ರಾಮದಲ್ಲಿ ಯಾರೂ ಅಕ್ರಮ ವಲಸಿಗರು ನೆಲೆಸಿಲ್ಲ. ಇಲ್ಲಿ ವಾಸಿಸುತ್ತಿರುವ ಜನರು ಬಡವರು, ಕೂಲಿ ಕಾರ್ಮಿಕರು. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಪ್ರೀತಿಸಿ ಶಾಂತಿಯಿಂದ ಜೀವನ ನಡೆಸುವ ಜನರಿದ್ದಾರೆ. ಇದೀಗ ಕೋಮು ಪ್ರಚೋದನೆ ಮಾಡಿ ಇಲ್ಲಿನ ಸ್ವಾಸ್ಥ ಹಾಳು ಮಾಡಲು ಅವಕಾಶ ನೀಡುವುದಿಲ್ಲ. ಮಟ್ಟಾರು ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾಗಿದ್ದು, ಬಾಳಿಶವಾಗಿದೆ. ಇಲ್ಲಿನ ಶಾಂತಿ ಕದಡುವ ಯಾವುದೇ ಪ್ರಯತ್ನ ಫಲಿಸದು ಎಂದು ಶೆಟ್ಟಿ ಹೇಳಿದ್ದಾರೆ.

ನನಗೀಗ 35 ವರ್ಷ ಇಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಅಕ್ಕಪಕ್ಕದ ಊರಿನವರು ಬಿಟ್ಟರೆ ಬೇರೆ ದೇಶದಿಂದ ಯಾರೂ ಬಂದು ವಾಸಿಸಿಲ್ಲ. ದಯವಿಟ್ಟು ನಮ್ಮ ಊರಿನ ಬಗ್ಗೆ ಅಪಪ್ರಚಾರ ಮಾಡಬೇಡಿ. ನಾವು ಉತ್ತಮ ಬಾಂಧವ್ಯದಿಂದ ಜೀವಿಸುತ್ತಿ ದ್ದೇವೆ ಎಂದು ಬೆಳಪುವಿನ ಸಂಪತ್ ಸೋನ್ಸ್ ಎಂಬವರು ತಿಳಿಸಿದ್ದಾರೆ.

ನಾನು ಬಾಲ್ಯದಿಂದಲೇ ಇಲ್ಲಿ ಜೀವಿಸುತ್ತಿದ್ದೇನೆ. ನನ್ನ ಅಕ್ಕಪಕ್ಕದಲ್ಲಿ ಮುಸ್ಲಿಮ್ ಮನೆಗಳೇ ಇವೆ. ಎಲ್ಲರೂ ನನ್ನೊಂದಿಗೆ ಅನ್ಯೋನ್ಯವಾಗಿದ್ದಾರೆ. ಯಾರೂ ಕೂಡಾ ಬೇರೆ ದೇಶದಿಂದ ಬಂದು ವಾಸಿಸಿಲ್ಲ. ಇದೊಂದು ಅಪಪ್ರಚಾರವಾಗಿದೆ ಎನ್ನುತ್ತಾರೆ 45 ವರ್ಷ ಪ್ರಾಯದ ರತ್ನಾ.

ಗ್ರಾಪಂ ಸದಸ್ಯೆ ನೂರ್‌ಜಹಾನ್ ಮಾತನಾಡಿ, ಇಲ್ಲಿ ಅಕ್ರಮವಾಗಿ ಬಂದು ಯಾರೂ ನೆಲೆಸಿಲ್ಲ. ಮಟ್ಟಾರು ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇಲ್ಲಿನ ಜನರು ಹೆಚ್ಚಾಗಿ ಬಡವರಾಗಿದ್ದು, ಸರಕಾರಿ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಎಲ್ಲರೂ ಅನ್ಯೋನ್ಯವಾಗಿ ಇದ್ದಾರೆ ಎನ್ನುತ್ತಾರೆ.

ಬೆಳಪು ಗ್ರಾಮ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದ್ದು, ಅಭಿವೃದ್ಧಿ ಹೊಂದುತ್ತಿದೆ. ಅಲ್ಲದೆ ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರ ಅಲ್ಲದೆ ಕೈಗಾರಿಕಾ ಕೇಂದ್ರಗಳಾಗಿ ಬೆಳಪು ಬೆಳೆಯುತ್ತಿದೆ. ಇದನ್ನು ಸಹಿಸದೆ ಇಂತಹ ಹೇಳಿಕೆ ನೀಡಿ ಬೆಳಪುವಿಗೆ ಕಪ್ಪು ಚುಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ಶೇಕ್ ಮುಹಮ್ಮದ್ ಸ್ವಾಲಿಹ್ ಹೇಳಿದ್ದಾರೆ.

ಬಹಿರಂಗ ಕ್ಷಮೆಯಾಚನೆಗೆ ಆಗ್ರಹ

ಗ್ರಾಮದ ಸ್ವಾಸ್ಥ ಕೆಡಿಸುವಂತಹ ಹೇಳಿಕೆ ನೀಡಿರುವ ಮಟ್ಟಾರು ರತ್ನಾಕರ ಹೆಗ್ಡೆ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರ ಮನೆ ಮುಂದೆ ಬೆಳಪುವಿನ ಎಲ್ಲ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ.

ಪ್ರತಿಭಟನೆ: ಮಟ್ಟಾರು ರತ್ನಾಕರ ಹೆಗ್ಡೆ ಹೇಳಿಕೆಯನ್ನು ಖಂಡಿಸಿ ಮಂಗಳವಾರ ಸಂಜೆ ಬೆಳಪು ವೃತ್ತದ ಬಳಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಆಧಾರ ರಹಿತ ಇಂತಹ ಹೇಳಿಕೆ ನೀಡಿದ ಮುಖಂಡರು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News