ದೇಶದ ಭದ್ರತೆಗೆ ಸವಾಲೊಡ್ಡಿದ್ದ ಶಂಕಿತ ಉಗ್ರ ಆದಿತ್ಯ ರಾವ್ : ಡಾ. ಪಿ.ಎಸ್.ಹರ್ಷ

Update: 2020-01-23 10:29 GMT

ಮಂಗಳೂರು, ಜ. 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ (37) ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿದ್ದ. ಆತನ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿ, ವಿಚಾರಣೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕಿತ ಉಗ್ರನು ಬಳಕೆ ಮಾಡಿರುವುದು ಸುಧಾರಿತ ಸ್ಫೋಟಕವೇ ಆಗಿದೆ. ಇಂಟರ್‌ನೆಟ್‌ನಲ್ಲಿ ಮಾಹಿತಿ ಪಡೆದು ಸ್ಫೋಟಕ ಜೋಡಣೆ ಮಾಡಿದ್ದಾಗಿ ಸ್ವಇಚ್ಛಾ ಹೇಳಿಕೆ ನೀಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

ಬೆಂಗಳೂರಿನಿಂದ ಆರೋಪಿಯನ್ನು ಮಂಗಳೂರಿಗೆ ಬುಧವಾರ ರಾತ್ರಿ 9:30ಕ್ಕೆ ಕರೆತರಲಾಗಿತ್ತು. ಬಳಿಕ ತನಿಖಾ ತಂಡ ಆತನನ್ನು ಪ್ರಶ್ನಿಸಿ ಮಾಹಿತಿ ಕಲೆ ಹಾಕಿದೆ. ತೆರೆದ ಮಾರುಕಟ್ಟೆಯಲ್ಲಿ ಸ್ಫೋಟಕ ಖರೀದಿಸಿದರೆ ಸಿಕ್ಕಿಬೀಳುವ ಭಯದಿಂದ ಆನ್‌ಲೈನ್ ಮೂಲಕ ಸ್ಫೋಟಕಗಳ ಬಿಡಿಭಾಗಗಳನ್ನು ತರಿಸಿದ್ದ. ಬಳಿಕ ಇಂಟರ್‌ನೆಟ್ ಮೂಲಕವೇ ಅವುಗಳನ್ನು ಜೋಡಿಸುವುದನ್ನು ಕಲಿತು ಅದರಂತೆ ಸ್ಫೋಟಕ ಸಿದ್ಧತೆ ಮಾಡಿದ್ದ ಎಂದು ಅವರು ಹೇಳಿದರು.

ಮಂಗಳೂರು, ಕಾರ್ಕಳದಲ್ಲಿ ಸ್ಫೋಟಕ ಸಿದ್ಧತೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಡುವ ಉದ್ದೇಶದಿಂದಲೇ ನಗರದ ಬಲ್ಮಠದ ಹೊಟೇಲ್‌ಗೆ ಕೆಲಸಕ್ಕೆ ಸೇರಿದ್ದ. ವಾರದ ರಜೆಯ ಸಮಯದಲ್ಲಿ ಸ್ಫೋಟಕ ಜೋಡಣೆಯ ಕೆಲಸದಲ್ಲೇ ಮುಳುಗಿರುತ್ತಿದ್ದ. ಬಾಂಬ್ ಜೋಡಣೆಯ ಕೆಲಸ ಒಂದು ಹಂತಕ್ಕೆ ತಲುಪಿದಾಗ ಮಂಗಳೂರಿನ ಕೆಲಸ ಬಿಟ್ಟು ಕಾರ್ಕಳಕ್ಕೆ ತೆರಳಿ ಅಲ್ಲಿನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದನು. ಅಲ್ಲಿ ಅಂತಿಮ ಹಂತದ ಜೋಡಣೆಯ ಕೆಲಸ ಮುಂದುವರಿಸಿದ್ದ. ಎಲ್ಲ ಭಾಗಗಳ ಜೋಡಿಸುವಿಕೆಯ ನಂತರ ಜ.19ರಂದು ಸ್ಫೋಟಕ ಸಿದ್ಧ ಮಾಡಿದ್ದ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದರು.

ಜ.20ರಂದು ಬೆಳಗ್ಗೆ ಕಾರ್ಕಳದಿಂದ ಮಂಗಳೂರು ಸ್ಟೇಟ್‌ಬ್ಯಾಂಕ್ ನಿಲ್ದಾಣಕ್ಕೆ ಬಸ್ ಮೂಲಕ ಬಂದು, ಅಲ್ಲಿಂದ ಖಾಸಗಿ ಬಸ್ ಮೂಲಕವೇ ಕೆಂಜಾರು ತಲುಪಿದ್ದ. ಈ ಸಂದರ್ಭ ಆತನ ಬಳಿ ದೊಡ್ಡದಾದ ಬ್ಯಾಗ್‌ವೊಂದು ಇತ್ತು. ಸ್ಫೋಟಕ ತುಂಬಿದ ಲ್ಯಾಪ್‌ಟಾಪ್ ಬ್ಯಾಗ್‌ನ್ನು ಈ ದೊಡ್ಡ ಬ್ಯಾಗ್‌ನಲ್ಲಿ ಇರಿಸಿದ್ದ. ಕೆಂಜಾರು ಬಸ್ ನಿಲ್ದಾಣದ ಪಕ್ಕದಲ್ಲಿರುವ ಸೆಲೂನ್‌ನ ಹೊರಗೆ ದೊಡ್ಡ ಬ್ಯಾಗ್ ಇಟ್ಟು, ಅದರಲ್ಲಿದ್ದ ಸ್ಫೋಟಕ ಬ್ಯಾಗ್‌ನೊಂದಿಗೆ ರಿಕ್ಷಾ ಹತ್ತಿ ವಿಮಾನ ನಿಲ್ದಾಣಕ್ಕೆ ಹೋಗಿ ಸ್ಫೋಟಕ ಇಟ್ಟು ರಿಕ್ಷಾದ ಮೂಲಕವೇ ಪರಾರಿಯಾಗಿದ್ದ ಎಂದರು.

ಪೂರ್ವ ಸಿದ್ಧತೆ ಮಾಡಿದ್ದ

ಸ್ಫೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ ವಿಮಾನ ನಿಲ್ದಾಣಕ್ಕೆ 3-4 ಬಾರಿ ಹೋಗಿ ಸ್ಫೋಟಕ ಇಡುವ ಜಾಗ, ತೆರಳಬೇಕಾದ ರೀತಿ ಇತ್ಯಾದಿಗಳ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸ್ಫೋಟಕ ಇಟ್ಟ ಬಳಿಕ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿದ್ದಾಗಿ ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರಿಗೆ ಹುಸಿ ಕರೆ ಮಾಡಿ ಬೆದರಿಸಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸ್ಫೋಟಕ ಇರಿಸಿದ ಬಳಿಕ ಶಿರಸಿ, ಶಿವಮೊಗ್ಗಕ್ಕೆ ತೆರಳಿದ್ದ. ಮಾಧ್ಯಮಗಳಲ್ಲಿ ಆತನ ಚಲನವಲನದ ಸಿಸಿಟಿವಿ ಫೂಟೇಜ್ ಪ್ರಸಾರವಾಗಿದ್ದರಿಂದ ಹಾಗೂ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದ್ದರಿಂದ ಬೆಂಗಳೂರಿಗೆ ತೆರಳಿ ಶರಣಾಗಲು ತೀರ್ಮಾನಿಸಿದ್ದ. ಅದರಂತೆ ಶಿವಮೊಗ್ಗದಿಂದ ಕೆಎಸ್ಸಾರ್ಟಿಸಿ ಬಸ್ ಹತ್ತಿ ಬೆಂಗಳೂರಿಗೆ ಹೋಗಿದ್ದಾನೆ ಎಂದು ಡಾ.ಹರ್ಷ ಮಾಹಿತಿ ನೀಡಿದರು.

ಸ್ಫೋಟಕ ಬಹಿರಂಗಗೊಳಿಸಲ್ಲ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಆದಿತ್ಯ ರಾವ್ ಇಟ್ಟ ಬ್ಯಾಗ್‌ನಲ್ಲಿ ಟೈಮರ್, ಡಿಟೊನೇಟರ್ ಮತ್ತು ಸ್ಫೋಟಕವಿತ್ತು. ತಾಂತ್ರಿಕವಾಗಿ ಸುಧಾರಿತವಾದ ಸ್ಫೋಟಕ ವಸ್ತುವಾಗಿತ್ತು. ಈ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ನಿಖರವಾಗಿ ತಿಳಿಯಲಿದೆ. ಸ್ಫೋಟಕ ಯಾವುದೆಂದು ಗೊತ್ತಿದೆ, ಆದರೆ ಈಗಲೇ ಬಹಿರಂಗಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಓವರ್ ಕ್ವಾಲಿಫೈಡ್: ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪಡೆದಿದ್ದ ಆದಿತ್ಯ ರಾವ್ ಬಳಿಕ ಪ್ರತಿಷ್ಠಿತ ಸಂಸ್ಥೆಯಲ್ಲಿ ಎಂಬಿಎ ಮುಗಿಸಿದ್ದ. ಹೆಸರಾಂತ ಕಂಪೆನಿಗಳಲ್ಲಿ ಬ್ಯಾಂಕಿಂಗ್, ವಿಮೆ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಿದ್ದ. ತನ್ನ ಬುದ್ಧಿಮತ್ತೆ ತಕ್ಕುದಾಗಿ ಅವಕಾಶ ದೊರೆತಿಲ್ಲ, ಸಮಾಜದಲ್ಲಿ ಮನ್ನಣೆ ಸಿಗುತ್ತಿಲ್ಲ ಎಂಬ ಭಾವನೆ ಬಂದು ವೈಟ್ ಕಾಲರ್ ಉದ್ಯೋಗ ಬಿಟ್ಟು ಸೆಕ್ಯುರಿಟಿ ಗಾರ್ಡ್, ಹೊಟೇಲ್ ಇತ್ಯಾದಿ ಬ್ಲೂ ಕಾಲರ್ ಕೆಲಸಗಳಿಗೆ ಶಿಫ್ಟ್ ಆಗಿದ್ದಾನೆ ಎಂದು ಆಯುಕ್ತರು ಹೇಳಿದರು.

ಮಂಗಳೂರು ಏರ್‌ಪೋರ್ಟ್ ಟಾರ್ಗೆಟ್

ಯಾವುದೇ ಕೆಲಸದಲ್ಲೂ ಹೆಚ್ಚು ಸಮಯ ಇರುತ್ತಿರಲಿಲ್ಲ. ಈ ಎಲ್ಲ ಅನುಭವಗಳ ಬಳಿಕ ಬೇಸತ್ತ ಆತ ಕೊನೆಗೆ ಬೆಂಗಳೂರು ಏರ್‌ಪೋರ್ಟ್‌ಗೆ 25 ಸಾವಿರ ರೂ. ವೇತನದ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಹಾಕಿದ್ದ. ಈತ ಓವರ್ ಕ್ವಾಲಿಫೈಡ್ ಆಗಿರುವ ಕುರಿತು ಅಧಿಕಾರಿಗಳು ಪ್ರಶ್ನಿಸಿದ್ದಕ್ಕೆ ಸಬೂಬು ಹೇಳಿದ್ದ. ಆದರೆ ಕಾನೂನಾತ್ಮಕವಾಗಿ ಅಫಿದಾವಿತ್ ಮಾಡಿಸಿ ತರುವಂತೆ ಏರ್‌ಪೋರ್ಟ್ ಅಧಿಕಾರಿಗಳು ಹೇಳಿದಂತೆ ಮಣಿಪಾಲಕ್ಕೆ ಬಂದು ವಕೀಲರ ಬಳಿ ಅಫಿದಾವಿತ್ ಮಾಡಿಸಿ ಬೆಂಗಳೂರಿಗೆ ತೆರಳಿದ್ದ. ಆಗ ಆ ಕೆಲಸ ಬೇರೆಯವರ ಪಾಲಾಗಿತ್ತು. ವಿಮಾನ ನಿಲ್ದಾಣಕ್ಕೆ ತೊಂದರೆ ಮಾಡಲು ಈ ಸಂದರ್ಭ ಆತ ನಿಶ್ಚಯಿಸಿದ್ದ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಮಂಗಳೂರು ವಿಮಾನ ನಿಲ್ದಾಣವನ್ನು ತನ್ನ ಕೃತ್ಯಕ್ಕೆ ಆಯ್ಕೆ ಮಾಡಿಕೊಂಡ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ದುಷ್ಕೃತ್ಯದಲ್ಲಿ ಒಬ್ಬನೇ ಭಾಗಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸಂಗ್ರಹಿಸಿದ ಎಲ್ಲ ಮಾಹಿತಿಯ ಪ್ರಕಾರ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಕೃತ್ಯದಲ್ಲಿ ಶಂಕಿತ ಉಗ್ರ ಆದಿತ್ಯ ರಾವ್ ಒಬ್ಬನೇ ಭಾಗಿಯಾಗಿರುವುದು ತಿಳಿದುಬಂದಿದೆ. ತನಿಖೆ ಇನ್ನೂ ಮುಂದುವರಿಯಲಿದೆ. ಇನ್ನೂ ಯಾರಾದರೂ ಭಾಗಿಯಾಗಿದ್ದರೆ ಮುಂದಿನ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಕಮಿಷನರ್ ಹರ್ಷ ಹೇಳಿದರು.

ಜೈಲಿನಲ್ಲೇ ನಕ್ಷೆ ರೂಪಿಸಿದ್ದ ಶಂಕಿತ ಉಗ್ರ

ಬೆಂಗಳೂರು ಏರ್‌ಪೋರ್ಟ್, ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆಯ 3 ಕೇಸ್‌ಗಳಲ್ಲಿ ಆತ ಜೈಲುಶಿಕ್ಷೆಗೆ ಒಳಗಾಗಿ ಸುಮಾರು 1 ವರ್ಷದ ವರೆಗೆ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಜೈಲಿನಲ್ಲಿದ್ದಾಗ ಅಂತರ್ಮುಖಿಯಾಗಿ ಇನ್ನೂ ದೊಡ್ಡ ಸ್ಕೆಚ್ ಹಾಕುವ ಯೋಜನೆಯಲ್ಲಿದ್ದ. ಅಲ್ಲಿಂದ ಹೊರಬಂದ ಬಳಿಕ ಬೇರೆ ಬೇರೆ ಕಡೆ ಓಡಾಡಿಕೊಂಡಿದ್ದ ಆದಿತ್ಯ ರಾವ್, ಬಾಂಬ್ ತಯಾರಿಯ ಕುರಿತು ಇಂಟರ್‌ನೆಟ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತಲೇ ಇದ್ದ. ಕೊನೆಗೆ ಮಂಗಳೂರು ಏರ್‌ಪೋರ್ಟ್‌ನ್ನು ಆಯ್ಕೆ ಮಾಡಿದ ಬಳಿಕವೇ ಕೆಲಸ ಹುಡುಕಿ ಮಂಗಳೂರಿಗೆ ಬಂದಿದ್ದ ಎಂದು ಹೇಳಿದರು.

ಬ್ಯಾಗ್ ಸ್ಫೋಟದಲ್ಲಿ ಪೊಲೀಸರ ಪಾತ್ರವಿಲ್ಲ: ಕಮಿಷನರ್ 

ಟೈಮರ್‌ನೊಂದಿಗೆ ಸ್ಫೋಟಕ ಸಂಪರ್ಕ ನೀಡದಿದ್ದರೂ ಇಡೀ ಬ್ಯಾಗ್‌ನ್ನು ಸ್ಫೋಟಗೊಳಿಸಿ ನಾಶಪಡಿಸಿದ ಕುರಿತು ಪ್ರತಿಕ್ರಿಯಿಸಿ, ಇದನ್ನು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಸಿಐಎಸ್‌ಎಫ್ ಜಂಟಿಯಾಗಿ ತೆಗೆದುಕೊಂಡ ನಿರ್ಧಾರ. ಇದರಲ್ಲಿ ಪೊಲೀಸ್ ಇಲಾಖೆ ಪಾತ್ರವಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸ್ಪಷ್ಟಪಡಿಸಿದ್ದಾರೆ.

ಸ್ಫೋಟಕ ಇಟ್ಟು ವ್ಯವಸ್ಥಿತವಾಗಿ ಬೆಂಗಳೂರಿಗೆ ಹೋಗಿ ಶರಣಾಗಿದ್ದ ಆದಿತ್ಯ ರಾವ್ ‘ಮೆಂಟಲ್ ಆಗಿದ್ದನೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್ ಹರ್ಷ, ‘ಇದು ದೇಶದ ಆಂತರಿಕ ಭದ್ರತೆಗೆ ಆತಂಕ ತರುವ ಅತಿದೊಡ್ಡ ಆರೋಪ. ಅದರ ನಂತರ ಬೇರೆ ಯಾವುದೇ ವ್ಯಾಖ್ಯಾನ ಮಾಡಲ್ಲ’ ಎಂದು ಹೇಳಿದರು.

ಸ್ಫೋಟಕದ ಆಳ ಅಧ್ಯಯನ

ಪ್ರಕರಣದ ಆರೋಪಿ ಆದಿತ್ಯ ರಾವ್ ತಾಂತ್ರಿಕವಾಗಿ ವಿದ್ಯಾವಂತನಾಗಿರುವುದರಿಂದ ಇಂಟರ್‌ನೆಟ್‌ನಲ್ಲಿ ಸ್ಫೋಟಕಗಳ ಕುರಿತು ಆಳ ಅಧ್ಯಯನ ನಡೆಸಿದ್ದ. ವಿವಿಧ ಬಗೆಯ ಸ್ಫೋಟಕಗಳ ಬಗ್ಗೆಯೂ ಆತ ಉತ್ತಮ ಮಾಹಿತಿ ಹೊಂದಿರುವುದು ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಎರಡು ಪ್ರಕರಣ ದಾಖಲು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದು ಹಾಗೂ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಕುರಿತು ಹುಸಿ ಕರೆ ಮಾಡಿ ಬೆದರಿಸಿದ ಕುರಿತು ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ನಿಲ್ದಾಣದಲ್ಲಿ ಸ್ಫೋಟಕ ಇಟ್ಟ ಕೃತ್ಯಕ್ಕಾಗಿ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವ ಕಾಯ್ದೆ 1967ರ ಸೆಕ್ಷನ್ 10 (ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿ), 11 (ಕೃತ್ಯಕ್ಕೆ ಹಣ ಜೋಡಿಸುವಿಕೆ), 13 (ಕೃತ್ಯ ಸಮರ್ಥನೆ), 18 (ಭಯೋತ್ಪಾದನೆ), ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 5 (ಸ್ಫೋಟಕ ತಯಾರಿ), 6 (ಸ್ಫೋಟಕ ವಸ್ತು ಸಂಗ್ರಹ)ರಂತೆ ಪ್ರಕರಣ ದಾಖಲಿಸಲಾಗಿದೆ. ಹುಸಿ ಕರೆ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 307 (ಕೊಲೆಯತ್ನ), 120ಬಿ (ಸಂಚು) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News