ಅನಧಿಕೃತ ಬಿಪಿಎಲ್ ಕಾರ್ಡ್ : ಆಹಾರ ಇಲಾಖೆಗೆ ಹಾಜರುಪಡಿಸಲು ಸೂಚನೆ

Update: 2020-01-23 12:20 GMT

ಮಂಗಳೂರು, ಜ.23: ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರಕಾರವು ಮಾನದಂಡಗಳನ್ನು ನಿಗದಿಪಡಿಸಿದೆ. ಆದರೆ ಆ ಮಾನದಂಡವನ್ನು ಉಲ್ಲಂಘಿಸಿ ಅನೇಕ ಮಂದಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿದ್ದಾರೆ. ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಾಜರುಪಡಿಸುವಂತೆ ನ್ಯಾಯಬೆಲೆ ಅಂಗಡಿದಾರರ ಮೂಲಕ ತಿಳಿಸಲಾಗಿದೆ.

ಗ್ರಾಪಂ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಪಡಿಸಿದ್ದರೂ ಕೆಲವು ಪಡಿತರ ಚೀಟಿದಾರರು ಮಾತ್ರ ಬಿಪಿಎಲ್ ಪಡಿತರ ಚೀಟಿಯನ್ನು ಕಚೇರಿಗೆ ಹಾಜರುಪಡಿಸಿದ್ದಾರೆ. ಆದಾಗ್ಯೂ ಇನ್ನೂ ನಿಗದಿತ ಮಾನದಂಡಗಳ ಹೊರತಾಗಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಾಹನಗಳ ಮಾಲಕತ್ವದ ಬಗ್ಗೆ ಆರ್‌ಟಿಒ ಡಾಟಾ, ಖಾಸಗಿ/ಸರಕಾರಿ/ನಿಗಮ/ಮಂಡಳಿಗಳ ಸಿಬ್ಬಂದಿಯ ಮಾಹಿತಿಯನ್ನು ಪಡೆದು ಪಡಿತರ ಚೀಟಿಯೊಂದಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆ ಯನ್ನು ತಾಳೆ ನೋಡಲಾಗುವುದು, ಕಟ್ಟಡ/ಭೂಮಿ ವಿಸ್ತೀರ್ಣದ ವಿವರದ ಬಗ್ಗೆ ಸಂಬಂಧಪಟ್ಟ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಲಾಗುವುದು.

ಈ ಸಂದರ್ಭ ಕಂಡು ಬಂದ ಅನರ್ಹ ಪಡಿತರ ಚೀಟಿದಾರರ ವಿರುದ್ಧ ಕರ್ನಾಟಕ (ರೇಷನ್ ಕಾರ್ಡ್ ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಳ್ಳುವುದನ್ನು ತಡೆಗಟ್ಟುವುದು) ಆದೇಶ 1977ರ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಯಾರು ಅನರ್ಹ ಪಡಿತರ ಚೀಟಿ ಹೊಂದಿರುತ್ತಾರೆಯೋ ಅಂತಹವರು ಕೂಡಲೇ ಬಿಪಿಎಲ್ ಪಡಿತರ ಚೀಟಿಯನ್ನು ತಾಲೂಕು ಕಚೇರಿಗೆ ಹಾಜರು ಪಡಿಸುವಂತೆ ಮಂಗಳೂರು ತಹಶೀಲ್ದಾರರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News