​ಸಂವಿಧಾನ ಉಳಿಸಿ- ಪೌರತ್ವ ರಕ್ಷಿಸಿ ಅಭಿಯಾನ

Update: 2020-01-23 12:23 GMT

ಮಂಗಳೂರು, ಜ.23: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ದೇಶದೆಲ್ಲೆಡೆ ಸಂವಿಧಾನ ಉಳಿಸಿ ಪೌರತ್ವ ರಕ್ಷಿಸಿ ಎಂಬ ಅಭಿಯಾನವನ್ನು ಆಯೋಜಿಸ ಲಾಗಿದೆ ಎಂದು ಮಾಧ್ಯಮ ಕಾರ್ಯದರ್ಶಿ ತಫ್ಲೀಲ್ ಯು. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಅವರು, ಜ.23ರಿಂದ ಜ. 30ರರೆಗೆ ಅಭಿಯಾನ ನಡೆಯಲಿದೆ ಎಂದರು. ಅಭಿಯಾನದ ಅಂಗವಾಗಿ ಜ.26ರಂದು ಮಂಗಳೂರಿನ ಪಕ್ಷದ ಕಚೇರಿ ಎದುರು ಗಣರಾಜ್ಯೋತ್ಸವ ಧ್ವಜಾರೋಹಣದ ಬಳಿಕ ಮಾನವ ಸರಪಳಿಯನ್ನು ಆಯೋಜಿಸಲಾಗಿದೆ. ಜ. 30ರಂದು ಪುರಭವನದ ಎದುರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಒಂದು ದಿನದ ಧರಣಿ ನಡೆಸಲಾಗುವುದು ಎಂದು ಅವರು ಹೇಳಿದರು.

ಸಿಎಎ ಕಾಯ್ದೆಯು ದೇಶದ ಸಂವಿಧಾನದ ಮೂಲ ಆಶಯಕ್ಕೆ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ವಾಗಿದೆ. ಜಾತಿ ತಾರತಮ್ಯದಿಂದ ಕೂಡಿದ್ದು, ಇದು ಭಾರತದ ಜಾತ್ಯತೀತತೆಯ ಪರಂಪರೆಗೆ ಕೊನೆ ಹಾಡಲಿದೆ. ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದಂತಹ ಕರಾಳ ಕ್ರಮಗಳಿಂದ ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ನಿರೋದ್ಯೋಗ ಸಮಸ್ಯೆ ಎದುರಿಸುತ್ತಿರುವ ದೇಶದ ಜನತೆಗೆ ಇವು ಅನಗತ್ಯ ಹೆಚ್ಚುವರಿ ತೊಂದರೆ ನೀಡಲಿದೆ ಎಂದು ಅವರು ಹೇಳಿದರು.

ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಕಡೆಗಳಲ್ಲಿ ವಿಚಾರಗೋಷ್ಠಿ, ಕಾರ್ನರ್ ಸಭೆ, ಸಾರ್ವಜನಿಕ ಸಭೆ, ರ್ಯಾಲಿ, ಕ್ಯಾಂಡಲ್ ಮಾರ್ಚ್, ಮಾನವ ಸರಪಳಿ, ಬೀದಿ ನಾಟಕ, ಕರಪತ್ರ ಹಂಚಿಕೆ, ಧರಣಿ, ಪೋಸ್ಟರ್ ಅಭಿಯಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಮಂಗಳೂರು ವಲಯ ಅಧ್ಯಕ್ಷ ಮುತ್ತಲಿಬ್ ಎಸ್.ಎಂ., ಬೋಳೂರು ವಾರ್ಡ್ ಸಮಿತಿಯ ಸದಸ್ಯ ದಿವಾಕ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News