ಮೆಸ್ಕಾಂಗೆ ಆಧಾರ್ ಮಾಹಿತಿ ನೀಡದಿರಲು ಜಿಲ್ಲಾ ಭಾ.ಕಿ.ಸಂ. ತೀರ್ಮಾನ

Update: 2020-01-23 14:32 GMT

ಉಡುಪಿ, ಜ.23: ಇಂಧನ ಇಲಾಖೆಯ ನಿರ್ದೇಶನದಂತೆ 10 ಅಶ್ವಶಕ್ತಿ ವರೆಗಿನ ಪಂಪುಸೆಟ್ ಗ್ರಾಹಕರು ತಮ್ಮ ಪಂಪಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮೆಸ್ಕಾಂ ಅಧಿಕಾರಿಗಳು ರೈತರು ಒತ್ತಾಯಿಸು ತ್ತಿರುವ ಹಾಗೂ ಇವುಗಳನ್ನು ನೀಡದಿದ್ದರೆ ಪಂಪುಸೆಟ್‌ಗಳಿಗೆ ಸಿಗುವ ಸಹಾಯ ಧನವನ್ನು ತಡೆ ಹಿಡಿಯುವ ಸಾಧ್ಯತೆಯ ಕುರಿತಂತೆ ಜಿಲ್ಲೆಯ ರೈತರು ಕಳವಳ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮೆಸ್ಕಾಂನ ಈ ಕ್ರಮದ ಬಗ್ಗೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ತೀವ್ರ ಅಸಮಧಾನವನ್ನು ವ್ಯಕ್ತಪಡಿಸಿದೆ.

ಜಿಲ್ಲೆಯ ರೈತರು ಈ ಕುರಿತು ತಮ್ಮ ಅನಿಸಿಕೆಯನ್ನು ಭಾಕಿಸಂ ಸಂಘಟನೆ ಯೊಂದಿಗೆ ಹಂಚಿಕೊಂಡಿದ್ದು, ಮೆಸ್ಕಾಂಗೆ ಕೃಷಿ ಪಂಪು ಸೆಟ್ ಹೊಂದಿರುವ ರೈತರು ಆಧಾರ್ ಮಾಹಿತಿಯನ್ನು ಒದಗಿಸದಿರಲು ಹಾಗೂ ರೈತರು ಈ ದಾಖಲೆಗಳನ್ನು ನೀಡಬಾರದೆಂದು ಕರೆ ನೀಡಲು ಜಿ್ಲಾ ಸಮಿತಿಯ ಮಾಸಿಕ ಸಭೆ ನಿರ್ಧರಿಸಿದೆ.

ಕೃಷಿ ಪಂಪ್‌ಸೆಟ್‌ಗಳನ್ನು ಹೊಂದಿರುವ ರೈತರು ಮೆಸ್ಕಾಂಗೆ ಆಧಾರ್ ಸಂಖ್ಯೆ, ಅಶ್ವ ಶಕ್ತಿಯ ವಿವರ, ಕೃಷಿ ಭೂಮಿಯ ವಿವರ, ದೂರವಾಣಿ ಸಂಖ್ಯೆ ಮೊದಲಾದವುಗಳನ್ನು ನೀಡಬೇಕು ಎಂಬ ಸಂದೇಶಗಳನ್ನು ಮೆಸ್ಕಾಂ ಅಧಿಕಾರಿ ಗಳು ರೈತರಿಗೆ ಕಳುಹಿ ಸುತಿದ್ದಾರೆ. ಕೆಲವರಿಗೆ ದೂರವಾಣಿ ಮೂಲಕವೂ ಈ ವಿಷಯ ತಿಳಿಸುತಿದ್ದಾರೆ. ತಾವು ದಾಖಲೆಗಳನ್ನು ನೀಡದಿದ್ದರೆ ಪಂಪುಸೆಟ್‌ಗಳಿಗೆ ಸಿಗುವ ಸಹಾಯಧನವನ್ನು ತಡೆಹಿಡಿಯಬಹುದು ಎಂಬ ಅನುಮಾನವನ್ನೂ ಗ್ರಾಹಕರು ಸಂಘಟನೆಯೊಂದಿಗೆ ತೋಡಿಕೊಂಡಿದ್ದಾರೆ ಎಂಬ ಬಗ್ಗೆ ಭಾಕಿಸಂನ ಮಾಸಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಂಘವು ಇದಕ್ಕೆ ತಿೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿ ಮಾಸಿಕ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಆರರಿಂದ ಎಂಟು ತಿಂಗಳು ಮಳೆಗಾಲವಿದ್ದು, ರೈತರ ಪಂಪುಗಳ ಬಳಕೆಯ ಅವಧಿ ಆರು ತಿಂಗಳಿಗಿಂತ ಕಡಿಮೆಯಿರುತ್ತದೆ. ಬೇಸಿಗೆಯ ಕೊನೆಯಲ್ಲಿ ಅನೇಕ ರೈತರ ಬಾವಿಗಳಲ್ಲಿ ನೀರಿಲ್ಲದೇ ಪಂಪನ್ನು ಬಳಕೆ ಮಾಡಲಾಗದಂತಹ ಸ್ಥಿತಿಯಿದೆ. ಹಿಂದೆ ಪಂಪುಗಳಿಗೆ ಮೀಟರೀಕರಣ ಮಾಡಿ, ರೀಡಿಂಗ್ ತೆಗೆದು, ಬಿಲ್‌ಲ್ ಮಾಡುತಿದ್ದ ಸಂದರ್ಭ ದಲ್ಲಿಯೂ, ಮೆಸ್ಕಾಂ ಮೀಟರ್ ಬಳಕೆಗಿಂತ ಎರಡು ಪಟ್ಟು ಹೆಚ್ಚು ಎಸ್ಟಿಮೇಶನ್ ಆಧಾರದಲ್ಲಿ ಸರಕಾರದಿಂದ ಸಹಾಯಧನವನ್ನು ಪಡೆಯುತ್ತಿತ್ತು ಎಂಬುದಕ್ಕೆ ಮೆಸ್ಕಾಂನ ದಾಖಲೆಗಳೇ ಇವೆ ಎಂದು ಭಾಕಿಸಂನ ನಿರ್ಣಯದಲ್ಲಿ ಹೇಳಲಾಗಿದೆ.

ಆದುದರಿಂದ ನಾವು ಬಳಸದ ವಿದ್ಯುತ್‌ಗೆ ಸಹಾಯಧನವನ್ನು ಪಡೆದಿರು ವುದಾಗಿ ಒಪ್ಪಿಕೊಳ್ಳಲು ರೈತರು ತಯಾರಿಲ್ಲ. ನಮ್ಮ ಪಂಪುಗಳಿಗೆ ಮೀಟರ್ ಅಳವಡಿಸಿ, ರೀಡಿಂಗ್ ತೆಗೆದು, ಅದರ ಆಧಾರದಲ್ಲಿ ಬಿಲ್ ಮಾಡಿ, ಸರಕಾರದಿಂದ ಸಹಾಯಧನ ಪಡೆಯುವುದಾದರೆ ಮಾತ್ರ ನಾವು ಆಧಾರ ದಾಖಲೆಯನ್ನು ನೀಡಲು ತಯಾರಿದ್ದೇವೆ. ಇಲ್ಲವಾದರೆ ಉಡುಪಿ ಜಿಲ್ಲೆಯ ರೈತರು ನಮ್ಮ ಆಧಾರ ಪತ್ರದ ಪ್ರತಿಯನ್ನು ನೀಡಲು ತಯಾರಿಲ್ಲ ಎಂಬುದನ್ನು ಮೆಸ್ಕಾಂನ ಉಡುಪಿ ಜಿಲ್ಲಾ ಅಧೀಕ್ಷಕ ಇಂಜಿನಿಯರ್‌ಗೆ ತಿಳಿಸಿ, ಯಾವ ರೈತರೂ ಕೂಡ ಆಧಾರ್ ದಾಖಲೆಗಳನ್ನು ಮೆಸ್ಕಾಂಗೆ ನೀಡಬಾರದೆಂದು ಕರೆ ಕೊಡಲು ಸಂಘ ನಿರ್ಣಯ ಕೈಗೊಂಡಿದೆ.

ಅದರಂತೆ ಇಂದು ಮೆಸ್ಕಾಂನ ಉಡುಪಿಯ ಅಧೀಕ್ಷಕ ಇಂಜಿನೀಯರ್ ಅವರೊಂದಿಗೆ ಮಾತುಕತೆ ನಡೆಸಿ, ಈ ವಿಚಾರವನ್ನು ಸಂಘದ ಪದಾಧಿಕಾರಿ ಗಳು ಅವರಿಗೆ ಸ್ಪಷ್ಟ ಪಡಿಸಿದ್ದಲ್ಲದೇ ಮೆಸ್ಕಾಂ ಅಧಿಕಾರಿಗಳು ಅದನ್ನು ತಂದು ಕೊಡುವಂತೆ ಸುಮ್ಮನೆ ರೈತರಿಗೆ ತೊಂದರೆ ಕೊಡಬಾರದಾಗಿ ಕೂಡ ಕೋರಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಕೃಷಿ ಪಂಪುಗಳಿಗೆ ಅಳವಡಿಸಲಾಗಿರುವ ಮೀಟರ್‌ಗಳ ಗುಣಮಟ್ಟ ಸರಿಯಿಲ್ಲ. ಅದು ಸರಿಯಾದ ಬಳಕೆಯನ್ನು ತೋರಿಸುತ್ತಿಲ್ಲ ಎಂಬ ಕಾರಣ ನೀಡಿ, ಕೆಲವೇ ಕೆಲವು ಪ್ರಮುಖ ಕೃಷಿ ಬಳಕೆಯಿರುವ ಟ್ರಾನ್ಸ್ ಪಾರ್ಮರ್‌ಗಳಿಗೆ ಅಳವಡಿಸಿರುವ ಮೀಟರಗಳ ಬಳಕೆಯನ್ನು ಲೆಕ್ಕ ತೆಗೆದು, ಅದರ ಆದಾರದಲ್ಲಿ ರೈತರ ಬಳಕೆಯನ್ನು ಮೆಸ್ಕಾಂ ಲೆಕ್ಕ ಹಾಕುತ್ತಿದೆ. ಆದರೂ, ಅದರಲ್ಲಿ ಅವರು ಅಂದಾಜಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಲೈನ್ ನಷ್ಟ, ಸೋರಿಕೆ, ವಿದ್ಯುತ್ ಕಳ್ಳತನ ಎಲ್ಲವೂ ಒಳಗೊಂಡಿದ್ದು, ಅವೆಲ್ಲವನ್ನೂ ರೈತರ ಮೇಲೆ ಹಾಕಿ ಸರಕಾರದಿಂದ ಸಹಾಯಧನ ಪಡೆಯಲಾಗುತ್ತಿದೆ ಎಂದು ಭಾಕಿಸಂ ಆರೋಪಿಸಿದೆ.

ಪಂಪಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಈಗಾಗಲೇ ವಿದ್ಯುತ್ ಸಂಪರ್ಕ ನೀಡುವಾಗ ಮೆಸ್ಕಾಂ ಪಡೆದಿದ್ದು, ಅವರ ಬಳಿಯಿರುವಾಗ ಮತ್ತೆ ಪುನಃ ಕೇಳುವುದು ಎಷ್ಟು ಸರಿ ಎಂದು ಸಂಘ ಪ್ರಶ್ನಿಸಿದೆ.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಕೋಶಾಧಿಕಾರಿ ವಾಸುದೇವ ಶ್ಯಾನುಬಾಗ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ, ಜಿಲ್ಲಾ ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಪಾಂಡುರಂಗ ಹೆಗ್ಡೆ, ಸದಾನಂದ ಶೆಟ್ಟಿ, ಆಸ್ತಿಕ ಶಾಸ್ತ್ರಿ, ಕೆ.ಪಿ.ಂಡಾರಿ, ಪ್ರಾಣೇಶ ಯಡಿಯಾಳ, ಸುಂದರ ಶೆಟ್ಟಿ, ರಾಮಚಂದ್ರ ಪೈ, ವಿಶ್ವನಾಥ ಶೆಟ್ಟಿ, ಮಹಾಬಲ ಬಾಯರಿ, ವೆಂಕಟೇಶ್ ರಾವ್, ನಾಗಪ್ಪ ಶೆಟ್ಟಿ, ಭೋಜರಾಜ ಶೆಟ್ಟಿ, ಸೂರ್ಯನಾರಾಯಣ ಜೋಯಿಸ, ಶ್ರೀಕಂಠ ಯಡಿಯಾಳ, ಮುರಳೀಧರ ಉಳ್ಳೂರ, ಮಂಜುನಾಥ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News