ಜಾಮಿಯಾ, ಜೆಎನ್‌ಯು ಪ್ರತಿಭಟನೆ ನಿಲ್ಲಿಸಲು ಪಶ್ಚಿಮ ಉ.ಪ್ರ.ಕ್ಕೆ ಶೇ.10 ಮೀಸಲಾತಿ ನೀಡಿ: ಕೇಂದ್ರ ಸಚಿವ

Update: 2020-01-23 14:52 GMT

ಹೊಸದಿಲ್ಲಿ,ಜ.23: ಜೆಎನ್‌ಯು, ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ ಗಳಲ್ಲಿ ಪಶ್ಚಿಮ ಉತ್ತರಪ್ರದೇಶದವರಿಗೆ ಶೇ.10ರಷ್ಟು ಮೀಸಲಾತಿಯನ್ನು ನೀಡಿದಲ್ಲಿ, ಅಲ್ಲಿ ಯಾರೂ ಕೂಡಾ ದೇಶವಿರೋಧಿ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲ ವೆಂದು ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ.

  ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೀರತ್‌ನಲ್ಲಿ ಗುರುವಾರ ನಡೆದ ರ್ಯಾಲಿಯೊಂದರಲ್ಲಿ ಭಾಷಣ ಮಾಡಿದ ಅವರು‘‘ ಜೆಎನ್‌ಯು ಹಾಗೂ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯಗಳಲ್ಲಿ ಪಶ್ಚಿಮ ಉತ್ತರಪ್ರದೇಶದ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಮೀಸಲಾತಿ ನೀಡಬೇಕೆಂದು ರಾಜನಾಥ್‌ಜೀ ಅವರನ್ನು ಕೋರುತ್ತೇನೆ. ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗುವವರನ್ನು ಪಶ್ಚಿಮ ಉತ್ತರಪ್ರದೇಶದ ವಿದ್ಯಾರ್ಥಿಗಳು ಒಂದೇ ಬಾರಿಗೆ ಗುಣಪಡಿಸಬಲ್ಲರು’’ ಎಂದವರು ಹೇಳಿದರು.

 ಪೌರತ್ವ ವಿರೋಧಿ ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಪಶ್ಚಿಮ ಉತ್ತರಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿರುವುದಾಗಿ ಸಚಿವ ಬಲ್ಯಾನ್ ಆಪಾದಿಸಿದರು.

 ‘‘ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಸುವವರು ಎಲ್ಲಿಂದ ಬಂದಿದ್ದಾರೆ? ಅವರು ಯಾಕೆ ಬೀದಿಗಿಳಿದಿದ್ದಾರೆ? ’’ ಎಂದು ಬಲ್ಯಾನ್ ವ್ಯಂಗ್ಯವಾಡಿದರು.

 ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎಂಬುದು ಪೌರತ್ವವನ್ನು ನೀಡುವುದೇ ಹೊರತು ಕಿತ್ತುಕೊಳ್ಳುವುದಲ್ಲ ಎಂದವರು ಹೇಳಿದರು. ಜಾಮಿಯಾ ಹಾಗೂ ಜೆಎನ್‌ಯುಗೆ ಹೋಲಿಸಿದರೆ, ಮೀರತ್ ಕಾಲೇಜ್‌ಗಳ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಸಿಎಎ ಅನ್ನು ಬೆಂಬಲಿಸಿದ್ದಾರೆಂದು ಬಲ್ಯಾನ್ ತಿಳಿಸಿದರು.

 ವಿವಾದಾತ್ಮಕ ರಾಜಕಾರಣಿಯೆನಿಸಿರುವ ಬಲ್ಯಾನ್, 2013ರ ಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಮುಝಫ್ಫರ್‌ನಗರ ಗಲಭೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News