ಪ್ರತಿ ಸ್ಥಳವೂ ಶಾಹೀನ್‌ಭಾಗ್ ಆಗಲಿದೆ: ನಟಿ ನಂದಿತಾದಾಸ್

Update: 2020-01-23 15:02 GMT
ಫೈಲ್ ಚಿತ್ರ

ಜೈಪುರ,ಜ.23: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ವಿರುದ್ಧ ನಿರಂತರ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಕೆಚ್ಚು ಹಾಗೂ ಪರಿಶ್ರಮವನ್ನು ಶ್ಲಾಘಿಸಿದ ಖ್ಯಾತ ನಟಿ ನಂದಿತಾದಾಸ್ ಅವರು, ಮುಂಬರುವ ದಿನಗಳಲ್ಲಿ ದೇಶದ ಹಲವು ಸ್ಥಳಗಳು ಶಾಹೀನ್‌ಬಾಗ್ ಆಗಲಿವೆಯೆಂದರು.

 ಪೌರತ್ವ ತಿದ್ದುಪಡಿ ವಿರೋಧಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಜನರು ಧ್ವನಿಯೆತ್ತುವಂತೆ ಅವರು ಕರೆ ನೀಡಿದ್ದಾರೆ.

 ಜೈಪುರ ಸಾಹಿತ್ಯ ಉತ್ಸವದ ನೇಪಥ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ಇಲ್ಲಿ ತಲೆತಲಾಂತರಗಳಿಂದ ವಾಸವಾಗಿದ್ದವರು ಭಾರತೀಯರೆಂದು ಸಾಬೀತುಪಡಿಸುವಂತೆ ಅವರು (ಕೇಂದ್ರ ಸರಕಾರ) ಕೇಳುತ್ತಿದ್ದಾರೆ. ಇದು ತುಂಬಾ ವಿಷಾದನೀಯ. ಈ ಬಗ್ಗೆ ಪ್ರತಿಯೊಬ್ಬರು ಧ್ವನಿಯೆತ್ತಬೇಕಾಗಿದೆ’’ ಎಂದರು.

ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಸ್ವಾಭಾವಿಕವಾಗಿದ್ದು, ಯಾವುದೇ ರಾಜಕೀಯ ಪಕ್ಷಗಳು ಅದರಲ್ಲಿ ಪಾಲ್ಗೊಂಡಿಲ್ಲವೆಂದು ನಂದಿತಾ ದಾಸ್ ತಿಳಿಸಿದ್ದಾರೆ.

 ‘‘ ಈ ಪ್ರತಿಭಟನೆಗಳ ನೇತೃತ್ವವನ್ನು ವಿದ್ಯಾರ್ಥಿಗಳು ಹಾಗೂ ಶ್ರೀಸಾಮಾನ್ಯರು ವಹಿಸಿದ್ದಾರೆ. ಯುವಜನತೆ ಈ ದೇಶದಲ್ಲಿ ಭರವಸೆಯನ್ನು ಸೃಷ್ಟಿಸಿದ್ದಾರೆ. ಈಗ ಪ್ರತಿಯೊಂದು ಸ್ಥಳವೂ ಶಾಹೀನ್ ಬಾಗ್ ಆಗುತ್ತಿದೆ. ಮಾನವರಾಗಿ ನಾವು ಈ ಕಾನೂನುಗಳ ವಿರುದ್ಧ ಧ್ವನಿಯೆತ್ತಬೇಕಾಗಿದೆ’’ಯೆಂದು ನಂದಿತಾ ದಾಸ್ ಹೇಳಿದರು.

ಅರ್ಥಿಕ ಹಿಂಜರಿತ, ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ,ಇದೀಗ ಸಿಎಎ ಹಾಗೂ ಎನ್‌ಆರ್‌ಸಿ ವಿವಾದದ ಮೂಲಕ ಜಗತ್ತಿನಾದ್ಯಂತ ಭಾರತವು ಚರ್ಚಾವಿಷಯವಾಗಿ ಬಿಟ್ಟಿದೆ ಎಂದು ನಂದಿತಾ ನೋವು ವ್ಯಕ್ತಪಡಿಸಿದರು. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತಿದೆ.ಕಳೆದ 50 ವರ್ಷಗಳಲ್ಲಿ ಕಂಡಿರದಂತಹ ನಿರುದ್ಯೋಗವು ಭಾರತದಲ್ಲಿ ಈಗ ತಾಂಡವವಾಡುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.

 ಆದಾಗ್ಯೂ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಜನಸಾಮಾನ್ಯ ಹಾಗೂ ಚಿತ್ರರಂಗದ ಮಂದಿ ಬಲವಾಗಿ ಧ್ವನಿಯೆತ್ತಿರುವುದು ಮಹತ್ವದ ಸಂಗತಿ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News