ಎನ್‌ಪಿಆರ್, ಎನ್‌ಆರ್‌ಸಿ ಅನುಷ್ಠಾನಗೊಳಿಸಬೇಡಿ

Update: 2020-01-23 15:59 GMT

ಹೊಸದಿಲ್ಲಿ, ಜ. 23: ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಗೊಳಿಸದಂತೆ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದ್ದಾರೆ. ಈ ಆಗ್ರಹ ಪತ್ರಕ್ಕೆ ಸಹಿ ಹಾಕಿದವರಲ್ಲಿ ಬಾಂಗ್ಲಾದೇಶಕ್ಕಿರುವ ಮಾಜಿ ಭಾರತೀಯ ಹೈಕಮಿಷನರ್ ದೇಬ್ ಮುಖರ್ಜಿ, ವಿದ್ವಾಂಶ ಗಣೇಶ್ ದೇವ್, ಲೇಖಕಿ ಗೀತಾ ಹರಿಹರನ್, ಮಹಾತ್ಮಾ ಗಾಂಧಿ ಅವರ ಮೊಮ್ಮಗ ರಾಜ್‌ಮೋಹನ್ ಗಾಂಧಿ, ಶಿಕ್ಷಣ ತಜ್ಞರಾದ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ನೀರಾ ಚಂದೋಕೆ ಹಾಗೂ ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್, ಹರ್ಷ ಮಂದರ್, ಪ್ರಶಾಂತ್ ಭೂಷಣ್ ಒಳಗೊಂಡಿದ್ದಾರೆ.

ಪ್ರಸ್ತಾಪಿತ ರಾಷ್ಟ್ರವ್ಯಾಪಿ ಪೌರತ್ವ ಪರೀಕ್ಷೆಯನ್ನು ಪ್ರಜೆಗಳು ಮಾತ್ರ ಬಹಿಷ್ಕರಿಸಿದರೆ ಸಾಕಾಗುವುದಿಲ್ಲ. ನಾಗರಿಕ ಅಸಹಕಾರದ ಸಮಷ್ಠಿ ಪ್ರಯತ್ನಕ್ಕೆ ಬಿಜೆಪಿಯೇತರ ಮುಖ್ಯಮಂತ್ರಿಗಳು ಕೈಜೋಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ದಾಖಲೆ ರಹಿತ ವಲಸಿಗರನ್ನು ಗುರುತಿಸುವ ಅಖಿಲ ಭಾರತ ರಾಷ್ಟ್ರೀಯ ನೋಂದಣಿ ರಾಷ್ಟ್ರೀಯ ಪೌರತ್ವ ನೋಂದಣಿಯ ಮೊದಲ ಹೆಜ್ಜೆ. ಈ ವಿಭಜನೀಯ ಕಾರ್ಯಸೂಚಿಯ ಪ್ರಕ್ರಿಯೆಯನ್ನು ಸಾಕಷ್ಟ ಸಂಖ್ಯೆಯ ಬಿಜೆಪಿಯೇತರ ಸರಕಾರಗಳು ಒಪ್ಪಿಕೊಂಡರೆ ಸ್ಥಗಿತಗೊಳಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕೇರಳದ ನಿದರ್ಶನ ಅನುಸರಿಸುವಂತೆ ಹಾಗೂ ಪೌರತ್ವ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಬಿಹಾರದ ನಿತೀಶ್ ಕುಮಾರ್, ಮೇಘಾಲಯದ ಕಾನ್ರಡ್ ಸಂಗ್ಮಾ, ತಮಿಳುನಾಡಿನ ಇ.ಕೆ. ಪಳನಿಸ್ವಾಮಿಯಂತಹ ಆಡಳಿತಾರೂಢ ಪಕ್ಷಗಳ ಮಿತ್ರ ಪಕ್ಷಗಳ ನಾಯಕರು ಸೇರಿದಂತೆ 19 ಮುಖ್ಯಮತ್ರಿಗಳಲ್ಲಿ ಗಣ್ಯರು ಮನವಿ ಮಾಡಿದ್ದಾರೆ. ಈ ಕಾಯ್ದೆಯನ್ನು ಕೇಂದ್ರ ಸರಕಾರ ರದ್ದುಗೊಳಿಸದೇ ಇದ್ದರೆ, ವಜಾಗೊಳ್ಳುವ ಅಪಾಯ ಇದ್ದರೂ ಅಸಹಾಕಾರ ತೋರುವುದು ರಾಜ್ಯಗಳಿಗಿರುವ ಏಕೈಕ ದಾರಿ. ಸಂವಿಧಾನವನ್ನು ನಾಶಗೊಳಿಸುವುದನ್ನು ತಡೆಯಲು ಬೇರೆ ದಾರಿ ಇಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News