‘ನ್ಯೂಝಿಲ್ಯಾಂಡ್ ತಂಡ ಕ್ರೀಡೆಗೆ ರಾಯಭಾರಿ’

Update: 2020-01-23 18:05 GMT

ಆಕ್ಲೆಂಡ್, ಜ.23: ಭಾರತ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 18 ರನ್‌ಗಳ ಅಂತರದಿಂದ ಸೋತು ವಿಶ್ವಕಪ್‌ನಲ್ಲಿ ಅಭಿಯಾನವನ್ನು ಸೆಮಿಫೈನಲ್‌ನಲ್ಲೇ ಕೊನೆಗೊಳಿಸಿತ್ತು. ಆ ಬಳಿಕ ಮೊದಲ ಬಾರಿ ಟ್ವೆಂಟಿ-20ಯಲ್ಲಿ ಮುಖಾಮುಖಿಯಾಗಲಿವೆ. ಈ ಸೋಲಿನ ಕಾರಣಕ್ಕಾಗಿ ನಾವು ಅವರಿಗೆ ಸೇಡು ತೀರಿಸುವ ಯೋಜನೆ ನಮಗಿಲ್ಲ. ಅವರು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಚೆನ್ನಾಗಿ ಆಡಿ ಜಯ ಗಳಿಸಿದರು. ನಮಗೆ ಸಾಧ್ಯವಾಗಲಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

 ನೀವು ಸೇಡು ತೀರಿಸಿಕೊಳ್ಳಲು ಯೋಚಿಸಿದರೂ ನಿಮಗೆ ಆ ರೀತಿ ಮಾಡಲು ಸಾಧ್ಯವಿಲ್ಲ. ಅವರ ಲಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದರು.

 ನಾವು ಕಿವೀಸ್ ತಂಡವನ್ನು ಎದುರಿಸಲು ಉತ್ತಮ ತಯಾರಿ ನಡೆಸಿದ್ದೇವೆ ಮತ್ತು ನಮ್ಮಲ್ಲಿ ಸ್ಪರ್ಧೆ ಇರುವುದು ಕ್ರೀಡಾಂಗಣದಲ್ಲಿ ಅಷ್ಟೆ. ನಾನು ಇಂಗ್ಲೆಂಡ್‌ನಲ್ಲಿ ಇದನ್ನೇ ಹೇಳಿದ್ದೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಝಿಲ್ಯಾಂಡ್ ಉತ್ತಮ ತಂಡವಾಗಿದೆ.

ಕೇನ್ ವಿಲಿಯಮ್ಸನ್ ನೇತೃತ್ವದ ತಂಡದ ಸೌಹಾರ್ದಯುತ ವರ್ತನೆಯನ್ನು ಶ್ಲಾಘಿಸಿದ ಕೊಹ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಕ್ರೀಡೆಗೆ ಉತ್ತಮ ರಾಯಭಾರಿಗಳು ಎಂದು ಹೇಳಿದರು.

ವಿಲಿಯಮ್ಸನ್ ತಂಡ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿ ವಂಚಿತಗೊಂಡಿತು. ಆದರೆ ಕ್ರೀಡಾ ಸ್ಫೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಹೆಚ್ಚು ಬೌಂಡರಿ ದಾಖಲಿಸಿದ್ದರಿಂದ ಬೌಂಡರಿ ಕೌಂಟ್ ಆಧಾರದಲ್ಲಿ ವಿಶ್ವಕಪ್ ಚಾಂಪಿಯನ್‌ಪಟ್ಟವನ್ನು ತನ್ನದಾಗಿಸಿಕೊಂಡಿತು.

ಇಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸುವುದು ಒಂದು ಸವಾಲಾಗಿದೆ ಮತ್ತು ನಾವು ಅದಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಕೊಹ್ಲಿ ಹೇಳಿದರು.

  ಲೋಕೇಶ್ ರಾಹುಲ್ ಅವರು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಅಚ್ಟುಕಟ್ಟಾಗಿ ನಿಭಾಯಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News