ವಿಶ್ವ ಕಪ್‌ನಲ್ಲಿ ಒತ್ತಡ ನಿಭಾಯಿಸುವುದು ನಿರ್ಣಾಯಕ: ಹರ್ಮನ್‌ ಪ್ರೀತ್ ಕೌರ್

Update: 2020-01-23 18:14 GMT

ಮುಂಬೈ, 23: ಮುಂಬರುವ ಟ್ವೆಂಟಿ -20 ವಿಶ್ವಕಪ್‌ನಲ್ಲಿ ಒತ್ತಡವನ್ನು ನಿಭಾಯಿಸುವುದು ನಿರ್ಣಾಯಕವಾಗಿದೆ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಗುರುವಾರ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯವನ್ನು ಒಳಗೊಂಡ ಮೂರು ರಾಷ್ಟ್ರಗಳ ಸರಣಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

 ಮುಂದಿನ ತಿಂಗಳು ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿತ್ತು ಮತ್ತು ಹಿಂದಿನ ಏಕದಿನ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಮುಗ್ಗರಿಸಿ ಎರಡನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತ್ತು. ಕಳೆದ ಎರಡು ವಿಶ್ವಕಪ್‌ಗಳಲ್ಲೂ ಭಾರತ ಪ್ರಶಸ್ತಿ ಗೆಲ್ಲುವ ಹತ್ತಿರಕ್ಕೆ ಬಂದಿತ್ತು. ವಿಶ್ವಕಪ್ ಪಂದ್ಯಾವಳಿಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಕೊನೆಯ ಎರಡು ವಿಶ್ವಕಪ್‌ಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ನಮಲ್ಲಿ ಇರಲಿಲ್ಲ. ಒತ್ತಡವನ್ನು ನಿಭಾಯಿಸುವಲ್ಲಿ ಎಡವಿದ್ದೇ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.

   ‘‘ಈ ಬಾರಿ ನಾವು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವ ಬದಲು ಆನಂದಿಸಲು ಬಯಸುತ್ತೇವೆ. ಇದು ದೊಡ್ಡ ಪಂದ್ಯಾವಳಿ ಎಂದು ಭಾವಿಸುತ್ತೇವೆ. ಆದರೆ ನಾವು ಹಾಗೆ ಯೋಚಿಸುವುದನ್ನು ಬಿಡಬೇಕು ಮತ್ತು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಬೇಕುೞೞಎಂದು ಅವರು ಹೇಳಿದರು.

 ಮಹಿಳಾ ಟ್ವೆಂಟಿ-20 ವಿಶ್ವಕಪ್ ಫೆಬ್ರವರಿ 21ರಿಂದ ಮಾರ್ಚ್ 8ರವರೆಗೆ ಆಸ್ಟ್ರೇಲಿಯದಲ್ಲಿ ನಡೆಯಲಿದೆ. ಭಾರತವು ಆಸ್ಟ್ರೇಲಿಯ, ಬಾಂಗ್ಲಾದೇಶ, ನ್ಯೂರಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಗ್ರೂಪ್ ಹಂತದಲ್ಲಿ ಎದುರಿಸಲಿದೆ.

       104 ಟ್ವೆಂಟಿ -20 ಪಂದ್ಯಗಳನ್ನು ಆಡಿರುವ 30ರ ಹರೆಯದ ಹರ್ಮನ್‌ಪ್ರೀತ್ ಅವರು ತಂಡವು ಮೇಜರ್ ಟೂರ್ನಮೆಂಟ್‌ಗಳಲ್ಲಿ ಒತ್ತಡದ ಬಗ್ಗೆ ಯೋಚಿಸುವ ಬದಲು ಕೌಶಲ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

     ಅನುಭವಿ ಸ್ಮತಿ ಮಂಧಾನ ಮತ್ತು ಯುವ ಆಟಗಾರ್ತಿ ಶಫಾಲಿ ವರ್ಮಾ ಭಾರತ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ. ಹರ್ಮನ್‌ಪ್ರೀತ್ ಪ್ರಕಾರ ಈ ಜೋಡಿಯು ವಿಶ್ವಕಪ್‌ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದರು.

     ‘‘ಸ್ಮತಿ ಮತ್ತು ಶಫಾಲಿ ತಂಡದ ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ. ಅವರು ಯಾವಾಗಲೂ ಉತ್ತಮ ಕೊಡುಗೆ ನೀಡುತ್ತಾರೆ. ನಮಗೆ ಮೊದಲ ಆರು ಓವರ್‌ಗಳಲ್ಲಿ ರನ್ ಗಳಿಸುವುದು ಮುಖ್ಯವಾಗುತ್ತದೆ. ತಂಡಕ್ಕೆ ಉತ್ತಮ ಆರಂಭವು ಮುಖ್ಯವಾಗಿದೆ . ಅವರು ಉತ್ತಮ ಅಡಿಪಾಯ ಹಾಕಿಕೊಟ್ಟರೆ ನಾವು ಹಿಂತಿರುಗಿ ನೋಡುವುದಿಲ್ಲ. ಅವರಿಬ್ಬರಿಗೂ ಬಹಳ ದೊಡ್ಡ ಪಾತ್ರವಿದೆ’’ಎಂದು ಅವರು ಹೇಳಿದರು.

     ಹೊಸ ಆಟಗಾರ್ತಿಯರಾದ ಶಫಾಲಿ ಮತ್ತು 16 ಹರೆಯದ ರಿಚಾ ಘೋಷ್ ಅವರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಹರ್ಮನ್‌ಪ್ರೀತ್ ಕೌರ್ ತಮ್ಮ ನೈಜ ಆಟವನ್ನು ಆಡಲು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

 ‘‘ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ನಾವು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಿದರೆ ನಿಮ್ಮಿಂದ ಶೇಕಡಾ 100ರಷ್ಟು ನೀಡಲು ಸಾಧ್ಯ. ಕೆಲವು ಆಟಗಾರ್ತಿಯರಿದ್ದಾರೆ, ಅವರು ಒತ್ತಡವನ್ನು ತೆಗೆದುಕೊಳ್ಳಲು ಮತ್ತು ಒತ್ತಡದಲ್ಲಿ ಆಡಲು ಇಷ್ಟಪಡುತ್ತಾರೆ’’ ಎಂದು ಅವರು ಹೇಳಿದರು.

 ಹರ್ಮನ್‌ಪ್ರೀತ್ ಪ್ರದರ್ಶನ 2019ರಲ್ಲಿ ಪ್ರದರ್ಶನ ಚೆನ್ನಾಗಿರಲಿಲ್ಲ. ಆದರೆ 2020ರ ಬಗ್ಗೆ ಆಕೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ‘‘ನಾನು ಇದೀಗ ತುಂಬಾ ಸಕಾರಾತ್ಮಕ ಭಾವನೆ ಹೊಂದಿದ್ದೇನೆ ಮತ್ತು ವಿಶ್ವಕಪ್‌ನಲ್ಲಿ ನಾನು ಹೇಗೆ ಆಡುತ್ತೇನೆ ಎಂದು ನೋಡಲು ತುಂಬಾ ಉತ್ಸುಕನಾಗಿದ್ದೇನೆ. ಕಾರ್ಯಕ್ಷಮತೆಯು ಶೇಕಡಾ 100ರಷ್ಟು ಎಂದಿಗೂ ಸಂಭವಿಸುವುದಿಲ್ಲ ಏಕೆಂದರೆ ಪರಿಸ್ಥಿತಿ ಯಾವಾಗಲೂ ನಿಮ್ಮ ಪರವಾಗಿ ಇರುವುದಿಲ್ಲ ಮತ್ತು ನೀವು ಎಲ್ಲದಕ್ಕೂ ಹೊಂದಿಕೊಳ್ಳಬೇಕು’’ ಎಂದರು.

ಆದರೆ ನಾನು ನಿಜವಾಗಿಯೂ ಸಕಾರಾತ್ಮಕ ಮತ್ತು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News