10 ತಿಂಗಳಿಂದ ಸಿಕ್ಕಿಲ್ಲ ಶಿಷ್ಯವೇತನ : ವೆನ್ಲಾಕ್ ಆಸ್ಪತ್ರೆಯ ಗೃಹ ವೈದ್ಯರ ಅಸಮಾಧಾನ

Update: 2020-01-24 11:05 GMT

ಮಂಗಳೂರು, ಜ. 24: ಸಿಇಟಿ ಮೂಲಕ ಆಯ್ಕೆಗೊಂಡು ಕೆಎಂಸಿಯಲ್ಲಿ ವೈದ್ಯಕೀಯ ಪದವಿ ಪಡೆದು ವೆನ್ಲಾಕ್ ಆಸ್ಪತ್ರೆಯಲ್ಲಿ ಗೃಹ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 51ಕ್ಕೂ ಹೆಚ್ಚು ಮಂದಿ ವೈದ್ಯರಿಗೆ ಕಳೆದ 10 ತಿಂಗಳಿನಿಂದ ಶಿಷ್ಯವೇತನ ದೊರಕಿಲ್ಲ ಎಂದು 2019-2020ನೇ ಸಾಲಿನ ಇಂಟರ್ನ್‌ಶಿಪ್ ಕೌನ್ಸಿಲ್ ಅಧ್ಯಕ್ಷ ಚಿರಂತನ್ ಸುಹೃದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಷ್ಯವೇತನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಡಿ. 24ರಂದು ಲಿಖಿತ ಆದೇಶ ನೀಡಿದರೂ, ಇದುವರೆಗೆ ಸಿಎಂ ಆದೇಶ ಪಾಲನೆಯಾಗಿಲ್ಲ ಎಂದು ಅವರು ಆರೋಪಿಸಿದರು.

ಶಿಷ್ಯವೇತನ ಪಾವತಿ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ. ಅಶ್ವಥನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿ ಸೇರಿದಂತೆ ಕಳೆದ 6 ತಿಂಗಳಿನಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ನಮ್ಮ ಕಷ್ಟ ಮನವರಿಕೆ ಮಾಡಿದ್ದೇವೆ. ಎಲ್ಲರೂ ಒಪ್ಪಿಗೆ ನೀಡಿದ್ದಾರೆ ವಿನಃ ಇದುವರೆಗೆ ಶಿಷ್ಯವೇತನ ಪಾವತಿ ಮಾಡಿಲ್ಲ. ಸಿಎಂ ಯಡಿಯೂರಪ್ಪ ಅವರನ್ನು ಡಿ. 24ರಂದು ಭೇಟಿಯಾಗಿ ಮನವಿ ಸಲ್ಲಿಸಿದಾಗ ವೇತನ ಬಿಡುಗಡೆ ಮಾಡುವಂತೆ ಲಿಖಿತ ಆದೇಶ ನೀಡಿದ್ದಾರೆ. ಒಂದು ತಿಂಗಳು ಕಳೆದರೂ ಸಿಎಂ ಆದೇಶ ಪಾಲನೆಯಾಗಿಲ್ಲ ಎಂದು ಅವರು ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ಕೆಎಂಸಿ ಮತ್ತು ಸರಕಾರದ ನಡುವೆ ಆದ ಒಪ್ಪಂದದಂತೆ ನಾವು ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆ, ಕೆಎಂಸಿ ಒಪ್ಪಂದ ಮಾಡಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ದುಡಿಯುತ್ತಿದ್ದೇವೆ. ಜ.19ಕ್ಕೆ ನಮ್ಮ ಸೇವೆ 10 ತಿಂಗಳು ಕಳೆಯಿತು. ನಮಗೆ ತಿಂಗಳಿಗೆ 20 ಸಾವಿರ ರೂ. ಶಿಷ್ಯ ವೇತನ ನಿಗದಿಯಾಗಿದೆ. ತಿಂಗಳಿನಲ್ಲಿ ಎರಡು ರಜೆ ಪಡೆಯಲು ಮಾತ್ರ ಅವಕಾಶವಿದೆ. ಸರಕಾರಿ ಕೋಟಾದಡಿ ಮೆರಿಟ್ ಸೀಟ್ ಪಡೆದು ಕಷ್ಟಪಟ್ಟು ಓದಿ ಪದವಿ ಗಳಿಸಿದ ಬಳಿಕ ಮೊದಲ ವರ್ಷವೇ ಶಿಷ್ಯವೇತನ ದೊರೆಯದಿದ್ದರೆ ನಾವು ಬದುಕುವುದಾದರೂ ಹೇಗೆ? ಬಡಕುಟುಂಬದಿಂದ ಬಂದವರಿಗೆ ವೇತನ ಇಲ್ಲದೆ ಜೀವನ ಸಾಗಿಸುವುದು ಕಷ್ಟ ಸಾಧ್ಯವಾಗಿದೆ. ಈ ಆರ್ಥಿಕ ಮತ್ತು ಮಾನಸಿಕ ಹೊರೆಯನ್ನು ನಾವು ಹೇಗೆ ನಿಭಾಯಿಸುವುದು ? ಸರಕಾರ ತಕ್ಷಣ ಗಮನ ನೀಡಿ, ಶಿಷ್ಯವೇತನ ಬಿಡುಗಡೆಗೊಳಿಸಬೇಕು ಎಂದು ಚಿರಂತನ್ ಸುಹೃದ್ ಆಗ್ರಹಿಸಿದರು.

ಗೃಹವೈದ್ಯರಾದ ಶ್ರೀಲಕ್ಷ್ಮಿ, ಸಿದ್ಧಾರ್ಥ ಶಂಕರ್, ನಿಹಾಲ್, ಕುಲದೀಪ್ ಉಪಸ್ಥಿತರಿದ್ದರು.

ನಾಲ್ಕು ದಿನದಲ್ಲಿ ಪಾವತಿಸದಿದ್ದರೆ ಮುಂದಿನ ಘಟನೆಗೆ ಸರಕಾರವೇ ಹೊಣೆ !

ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆ ಶಿಷ್ಯವೇತನ ಪಾವತಿಸುತ್ತಿತ್ತು. 2019-2020ನೇ ಸಾಲಿನಿಂದ ವೆನ್ಲಾಕ್ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ (ಎಆರ್‌ಎಸ್)ನಿಧಿಯಿಂದ ಶಿಷ್ಯವೇತನ ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ರಾಜೇಶ್ವರಿದೇವಿ ಅವರಿಗೆ ಮನವಿ ನೀಡಿ, ಶಿಷ್ಯವೇತನ ಪಾವತಿಸುವಂತೆ ವಿನಂತಿಸಿದಾಗ ಎಆರ್‌ಎಸ್ ಖಾತೆಯಲ್ಲಿ ಹಣ ಇಲ್ಲ ಎಂಬ ಕಾರಣ ನೀಡಿ ಶಿಷ್ಯವೇತನ ನೀಡಿಲ್ಲ. ಆದರೆ, ಆರ್‌ಟಿಐ ಮೂಲಕ ಮಾಹಿತಿ ಪಡೆದಾಗ ಎಆರ್‌ಎಸ್ ಖಾತೆಯಲ್ಲಿ 2.75 ಕೋಟಿಗೂ ಅಧಿಕ ಉಳಿಕೆ ಮೊತ್ತ ಇರುವುದು ಬಹಿರಂಗವಾಗಿದೆ. ಮುಂದಿನ ನಾಲ್ಕು ದಿನದೊಳಗೆ ಶಿಷ್ಯವೇತನ ನೀಡದೇ ಇದ್ದರೆ ಮುಂದಿನ ಘಟನೆಗಳಿಗೆ ಸರಕಾರವೇ ಹೊಣೆಯಾಗಲಿದೆ ಎಂದು ಚಿರಂತನ್ ಸುಹೃದ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News