ಆಡಳಿತ ವ್ಯವಸ್ಥೆ ನಡೆಸಿರುವ ಪ್ರಿಪ್ಲ್ಯಾನ್ ಡ್ರಾಮಾ: ಎಸ್‌ಡಿಪಿಐ ಆರೋಪ

Update: 2020-01-24 11:22 GMT

ಉಡುಪಿ, ಜ.24: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿರುವ ಕೃತ್ಯದ ಹಿಂದೆ ಯಾವ ಭಯೋತ್ಪಾದಕ ಶಕ್ತಿಗಳಿವೆ ಹಾಗೂ ಇದರ ಸೂತ್ರಧಾರರು ಯಾರು ಮತ್ತು ಕೆಲವು ಮಾಧ್ಯಮಗಳ ಭಯೋತ್ಪದಾನ ಮನೋಭಾವವನ್ನು ತೀವ್ರ ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟ ಇಡೀ ಪ್ರಕರಣ ಕಟ್ಟುಕತೆಯಾಗಿದ್ದು, ದೊಡ್ಡ ನಾಟಕವಾಗಿದೆ. ಸ್ಫೋಟಕ ಇಟ್ಟ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಎಂಬ ಪೊಲೀಸರು ಹೇಳಿಕೆ ಬಾಲಿಷವಾಗಿದೆ. ಇದರಲ್ಲಿ ಆದಿತ್ಯ ರಾವ್ ಎಂಬ ಸಿಂಗಲ್ ಹ್ಯಾಂಡ್ ಅಲ್ಲ, ಬೇರೆ ಅವರು ಕೂಡ ಇದ್ದಾರೆ. ಈತ ಯೂಟೂಬ್ ನೋಡಿ ಬಾಂಬ್ ತಯಾರಿಸಲು ಸಾಧ್ಯವಿಲ್ಲ. ಆದುದರಿಂದ ಈತನಿಗೆ ಸ್ಫೋಟಕ ಕೊಟ್ಟು ಕಳುಹಿಸಿರುವುದು ಯಾರು ಎಂಬುದು ಬಯಲಿಗೆ ಬರಬೇಕು ಎಂದರು.

ಈ ಪ್ರಕರಣದ ಬಗ್ಗೆ ಸಾಕಷ್ಟು ಸಂಶಯಗಳಿದ್ದು, ಆಡಳಿತ ವ್ಯವಸ್ಥೆ ಮತ್ತು ಪೊಲೀಸರು ಮಾಡಿರುವ ಪೂರ್ವ ಯೋಜಿತ ನಾಟಕ ಇದಾಗಿದೆ. ಆದುದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆದಿತ್ಯ ರಾವ್‌ಗಾಗಿ ಜಾಲಾಡಿರುವ ಪೊಲೀಸರಿಗೆ ಆತನನ್ನು ಪತ್ತೆ ಮಾಡಲು ಸಾಧ್ಯವಾಗದಿರುವುದು ಮತ್ತು ಆದಿತ್ಯ ರಾವ್ ರಾತ್ರಿ ಪ್ರಯಾಣಿಸಿ ಬೆಂಗಳೂರಿನಲ್ಲಿ ಪೊಲೀಸರ ಮುಂದೆ ಶರಣಾಗಿರುವುದು ಇದೆಲ್ಲದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ವ್ಯಕ್ತವಾಗುತ್ತದೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಆರೋಪಿ ಮುಸ್ಲಿಮೇತರನಾಗಿದ್ದರೆ ಆತನನ್ನು ಮಾನಸಿಕ ಅಸ್ವಸ್ಥ ಎನ್ನುವುದು ಹಾಗೂ ಆರೋಪಿಗಳು ಯಾರು ಎಂಬುದು ತಿಳಿಯುವುದಕ್ಕಿಂತ ಮೊದಲೇ ಇಸ್ಲಾಂ ಉಗ್ರರು, ಮುಸ್ಲಿಮ್ ಭಯೋತ್ಪಾದಕರು ಎಂದು ಕೆಲ ಮಾಧ್ಯಮಗಳ ಚಾಳಿ ಸಮಾಜದ ಸ್ವಾಸ್ಥ ಸೌಹಾರ್ದತೆಗೆ ಮಾರಕ ವಾಗಿದೆ ಎಂದು ಅವರು ಟೀಕಿಸಿದರು.

ಆದಿತ್ಯ ರಾವ್‌ನನ್ನು ಮಾನಸಿಕ ಅಸ್ವಸ್ಥ ಎಂಬುದಾಗಿ ಗೃಹ ಸಚಿವರು ಘೋಷಿಸಿರುವುದರ ಹಿಂದೆ ಪೂರ್ವಯೋಜಿತ ತಂತ್ರಗಳು ಅಡಗಿವೆ. ಈ ರೀತಿ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನೈತಿಕ ಹೊಣೆ ಹೊತ್ತು ಗೃಹ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುರ್ರಹ್ಮಾನ್ ಮಲ್ಪೆ, ಪಂಡಿತ್ ಹಸೈನಾರ್ ಕಟಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News