ಆಕರ್ಷಿಸುತ್ತಿವೆ ಹೂ- ತರಕಾರಿ ಗಿಡಗಳು: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Update: 2020-01-24 15:22 GMT

ಮಂಗಳೂರು, ಜ.24: ಬಣ್ಣ ಬಣ್ಣದ, ವೈವಿಧ್ಯಮಯ ಹೂ ಹಾಗೂ ತರಕಾರಿ ಗಿಡಗಳಿಂದ ಕದ್ರಿ ಉದ್ಯಾನವನ ನೋಡುಗರನ್ನು ಆಕರ್ಷಿಸುತ್ತಿದೆ. ಮಾತ್ರವಲ್ಲದೆ, ತಾರಸಿ ತೋಟ, ಕೈತೋಟ ಸೇರಿದಂತೆ ನಗರದ ಕೃಷಿ ಪ್ರಿಯರನ್ನು ಹಣ್ಣು, ಹೂ, ತರಕಾರಿ ಗಿಡಗಳ ಖರೀದಿಗೆ ಪ್ರೇರೇಪಿಸುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೈತೋಟ ಹಾಗೂ ತಾರಸಿ ತೋಟಗಳಿಗೆ ಬೀಜ, ಹೂ, ತರಕಾರಿ ಗಿಡಗಳ ಖರೀದಿ ಭರ್ಜರಿಯಿಂದ ಸಾಗಿದೆ.

ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂ., ಜಿಲ್ಲಾಡಳಿತ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ವತಿಯಿಂದ ಸಿರಿ ತೋಟಗಾರಿಕೆ ಸಂಘದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕಾ ಉಪಸ್ಥಿತಿಯಲ್ಲಿ ಇಂದು ಚಾಲನೆ ದೊರೆಯಿತು.

ತೋಟಗಾರಿಕಾ ಇಲಾಖೆ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಕ ಹೂಗಳ ಪ್ರದರ್ಶನದ ಜತೆಗೆ ವಿವಿಧ ನರ್ಸರಿಗಳ ಹೂ, ತೋಟಗಾರಿಕಾ ಬೆಳೆಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಇಲ್ಲಿದೆ. ಬೀಜ-ಗೊಬ್ಬರ ಮಾರಾಟಗಾರರು, ಯಂತ್ರೋಪಕರಣ ಮಾರಾಟ ಮಳಿಗೆ, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರ ಮಳಿಗೆಗಳು ಪ್ರದರ್ಶನ ಸ್ಥಳದಲ್ಲಿ ಇರಲಿವೆ. ಅಣಬೆ ಮಾದರಿಗಳು, ತೋಟಗಾರಿಕೆ ಬೆಳೆಗಳಲ್ಲಿ ಕಾಣಸಿಗುವ ಕೀಟಗಳ ಮಾದರಿ, ತರಕಾರಿ ಕೆತ್ತನೆ, ಜೇನು ಸಾಕಾಣಿಕೆ ಮಾದರಿ, ಜೇನು ಕೃಷಿ ಮಾಹಿತಿ ಹಾಗೂ ಜೇನಿನ ವೌಲ್ಯವರ್ಧಿತ ಉತ್ಪನ್ನಗಳ ಮಾರಾಟವೂ ನಡೆಯುತ್ತಿದೆ.

ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ಪಾಲಕ್, ಕ್ಯಾಬೇಜ್, ಮೂಲಂಗಿ, ಕೆಂಪು ಬಸಳೆ, ಅಲಸಂಡೆ, ಬೆಂಡೆ, ಹೀರೆ, ಸೋರೆ, ಹಾಗಲಕಾಯಿ, ಕುಂಬಳಕಾಯಿ, ಪಡವಲಕಾಯಿ ಫಲ ಬಿಡುವ ಹಂತದಲ್ಲಿವೆ.

ತರಕಾರಿ- ಹೂ- ಬೀಜಗಳನ್ನು ಗುರುತಿಸುವ ಸ್ಪರ್ಧೆ

ಜ. 25ರಂದು ಮಧ್ಯಾಹ್ನ 3ರಿಂದ ಮಕ್ಕಳಿಗೆ ತರಕಾರಿ-ಹೂ-ಹಣ್ಣು-ಬೀಜಗಳನ್ನು ಗುರುತಿಸುವ ಸ್ಪರ್ಧೆ ನಡೆಯಲಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಹಾಗೂ ಅಂಗವಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ 12ರಿಂದ 15 ವರ್ಷದ ಮಕ್ಕಳಿಗೆ 10 ರೂ. ಮತ್ತು ಹಿರಿಯರಿಗೆ 20 ರೂ. ಪ್ರವೇಶ ಶುಲ್ಕವಿದೆ.

ಹಾಗಲಕಾಯಿ ಮೊಸಳೆ, ಬದನೆ ನವಿಲು!

ಹಾಗಲಕಾಯಿ ರುಚಿಯ ಬಗ್ಗೆ ಮೂಗು ಮುರಿಯುವವರೇ ಹೆಚ್ಚು. ಆದರೆ ಪ್ರದರ್ಶನಲ್ಲಿ ಕಲಾವಿದರು ಹಾಗಲಕಾಯಿಯನ್ನು ಅತ್ಯಂತ ಸುಂದರವಾಗಿ ಜೋಡಿಸಿ, ಕೆತ್ತನೆ ಮೂಲಕ ಅದಕ್ಕೆ ಮೊಸಳೆ ರೂಪವನ್ನು ನೀಡಿದ್ದಾರೆ. ಕೇವಲ ಹಾಗಲಕಾಯಿ ಮಾತ್ರವಲ್ಲ, ನೇರಳೆ ಬಣ್ಣದ ಬದನೆಕಾಯಿ, ಕ್ಯಾರೆಟ್ ಹಾಗೂ ಅಶೋಕ ಮರದ ಎಲೆಗಳನ್ನು ಬಳಸಿ ನವಿಲಿನ ರೂಪ ನೀಡಿದ್ದರೆ, ಕಲ್ಲಂಗಡಿಯಲ್ಲಿ ಹೂವುಗಳ ಚಿತ್ತಾರವನ್ನೂ ಮಾಡಿದ್ದು, ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಶಾಂತಿಯ ಸಂದೇಶ ಸಾರುತ್ತಿದೆ ಹೂವಿನ ಪಾರಿವಾಳ

ಬಣ್ಣದ ಹೂಗಳಿಂದ ಅಲಂಕೃತಗೊಂಡಿರುವ ‘ಪಾರಿವಾಳದ ಕಲಾಕೃತಿ’ ಈ ಬಾರಿಯ ಪ್ರದರ್ಶನದ ವಿಶೇಷತೆಯಾಗಿದ್ದು, ಗಲಭೆ, ಗೊಂದಲ, ಆತಂಕದ ವಾತಾವರಣದಿಂದ ತತ್ತರಿಸಿರುವ ಮಂಗಳೂರು ನಗರದ ಜನತೆಗೆ ಶಾಂತಿಯ ಸಂದೇಶವನ್ನು ಈ ಪುಷ್ಪಗಳ ಪಾರಿವಾಳವು ಹೊತ್ತು ತಂದಿದೆ!

1 ರೂ. ತರಕಾರಿ ಗಿಡ!

ತೋಟಗಾರಿಕಾ ಇಲಾಖೆಯಿಂದ ಕಳೆದ ವರ್ಷದಿಂದ ಆರಂಭಿಸಲಾಗಿರುವ 1 ರೂ.ಗೆ ತರಕಾರಿ ಗಿಡದ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿರಿದಾದ ಗುಳಿಯನ್ನು ಹೊಂದಿರುವ ಪ್ಲಾಸ್ಟಿಕ್ ಟ್ರೇನಲ್ಲಿ ಬೆಳೆಸಲಾಗಿರುವ ತರಕಾರಿ ಗಿಡಗಳು ತಲಾ ಒಂದು ರೂ.ನಂತೆ ಟ್ರೇಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, ಕೊಕ್ಕೋ ಕರಿಮೆಣಸು, ಕಸಿ ಮಾವು, ಪಪ್ಪಾಯ, ಅಡಿಕೆ ಗಿಡಗಳು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ 30,000 ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ಆರಂಭದಲ್ಲಿ ಬೆಳೆಸಲಾದ ಹೆಗ್ಗಣಗಳ ಪಾಲಾದ ಕಾರಣ ಮತ್ತೆ ಬೀಜ ಹಾಕಿ ಸಸಿ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News