ಭಾರತದ ಇತಿಹಾಸದಲ್ಲೇ ಮೋದಿ ಸರಕಾರ ಅತೀ ದೊಡ್ಡ ದಡ್ಡ ಸರಕಾರ: ಸಸಿಕಾಂತ್ ಸೆಂಥಿಲ್

Update: 2020-01-24 15:47 GMT

ಕೊಣಾಜೆ: ದೇಶದಲ್ಲಿರುವ ಅತೀ ದೊಡ್ಡ ದಡ್ಡ ಸರ್ಕಾರ ಮೋದಿ ಸರಕಾರ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರವಲ್ಲ, ಆದಿವಾಸಿಗಳಿಗೆ, ಹಿಂದುಳಿದವರಿಗೆ, ಬಡವರಿಗೆ ದೊಡ್ಡ ಸಮಸ್ಯೆಯಾಗಲಿದೆ. ಇನ್ನಾದರೂ‌ ನಾವು ಎಚ್ಚೆತ್ತು ಕೊಳ್ಳಬೇಕಿದೆ. ಇನ್ನು  ಕೂಡಾ ಮನೆಯೊಳಗೆ ಕುಳಿತಿರುವ ಮಂದಿ ಹೊರ ಬಂದು ಪ್ರತಿಭಟನೆಗೆ ದುಮುಕಬೇಕಿದ್ದು, ಈ ಸರ್ಕಾರವನ್ನು  ಹೀಗೆ ಬಿಡದೆ ಜನರೇ ಪಾಠ ಕಲಿಸಬೇಕಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.

ಅವರು ಮುಡಿಪುವಿನ ಪೌರತ್ವ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಮುಡಿಪುವಿನ ಬಾಳೆಪುಣಿ ಮೈದಾನದಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಕ್ಕೆ ಮರ್ಯಾದೆ ಅನ್ನುವುದು ಇದ್ದರೆ ಇನ್ನಾದರೂ ಅದನ್ನು ಉಳಿಸುವ ಪ್ರಯತ್ನ ಮಾಡಲಿ. ಒಂದು ಹೆಜ್ಜೆ ಹಿಂದೆ ಹೋಗಲ್ಲ ಎಂದು ಹೇಳಿ ಈ ಹೋರಾಟಕ್ಕೆ ಜನ ಹೆಚ್ಚೆಚ್ಚು ಸೇರಿಸ್ತಾ ಇದ್ದೀರಿ. ಈಗ ಎಲ್ಲಾ ಜನರಿಗೆ ಇದೊಂದು ಸಾಮಾಜಿಕ ಸಮಸ್ಯೆ ಎಂದು ಅರಿವಾಗುತ್ತಾ ಇದೆ ಎಂದರು.

ಎನ್ ಆರ್ ಸಿಗೆ ಈಗ ಹೊಸ ಹೆಸರು ಎನ್ ಪಿ ಎರ್ ಅಂತ ಇಟ್ಟಿದ್ದಾರೆ. ಹೀಗೆ ಸಾವಿರಾರು ಹೆಸರು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಸೂಕ್ಷ್ಮ ವಾಗಿ‌ ಗಮನಿಸಬೇಕು. ಎನ್ ಆರ್ ಸಿ ಕೋಳಿ ಮೊಟ್ಟೆ ಆದರೆ ಎನ್ ಪಿ ಆರ್ ಕೋಳಿ. ಅದ್ದರಿಂದ ಇದಕ್ಕೂ ಯಾರೂ ದಾಖಲೆ ಕೊಡಬೇಡಿ. ಮುಂದಿನ ದಿನಗಳಲ್ಲಿ  ಸೆನ್ಸಸ್ ಗೆ ಎಂದು ಹೇಳಿ  ಜೊತೆಗೆ ಈ ಎನ್ ಪಿ ಆರ್ ಬಗ್ಗೆ ಪ್ರಶ್ನೆಗಳು ಕೇಳಬಹುದು. ಇಂತಹ ಷಡ್ಯಂತ್ರದ ವಿರುದ್ಧ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವು ಭಯಪಡದೆ ಯಾವತ್ತೂ ಸ್ವಾಭಿಮಾನವನ್ನು ಬಿಟ್ಟು ಕೊಡದೆ ಹೋರಾಟವನ್ನು ಮುಂದುವರಿಸೋಣ ಎಂದರು.

ವಾಚ್ ಮ್ಯಾನ್ ನನ್ನು ಮನೆಯಲ್ಲಿ ಕೆಲಸಕ್ಕೆ ಇಟ್ಟರೆ ಅವನೇ ಮನೆಯ ಯಜಮಾನನ್ನು ಯಾರು ಎಂದು ಕೇಳಿದ ಹಾಗೆ, ನಮ್ಮ ತಾಯಿಯೇ ನಮ್ಮನ್ನು ಯಾರು ಎಂದು ಕೇಳಿದ ಹಾಗೆ ಈ ಸರ್ಕಾರ ನಮ್ಮನ್ನು ಯಾರು ಎಂದು ಕೇಳಿ ದಾಖಲೆಯನ್ನು ಕೇಳ್ತಾ ಇರುವುದು‌ ನಾಚಿಕೆಗೇಡಿನ ವಿಷಯವಾಗಿದೆ ಎಂದರು.

ಖಾಝಿ ಬೇಕಲ್ ಉಸ್ತಾದ್ ಅವರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಾವೆಲ್ಲರೂ ಸೌಹಾರ್ದತೆಯೊಂದಿಗೆ ಬದುಕಬೇಕು. ನಮ್ಮ ಭಾರತ ವಿವಿಧ ಜಾತಿಗಳ ಹೂವುಗಳಿರುವ ಸುಂದರವಾದ ಹೂದೋಟವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆಯಲ್ಲ ಹಿಂದೂ, ಕ್ರಿಸ್ಚಿಯನ್ ರಿಗೂ ತೊಂದರೆಯಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು.

ಸಾಮಾಜಿಕ ಹೋರಾಟಗಾರ್ತಿ ಭವ್ಯ ನರಸಿಂಹ ಮೂರ್ತಿ ಅವರು ಮಾತನಾಡಿ, ಈಗಾಗಲೇ  ದೇಶದಾದ್ಯಂತ ಹೊರಾಟ ನಡೆದಿದೆ. ನಾವು ಆವೇಶ ಮಾತ್ರವಲ್ಲ ವಿವೇಚನೆಯುಕ್ತ ಹೋರಾಟ ಮಾಡಬೇಕಾಗಿದೆ. ದೇಶ ನೂರಾರು ಸಮಸ್ಯೆ ಯಲ್ಲಿ ಮುಳುಗಿರುವಾಗ ಈ ಕಾಯ್ದೆ ಜಾರಿಗೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬೇಡಿ ಎಂದರು.

ಕರ್ನಾಟಕ ಮುಶಾವರ ಸಮಸ್ತ ಕೇರಳ ಜಮಾಅತುಲ್ ಉಲಮಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು ಮಾತನಾಡಿ, ಇಂದು ದೇಶಾದ್ಯಂತ ಪೌರತ್ವ ಕಾಯ್ದೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಈ ಹೋರಾಟದಲ್ಲಿ ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡಿಲ್ಲ. ಈ ದೇಶಕ್ಕಾಗಿ ರಕ್ತ, ಪ್ರಾಣ ಬೇಕಾದರೂ ಕೊಡ್ತೇವೆ. ಆದರೆ ನಾವು ದಾಖಲೆ ಕೇಳಿದರೆ ಕೊಡಲ್ಲ. ಏಕೆಂದರೆ ನಾವು ಭಾರತೀಯರು ಎಂದರು.

ಕಾರ್ಯಕ್ರಮದಲ್ಲಿ ನ್ಯಾಯಪಥ ಪತ್ರಿಕೆಯ ಸಂಪಾದಕ ಡಾ. ವಾಸು ಎಚ್.ವಿ. ಅವರು ಮಾತನಾಡಿ, ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದವರ ದಾಖಲೆಯನ್ನು ಬ್ರಿಟೀಷರ ಕೈಯಾಳಾಗಿ ದುಡಿದವರು ಕೇಳುತ್ತಿದ್ದಾರೆ. ಈ ವ್ಯತ್ಯಾಸವನ್ನು ನಾವು ಗಮನಿಸಬೇಕು.  ಈ ದೇಶದಲ್ಲಿ ನೂರಾರು ಆದಿವಾಸಿಗಳು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೆ. ಅವರು ಎಲ್ಲಿಂದ ಕೊಡಲಿ ದಾಖಲೆ. ಟಿಪ್ಪು ಸುಲ್ತಾನ್ ನಿಂದ ಹಿಡಿದು ಅದೆಷ್ಟೋ ಮುಸ್ಲಿಮರು ದೇಶದ ಸ್ವಾತಂತ್ರ್ಯ ಕ್ಕಾಗಿ  ಪ್ರಾಣಕೊಟ್ಟಿದ್ದಾರೆ. ದೇಶ ಇಬ್ಭಾಗ ಆದಾಗ ನಮ್ಮ ನೆಲವನ್ನು ಪ್ರೀತಿಸಿ ಇಲ್ಲಿಯೇ ಉಳಿದ ಮುಸ್ಲಿಮರಲ್ಲಿ ಈಗ ದಾಖಲೆ ಕೇಳಲು ನಾಚಿಕೆಯಾಗಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ ಡಿಪಿಐ ಜಿಲ್ಲಾ ಅಧ್ಯಕ್ಷ ಎ.ಕೆ.ಅಶ್ರಫ್ ಮಾತನಾಡಿ, ಬಾಂಬ್ ಇಟ್ಟ ಆದಿತ್ಯ ರಾವ್ ನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ನಮ್ಮ ಜಿಲ್ಲೆಯ ಜನ ಬುದ್ಧಿಮಾಂದ್ಯರಲ್ಲ, ನಾವು ಬುದ್ಧಿವಂತರು. ಪೌರತ್ವ ಕಾಯ್ದೆಯ ವಿರುದ್ಧದ ಹೋರಾಟಕ್ಕೆ ನಾವು ಮುಂದಡಿ‌ ಇಟ್ಟಿದ್ದೇವೆ. ಇದು ದೇಶವನ್ನು ಒಡೆಯುವ ಹೋರಾಟವಲ್ಲ ದೇಶವನ್ನು ಉಳಿಸುವ ಹೋರಾಟ ಇದಾಗಿದೆ ಎಂದರು.

ಶಾಸಕ ಯು.ಟಿ.ಖಾದರ್, ಡಿವೈಎಫ್ಐ ಮುಖಂಡ ಜೀವನ್ ರಾಜ್ ಕುತ್ತಾರ್, ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಝೈನಿ ಅಬ್ದುಲ್ ಸಖಾಫಿ, ಸಾಮಾಜಿಕ ಹೋರಾಟಗಾರ್ತಿ ನೆಜ್ಮಾ, ಚಿಕ್ಕನೇರಳೆ, ಮುಖಂಡರಾದ ಎಸ್.ಕೆ.ಅಬ್ದುಲ್ ಖಾದರ್ ಹಾಜಿ , ಹಾಜಿ ಇಬ್ರಾಹಿಂ ಕೋಡಿಜಾಲ್, ಜೆಡಿಎಸ್ ಮುಖಂಡ ಮಹಮ್ಮದ್ ಶಾಫಿ,  ಹೈದರ್ ಪರ್ತಿಪ್ಪಾಡಿ, ಆಸೀಫ್ ಸಖಾಫಿ, ಬಂಟ್ವಾಳ ತಾಲೂಕು ಪಂ. ಅಧ್ಯಕ್ಷ  ಚಂದ್ರಹಾಸ್ ಕರ್ಕೇರ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಎನ್ ಎಸ್. ಕರೀಂ, ಕಾರ್ಪೊರೇಟರ್ ಲತೀಫ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಜಿಲ್ಲಾ ಪಂ. ಸದಸ್ಯೆ  ಮಮತಾ ಡಿ.ಎಸ್. ಗಟ್ಟಿ, ಕಾಂಗ್ರೆಸ್ ಮುಖಂಡರಾದ ಟಿ.ಎಸ್.ಅಬ್ದುಲ್ಲಾ, ಸಂತೋಷ್ ಶೆಟ್ಟಿ ಪುಲ್ಲು, ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆ ಸಂಚಾಲಕ ಅಬೂಬಕರ್ ಸಜಿಪ ಅವರು ಸಂವಿಧಾನ ರಕ್ಷಣೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಮರ್ ಪಜೀರ್ ಪ್ರಸ್ತಾವಿಕವಾಗಿ ಮಾತನಾಡಿದರು. ಬಶೀರ್ ಮುಡಿಪು ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News