ಶಿರ್ವ ಪೇಟೆಯ ಡಿವೈಡರ್‌ನಲ್ಲಿ ಹೂಗಿಡ ಬೆಳೆಸಿದ ಜಾಫರ್ ಸಾಹೇಬ್

Update: 2020-01-24 15:27 GMT

ಶಿರ್ವ, ಜ. 24: ಮನೆಯಂಗಳದಂತೆ ಶಿರ್ವ ಪೇಟೆಯ ಡಿವೈಡರ್ ಮಧ್ಯೆ ಸುಂದರವಾಗಿ ಕಂಗೊಳಿಸುತ್ತಿರುವ ವಿವಿಧ ಜಾತಿಯ ಆಕರ್ಷಕ ಹೂವಿನ ಗಿಡಗಳು, ಶಿರ್ವದ ಗೂಡ್ಸ್ ಟೆಂಪೋ ಮಾಲಕ ಹಾಗೂ ಚಾಲಕ ಜಾಫರ್ ಸಾಹೇಬ್(60) ಅವರ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಜಾಫರ್ ಕಳೆದ ಏಳೆಂಟು ತಿಂಗಳುಗಳಿಂದ ಡಿವೈಡರ್ ಮಧ್ಯೆ ಸ್ವತಃ ತಾವೇ ಹಲವು ಬಗೆಯ ಹೂವಿನ ಗಿಡಗಳನ್ನು ನೆಟ್ಟು, ಪ್ರತಿದಿನ ನೀರುಣಿಸಿ ಪೋಷಿಸಿ ಕೊಂಡು ಬರುತ್ತಿದ್ದಾರೆ. ಇದರ ಪರಿಣಾಮ ವಿವಿಧ ಜಾತಿಗಳ ಗಿಡಗಳು ಹೂ ಬಿಟ್ಟು ಪೇಟೆಯ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪರಿಸರದ ಅಂಗಡಿಯವರಿಗೆ ಮನಸ್ಸಿಗೆ ಉಲ್ಲಾಸ ನೀಡುವ ವಾತಾವರಣವನ್ನು ಸೃಷ್ಠಿಸಿದೆ.

ಶಿರ್ವ ಮಸೀದಿ ಬಳಿಯ ನಿವಾಸಿಯಾಗಿರುವ ಇವರು, ಈ ಮೊದಲು ಕಾರು ಚಾಲಕರಾಗಿ, ಇದೀಗ ಸ್ವಂತ ಗೂಡ್ಸ್ ಟೆಂಪೋ ಚಾಲಕರಾಗಿ ದುಡಿಯುತ್ತಿದ್ದಾರೆ. ಕಳೆದ 20ಕ್ಕೂ ಅಧಿಕ ವರ್ಷಗಳ ಕಾಲ ಶಿರ್ವ ಪೇಟೆಯಲ್ಲಿ ಚಾಲಕ ರಾಗಿ ದುಡಿಯುತ್ತಿರುವ ಇವರಿಗೆ, ಪತ್ನಿ, ಹಾಗೂ ಓರ್ವ ಮಗಳು ಇದ್ದಾರೆ.

300 ಮೀ. ಹೂತೋಟ: ಶಿರ್ವ ಮಂಚಕಲ್ ಪೇಟೆಯ ಮಧ್ಯೆ ಹಾದು ಹೋಗಿರುವ ಆತ್ರಾಡಿ-ಶಿರ್ವ-ಬಜ್ಪೆರಾಜ್ಯ ಹೆದ್ದಾರಿಯಲ್ಲಿ ಶಿರ್ವ ಸಮು ದಾಯ ಆರೋಗ್ಯ ಕೇಂದ್ರದಿಂದ ಪೆಟ್ರೋಲ್ ಪಂಪ್‌ವರೆಗೆ ಸುಮಾರು ಒಂದು ಕಿ.ಮೀ. ಉದ್ದದ ಡಿವೈಡರ್‌ನೊಂದಿಗೆ ದ್ವಿಪಥ ರಸ್ತೆಯನ್ನು ನಿರ್ಮಿಸಲಾಗಿದೆ. ಡಿವೈಡರ್ ಮಧ್ಯೆಯೂ ಡಾಮರು ಹಾಕಲಾಗಿದ್ದು, ಕೆಲವು ಕಡೆ ಮಣ್ಣು ತುಂಬಿಸಲಾಗಿದೆ.

ಶಿರ್ವ ಗೂಡ್ಸ್ ಟೆಂಪೊ ನಿಲ್ದಾಣದ ಎದುರು ಹಾದು ಹೋಗಿರುವ ಡಿವೈಡರ್ ನಡುವಿನ ಖಾಲಿ ಜಾಗವನ್ನು ಕಂಡ ಜಾಫರ್ ಅವರಿಗೆ, ತನ್ನ ಮನೆ ಯಂತೆ ಇಲ್ಲೂ ಕೂಡ ಹೂಗಿಡಗಳ ಬೆಳೆಸಬೇಕೆಂಬ ಆಸಕ್ತಿ ಹುಟ್ಟಿತು. ಹಾಗೆ ಡಿವೈಡರ್ ಮಧ್ಯೆ ಮಣ್ಣು ತುಂಬಿಸಿದ ಅವರು, ಜೂನ್ ತಿಂಗಳಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಹೂವಿನ ಗಿಡಗಳನ್ನು ನೆಟ್ಟರು.

ಅದಕ್ಕಾಗಿ ಅವರು ಪ್ರತಿದಿನ ಈ ಗಿಡಗಳಿಗೆ ನೀರು ಹಾಕುತ್ತ ಅದನ್ನು ಪೋಷಿಸಿದರು. ಇದನ್ನು ನೋಡಿದ ಇತರ ಸಹಪಾಠಿಗಳು ಕೂಡ ತುಳಸಿ, ದಾಸವಾಳದಂತಹ ಗಿಡಗಳನ್ನು ತಂದು ಜಾಫರ್‌ಗೆ ನೀಡಿದರು. ಹೀಗೆ ಸುಮಾರು 300 ಮೀಟರ್ ಉದ್ದದ ಜಾಗದಲ್ಲಿ ಸುಮಾರು 20 ವಿವಿಧ ಜಾತಿಗಳ ಆಕರ್ಷಕ ಹೂವಿನ ಗಿಡಗಳು ಬೆಳೆದು ನಿಂತಿವೆ.

ಸಹಪಾಠಿಗಳ ಸಾಥ್: ಜಾಫರ್ ಮೊದಲು ಈ ಗಿಡಗಳಿಗೆ ತನ್ನ ಬಿಡುವಿನ ವೇಳೆಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಿಸಿ ಮುಚ್ಚಳಕ್ಕೆ ತೂತು ಕೊರೆದು ಕೋಲಿನ ಸಹಾಯದಿಂದ ಗಿಡಗಳ ಬುಡದಲ್ಲಿ ಕಟ್ಟಿ ಹನಿ ನೀರು ಹಾಯಿಸುತ್ತಿದ್ದರು. ಇದರಿಂದ ಬಿಸಿಲಿನಲ್ಲೂ ಗಿಡಗಳ ಬುಡದಲ್ಲಿ ತೇವಾಂಶ ಇರುತ್ತಿತ್ತು.

ಇದೀಗ ನೀರಿನ ಸಮಸ್ಯೆಯಾಗಿರುವುದರಿಂದ ಶಿರ್ವ ಮಹಿಳಾ ಮಂಡಳಿಯ ಬಾವಿಯಿಂದ ನೀರನ್ನು ತಂದು ಗಿಡಗಳಿಗೆ ಉಣಿಸುತ್ತಿದ್ದಾರೆ. ಇದಕ್ಕೆ ಇವರಿಗೆ ಸಹಪಾಠಿ ಚಾಲಕರು ಸಾಥ್ ನೀಡಿದ್ದಾರೆ. ಕರಿಯ ಪೂಜಾರಿ, ಉದಯ ಅಂಚನ್ ಬಾವಿಯಿಂದ ನೀರು ತಂದು ಟೆಂಪೋ ನಿಲ್ದಾಣದಲ್ಲಿ ತಂದು ಇಡುತ್ತಾರೆ. ಬಾಡಿಗೆಗೆ ತೆರಳಿದ್ದ ಜಾಫರ್ ಸಾಹೇಬರು ಸಂಜೆ ಬಂದು ಈ ನೀರನ್ನು ಗಿಡಗಳಿಗೆ ಹಾಕುತ್ತಿದ್ದಾರೆ.

‘ಮೊದಲು ದಿನಕ್ಕೆ ಎರಡು ಬಾರಿ ನೀರು ಹಾಕುತ್ತಿದ್ದೆ. ಈಗ ಒಂದೇ ಬಾರಿ ಅದು ಕೂಡ ಸಂಜೆ ಹೊತ್ತು ನೀರು ಹಾಕುತ್ತಿದ್ದೇನೆ. ಗಿಡಗಳನ್ನು ಬೆಳೆಸುವುದು ಮುಖ್ಯವಲ್ಲ, ಅದಕ್ಕೆ ನೀರುಣಿಸಿ ಪೋಷಿಸುವುದು ಅದಕ್ಕಿಂತ ದೊಡ್ಡ ಕೆಲಸ. ಇದಕ್ಕೆ ನನ್ನ ಸಹಪಾಠಿ ಗಳು ಕೂಡ ಸಹಕಾರ ನೀಡುತ್ತಿದ್ದಾರೆ’ ಎನ್ನುತ್ತಾರೆ ಚಾಲಕ ಜಾಫರ್ ಸಾಹೇಬ್.

‘ಈ ಡಿವೈಡರ್ ಮಧ್ಯೆ ಹಾಕಲಾಗಿರುವ ಮಣ್ಣಿನ ಅಡಿಯಲ್ಲಿ ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ರಸ್ತೆ ಕಾಮಗಾರಿ ವೇಳೆ ಡಾಮರು ಕೂಡ ಹಾಕಿದ್ದರು. ಇದರಿಂದ ಗಿಡಗಳಿಗೆ ತಳಭಾಗದಲ್ಲಿ ಉಷ್ಣಾಂಶ ಜಾಸ್ತಿ ಯಾಗಿ ನೀರು ಕೂಡ ಹೆಚ್ಚು ಬೇಕಾಗುತ್ತದೆ. ಆದುದರಿಂದ ಸಹಪಾಠಿಗಳು ಹೇಳಿರುವಂತೆ ಮುಂದೆ ಈ ಗಿಡಗಳನ್ನು ತೆಗೆದು, ಅಡಿಯಲ್ಲಿದ್ದ ಡಾಮರನ್ನು ಜೆಸಿಬಿ ಮೂಲಕ ತೆರವುಗೊಳಿಸಬೇಕಾಗುತ್ತದೆ. ನಂತರ ಇಲ್ಲಿ ಮತ್ತೆ ಹೂ ಗಿಡಗಳನ್ನು ನೆಟ್ಟು ಹೂತೋಟ ಮಾಡುವ ಯೋಜನೆ ನಮ್ಮ ಮುಂದೆ ಇದೆ’

-ಜಾಫರ್ ಸಾಹೇಬ್ ಶಿರ್ವ, ಟೆಂಪೋ ಚಾಲಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News