ಸಮಾಜದಲ್ಲಿ ಪ್ರೀತಿಗಿಂತ ಭಯ ಆವರಿಸಿದೆ: ಸಸಿಕಾಂತ್ ಸೆಂಥಿಲ್

Update: 2020-01-24 16:17 GMT

ಮಂಗಳೂರು, ಜ.24: ಸಮಾಜದಲ್ಲಿ ಪ್ರೀತಿ, ಕರುಣೆಗಿಂತ ಭಯವೇ ತಾಂಡವವಾಡುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಬೇಸರ ವ್ಯಕ್ತಪಡಿಸಿದರು.

ಯುನಿವೆಫ್ ಕರ್ನಾಟಕ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಸಂಜೆ ನಡೆದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಸಮಾರೋಪ ಸಮಾರಂಭದಲ್ಲಿ ‘ನಾಗರಿಕ ಸಮಾಜ ಹಾಗೂ ನಾಗರಿಕತೆ ಮತ್ತು ಪ್ರವಾದಿ’ ಕುರಿತು ಅವರು ಮಾತನಾಡಿದರು.

ಭಯ ತುಂಬಿದ ಮನಸ್ಸುಗಳು ನಿಷ್ಕಲ್ಮಶ ಪ್ರೀತಿಗಾಗಿ ಹಂಬಲಿಸಬೇಕು. ದ್ವೇಷವನ್ನು ಮನಸಿನಿಂದ ತೆಗೆದು ಹಾಕಬೇಕು. ಪ್ರೀತಿ, ಶಾಂತಿ, ಸೌಹಾರ್ದವನ್ನೇ ಹಬ್ಬಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವುದು ಇಂದಿನ ತುರ್ತು ಅಗತ್ಯ. ಪೀಳಿಗೆ ಯನ್ನು ಸರಿದಾರಿಯಲ್ಲಿ ನಡೆಸಲು ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳು ವೈಚಾರಿಕ ಹಿನ್ನೆಲೆಯಲ್ಲಿ ಸಾಗಲು ಪ್ರೇರೇಪಿಸಬೇಕು ಎಂದರು.

ಸಮಾಜದಲ್ಲಿ ಹೊಡೆದಾಟ, ಅಶಾಂತಿ, ಉದ್ವಿಗ್ನ ಸೃಷ್ಟಿಸಲು ಯತ್ನಿಸುವ ಘಟನೆಗಳು ನಡೆಯುತ್ತಿವೆ. ಹಿಂಸಾ ಪ್ರವೃತ್ತಿಯನ್ನು ತ್ಯಜಿಸಬೇಕು. ನಾವೂ ಬದುಕೋಣ; ಎಲ್ಲರೂ ಬದುಕಲು ಅವಕಾಶ ನೀಡೋಣ. ಎಲ್ಲರೂ ಗೌರವದಿಂದ ಬದುಕಬೇಕು ಎಂದು ತಿಳಿಸಿದ್ದಾರೆ.

ವೈಸಿಎಸ್/ವೈಎಸ್‌ಎಂ ಮಂಗಳೂರು ಧರ್ಮಪ್ರಾಂತ ವಿಭಾಗದ ನಿರ್ದೇಶಕ ಫಾ.ರೂಪೇಶ್ ಮಾಡ್ತಾ ಅವರು, ‘ನಾಗರಿಕ ಸಮಾಜ ಮತ್ತು ನಾವು’ ಕುರಿತು ಮಾತನಾಡಿ, ಧಾರ್ಮಿಕತೆ ಎನ್ನುವುದು ದೊಡ್ಡ ವಿಷಯವಲ್ಲ. ಪ್ರೀತಿ, ಸತ್ಯ, ಕರುಣೆಗೆ ಸದಾಕಾಲ ತಲೆಬಾಗುವೆನು. ಧಾರ್ಮಿಕ ಕೊಡಪಾನವಿದ್ದಂತೆ. ಆಧ್ಯಾತ್ಮಿಕ ಜೀವಜಲವಿದ್ದಂತೆ. ನಮಗೆ ಧಾರ್ಮಿಕ ಭಾವನೆಗಿಂತ ಆಧ್ಯಾತ್ಮಿಕ ಮುಖ್ಯ ಪಾತ್ರ ವಹಿಸುತ್ತದೆ. ತತ್ವಕ್ಕಾಗಿ ಮನುಷ್ಯನನ್ನು ಕೊಲ್ಲುವುದು ಮಹಾಪಾಪವಾಗಿದೆ ಎಂದು ಹೇಳಿದರು.

ನಮ್ಮ ಧರ್ಮ ನಮ್ಮೊಂದಿಗಿದ್ದರೆ ನಮ್ಮ ಸ್ನೇಹ ಎಲ್ಲರೊಂದಿಗೂ ಇರಬೇಕು. ಮನುಷ್ಯರಲ್ಲಿ ಮನುಷ್ಯತ್ವ ಇರದಿದ್ದರೆ ಜೀವನ ವ್ಯರ್ಥ. ಮಾನವ ಸಂಬಂಧಗಳ ಅರಿವು ಆಗುವವರೆಗೂ ಮನುಷ್ಯನಾಗಲು ಸಾಧ್ಯವಿಲ್ಲ. ನಾಗರಿಕತೆ ಬೆಳೆಯುವುದು ಬ್ಯಾಂಕ್, ರಾಜಕೀಯ, ಧಾರ್ಮಿಕತೆಯಲ್ಲಲ್ಲ; ಹೃದಯದಲ್ಲಿದೆ. ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡುವುದೇ ನಿಜವಾದ ಸರ್ವಧರ್ಮ ಸಮ್ಮೇಳನ ಎಂದು ಅಭಿಪ್ರಾಯಪಟ್ಟರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಮಾನವ ಸಂಬಂಧಗಳು ಮತ್ತು ಪ್ರವಾದಿ’ ವಿಷಯದಲ್ಲಿ ಮಾತನಾಡಿ, ಕರಾವಳಿ ಭಾಗದಲ್ಲಿ ಕೋಮು ಉದ್ವಿಗ್ನ ಇಲ್ಲ; ಶಾಂತವಾಗಿದೆ. ಇಲ್ಲಿ ಎಲ್ಲರೂ ಶಾಂತಿ ಬಯಸುವವರಾಗಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್, ಸಿಎಎ ಕಾಯ್ದೆಗಳು ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಅಸ್ತಿತ್ವದ ಪ್ರಶ್ನೆ ಉದ್ಭವಿಸಿದಾಗ ಸಮುದಾಯವೇ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

‘ವಾರ್ತಾಭಾರತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ‘ನಾಗರಿಕ ಸಮಾಜ ಮತ್ತು ಪ್ರವಾದಿಯ ದೃಷ್ಟಿಯಲ್ಲಿ ಪೌರತ್ವ’ ವಿಷಯದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಯುನಿವೆಫ್ ಕರ್ನಾಟಕದ ಸಹ ಸಂಚಾಲಕ ಸೈಯದ್ ಅಹ್ಮದ್ ಕುದ್ರೋಳಿ, ಅಬೂಬಕರ್ ಸಹಬ್ ಮತ್ತಿತರರು ಉಪಸ್ಥಿತರಿದ್ದರು. ರಾಹಿಲ್ ಕಿರಾಅತ್ ಪಠಿಸಿದರು. ಯುನಿವೆಫ್ ಕರ್ನಾಟಕದ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ ಸ್ವಾಗತಿಸಿದರು. ಹುದೈಸ್ ಮತ್ತು ಅರ್ಸಲನ್ ಕಾರ್ಯಕ್ರಮ ನಿರೂಪಿಸಿದರು. ಯುನಿವೆಫ್ ಕಾರ್ಯದರ್ಶಿ ಯು.ಕೆ.ಖಾಲಿದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News