ಟಿಕೆಟ್ ಕೌಂಟರ್ ಬಳಿ ಭದ್ರತೆ ಇರಲಿಲ್ಲ: ಸ್ಥಳ ಮಹಜರು ಸಂದರ್ಭ ಶಂಕಿತ ಉಗ್ರ ಆದಿತ್ಯ ರಾವ್ ಹೇಳಿಕೆ

Update: 2020-01-24 16:29 GMT
ಆದಿತ್ಯ ರಾವ್

ಮಂಗಳೂರು: ‘ಆಟೋದಲ್ಲಿ ಬಂದು ಚೆಕ್ಕಿಂಗ್ ಪಾಯಿಂಟ್ ಮೂಲಕ ನಡೆದುಕೊಂಡು ಬಂದೆ. ಅಷ್ಟರಲ್ಲಿ ಇಲ್ಲಿನ ಟಿಕೆಟ್ ಕೌಂಟರ್ ಬಳಿ ಯಾರೂ ಭದ್ರತೆಯವರು ಇರಲಿಲ್ಲ. ಹಾಗಾಗಿ ನನ್ನ ಕೆಲಸ ಪೂರೈಸಲು ಸಾಧ್ಯವಾಯಿತು’ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ ಶಂಕಿತ ಉಗ್ರ ಆದಿತ್ಯ ರಾವ್ ಸ್ಥಳ ಮಹಜರು ಸಂದರ್ಭ ಹೇಳಿಕೆ ನೀಡಿದ್ದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಸ್ಟಡಿಯಲ್ಲಿ ಇರುವ ಆದಿತ್ಯ ರಾವ್‌ನನ್ನು ಶುಕ್ರವಾರ ಎಸಿಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಸ್ಥಳ ಮಹಜರಿಗೆ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಯಿತು. ವಿಮಾನ ನಿಲ್ದಾಣ ಪ್ರವೇಶಿಸುವ ಟಿಕೆಟ್ ಕೌಂಟರ್ ಬಳಿ ತೆರಳಿದ ಆದಿತ್ಯ ರಾವ್, ಅಲ್ಲಿ ಪ್ರಯಾಣಿಕರ ಪ್ಯಾಸೆಂಜರ್ ಕುರ್ಚಿಯಲ್ಲಿ ಸ್ಫೋಟಕ ಇದ್ದ ಬ್ಯಾಗ್ ಇರಿಸಿರುವುದನ್ನು ದೃಢಪಡಿಸಿದ್ದಾನೆ. ಈತನ ಹೇಳಿಕೆಯನ್ನು ತನಿಖಾಧಿಕಾರಿಗಳ ತಂಡ ಮಹಜರು ನಡೆಸಿತು.

‘ಜ.20ರಂದು ಬೆಳಗ್ಗೆ 8:35ರ ಸುಮಾರಿಗೆ ಇಲ್ಲಿಗೆ ಆಗಮಿಸಿದ್ದು, ಐದೇ ನಿಮಿಷಗಳಲ್ಲಿ ಬ್ಯಾಗ್‌ನ್ನು ಯಾರಿಗೂ ಸಂದೇಹ ಬಾರದಂತೆ ಇಲ್ಲಿನ ಆಸನದ ಕೆಳಗೆ ಇರಿಸಿದೆ. ನಂತರ ಅವಸರವಾಗಿ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಅದೇ ಆಟೋವನ್ನು ಹತ್ತಿ ನಿರ್ಗಮಿಸಿದೆ’ ಎಂದು ಹೇಳಿದ್ದಾನೆ ಎಂದು ಹೇಳಲಾಗಿದೆ.

ಸೆಲೂನ್‌ಗೆ ಭೇಟಿ: ಬಳಿಕ ಕೆಂಜಾರು ಬಸ್ ನಿಲ್ದಾಣ ಬಳಿಯ ಸೆಲೂನ್‌ಗೆ ಆದಿತ್ಯ ರಾವ್‌ನನ್ನು ಕರೆದುಕೊಂಡು ಬರಲಾಯಿತು. ಆ ಸ್ಥಳವನ್ನು ಗುರುತಿಸಿದ ಆದಿತ್ಯ ರಾವ್, ಬಸ್‌ನಲ್ಲಿ ಬಂದು ಒಂದು ಬ್ಯಾಗ್‌ನ್ನು ಒಳಗೆ ಇರಿಸಿಕೊಳ್ಳುವಂತೆ ಹೇಳಿದ್ದೆ. ಆದರೆ ಅವರು ಒಳಗೆ ಅವಕಾಶ ನೀಡದೆ, ಹೊರಗೆ ಇರಿಸುವಂತೆ ಸೂಚಿಸಿದರು. ಆ ಬ್ಯಾಗ್‌ನಲ್ಲಿ ಸ್ಫೋಟಕ ಇರಲಿಲ್ಲ, ಬಟ್ಟೆಬರೆಗಳು ಇದ್ದವು ಎಂದು ಹೇಳಿಕೆ ನೀಡಿದ್ದಾನೆ. ಸೆಲೂನ್ ಮಾಲಕರ ಜೊತೆಗೆ ಆರೋಪಿ ಆದಿತ್ಯ ರಾವ್ ಮಾತನಾಡಿರುವ ವಿಚಾರಗಳನ್ನು ಮಹಜರು ವೇಳೆ ಗಣನೆಗೆ ತೆಗೆದುಕೊಳ್ಳಲಾಯಿತು.

ನಂತರ ಆದಿತ್ಯ ರಾವ್‌ನ್ನು ಪಣಂಬೂರು ಎಸಿಪಿ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಆದಿತ್ಯ ರಾವ್ ಕೆಲಸ ಮಾಡುತ್ತಿದ್ದ ಮಂಗಳೂರಿನ ಬಲ್ಮಠದ ಹೊಟೇಲ್‌ಗೆ ತೆರಳಿ ಮಹಜರು ನಡೆಸಬೇಕಾಗಿದೆ. ಆದಿತ್ಯ ರಾವ್ ದುಷ್ಕತ್ಯ ಎಸಗಲು ಸಿದ್ಧತೆ ನಡೆಸಿದ ಜಾಗ ಹಾಗೂ ಸ್ಫೋಟಕ ತಯಾರಿಗೆ ಕಚ್ಚಾ ಸಾಮಗ್ರಿ ತರಿಸಿಕೊಂಡ ಸ್ಥಳಗಳಿಗೂ ತೆರಳಿ ತನಿಖಾ ತಂಡ ಮಹಜರು ನಡೆಸಲಿದೆ.

ರಾಜ್ಯ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಕೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವರದಿಯೊಂದನ್ನು ತಯಾರಿಸಿ ನಗರ ಪೊಲೀಸರು ರಾಜ್ಯ ಸರಕಾರಕ್ಕೆ ಗುರುವಾರ ಸಲ್ಲಿಸಿದ್ದಾರೆ.

ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವ ಯಾವುದೇ ಘಟನೆ ನಡೆದಾಗ ರಾಜ್ಯ ಸರಕಾರದ ಮುಖೇನ ಕೇಂದ್ರದ ಗೃಹ ಇಲಾಖೆಗೆ ವರದಿ ನೀಡಬೇಕು. ಆ ನಿಟ್ಟಿನಲ್ಲಿ ಸ್ಫೋಟಕ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ವರದಿಯೊಂದನ್ನು ತಯಾರಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ರಾಜ್ಯ ಸರಕಾರ ಕಳುಹಿಸಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News