ಸಂಖ್ಯಾಬಲದಿಂದ ಜಾರಿಗೆ ತಂದಿರುವ ಸಿಎಎಗೆ ಸಂಸತ್ತಿನ ಅಂಗೀಕಾರ ಇಲ್ಲ: ಫಣಿರಾಜ್

Update: 2020-01-24 18:23 GMT

ಉಡುಪಿ, ಜ.24: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಿರೋಧಿಸಿ ಜನಾಗ್ರಹ ಪಂಜಿನ ಪ್ರತಿಭಟನಾ ಧರಣಿಯನ್ನು ಶುಕ್ರವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾಗಿತ್ತು.

ಅಜ್ಜರಕಾಡಿನಲ್ಲಿ ಪಂಜಿನ ಮೆರವಣಿಗೆ ನಡೆಸಿದ ನೂರಾರು ಮಂದಿ ಹೋರಾಟಗಾರರು, ಆಝಾದಿ ಘೋಷಣೆಗಳನ್ನು ಕೂಗಿದರು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಚಿಂತಕ ಪ್ರೊ. ಫಣಿರಾಜ್, ಸಿಎಎಯನ್ನು ಮಹಾತ್ಮ ಗಾಂಧಿ, ನೆಹರೂ, ರಾಜೇಂದ್ರ ಪ್ರಸಾದ್, ವಲ್ಲಭಬಾಯಿ ಪಟೇಲ್, ಅಂಬೇಡ್ಕರ್ ಸ್ವಾಗತಿಸಿದ್ದರು ಎಂದು ಅಮಿತ್ ಶಾ ಹಸಿ ಹಸಿ ಸುಳ್ಳು ಗಳನ್ನು ಹೇಳುತ್ತಿದ್ದಾರೆ. ಆದರೆ ಆಗಿನ ಯಾರು ಕೂಡ ಸಿಎಎಯನ್ನು ಬೆಂಬಲ ಮಾಡಿಲ್ಲ. ಭಾರತದಲ್ಲಿರುವ ಎಲ್ಲರು ಕೂಡ ಇಲ್ಲಿಯವರೇ ಎಂದು ಹೇಳಿರುವ ಈ ನಾಯಕರುಗಳು, ಧರ್ಮದ ಆಧಾರದಲ್ಲಿ ಯಾರನ್ನು ವಿಭಜನೆ ಮಾಡಿಲ್ಲ ಎಂದರು.

ಸಂಸತ್ತಿನಲ್ಲಿ ಅಂಗೀಕಾರ ಆಗಿರುವ ಕಾಯ್ದೆಗೆ ವಿರೋಧ ಮಾಡುವುದು ಅಪರಾಧ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಈ ರೀತಿಯ ಮಹತ್ವ ಕಾಯ್ದೆಯನ್ನು ಇವರು ಜಾರಿಗೆ ತಂದಿರುವುದು ಯಾವುದೇ ಪ್ರಜಾ ಪ್ರಭುತ್ವ ಸಂವಿಧಾನ ಒಪ್ಪುವಂತದಲ್ಲ. ಇದಕ್ಕೆ ಸಂಸತ್ತಿನಲ್ಲಿ ವಿರೋಧ ಇದ್ದರೂ ಇವರು ಸಂಖ್ಯಾಬಲದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಆದುದರಿಂದ ಇದಕ್ಕೆ ಬಹುಮತ ಇದೆಯೇ ಹೊರತು ಸಂಸತ್ತಿನ ಅಂಗೀಕಾರ ಇಲ್ಲ ಎಂದು ಅವರು ಹೇಳಿದರು.

ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯು ದೇಶದ ಸಂವಿಧಾನದ ಮೂಲಭೂತ ಆಶಯಗಳಿಗೆ ದ್ರೋಹ ಬಗೆದಿದೆ. ಈ ಕಾಯ್ದೆಯ ಮೂಲಕ ಮುಸ್ಲಿಮ್ ಸಮುದಾಯದ ವೈವಿಧ್ಯಮಯ ಸಂಸ್ಕೃತಿಯನ್ನು ಅಲ್ಲಗೆಳೆಯಲಾಗುತ್ತಿದೆ. ಒಂದು ಸಮುದಾಯದ ಸಂಸ್ಕೃತಿಯನ್ನು ಅಲ್ಲಗೆಳೆಯುವುದು ಅಂದರೆ ಆ ಸಮುದಾಯಕ್ಕೆ ಸೇರಿದ ಜನರ ಇರುವಿಕೆಯನ್ನು ಕೊನೆಗೊಳಿಸಿದಂತೆ ಎಂದು ಟೀಕಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ದೇಶವನ್ನು ಒಡೆಯುವ ಮತ್ತು ಜನರ ಮಧ್ಯೆ ಧ್ವೇಷ ಹರಡಲು ಮಾತ್ರ ಗೊತ್ತಿರುವ ಬಿಜೆಪಿಯವರಿಗೆ, ದೇಶ ಆಳುವುದಕ್ಕೆ ಬರುವುದಿಲ್ಲ. ಒಂದು ದೇಶದ ಜನರ ಕಲ್ಯಾಣಕ್ಕೆ ಶ್ರಮಿಸುವುದು ಸರಕಾರಗಳ ಕೆಲಸ ಆಗಿದೆ. ಆದರೆ ಇವರು ಜನರಲ್ಲಿ ಭೀತಿ ಹುಟ್ಟಿಸಿ ದೇಶವನ್ನು ಆಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಇವರು ಗೋಳ್ವಲ್‌ಕರ್, ಸಾರ್ವಕರ್ ಸಿದ್ಧಾಂತದ ಮೂಲಕ ದೇಶದ ಜನರನ್ನು ಒಡೆಯುವ ಕೆಲಸ ಮಾಡಿದರೆ, ನಾವು ಅಂಬೇಡ್ಕರ್ ರಚಿಸಿದ ಸಂವಿಧಾನದಬುನಾದಿಯಲ್ಲಿ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತೇವೆ. ಈ ಸಂವಿಧಾನ ವಿರೋಧಿ ಕಾನೂನುಗಳನ್ನು ಹಿಂದೆಗೆಯುವವರೆಗೆ ಹೋರಾಟವನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು.

ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಈ ಭಾರತ ವಿಶ್ವದಲ್ಲಿ ಗುರು ತಿಸಿಕೊಳ್ಳಲು ಅಂಬೇಡ್ಕರ್ ರಚಿಸಿದ ಧರ್ಮ ನಿರಪೇಕ್ಷ ಸಂವಿಧಾನವೇ ಕಾರಣ. ಸಂಘಪರಿವಾರದವರು ಭವ್ಯ ದೇಶವನ್ನು ಕಟ್ಟಿದ ಗಾಂಧಿ, ನೆಹರೂ, ಅಂಬೇಡ್ಕರ್ ಅವರನ್ನು ಯುವಕರ ಮನಸ್ಸಿನಿಂದ ದೂರ ಮಾಡಿ, ಹೇಡಿ ಸಾರ್ವಕರ್‌ನ ಸಿದ್ಧಾಂತಗಳನ್ನು ತಲೆಗೆ ತುಂಬಿಸುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿಯಿಂದ ಮುಸ್ಲಿಮರ ವಿರೋಧಿಗಿಂತ ಎಲ್ಲ ಧರ್ಮಗಳಲ್ಲಿರುವ ಬಡವ ವಿರೋಧಿಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪತ್ರಕರ್ತ ಶಶಿಧರ ಹೆಮ್ಮಾಡಿ, ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ದಲಿತ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಶಂಕರ್‌ದಾಸ್ ಚೇಂಡ್ಕಳ, ಶಿವಾನಂದ ಮೂಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News