ಮಹಿಳೆಯರು ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ: ನೀತಾ ಗುರುರಾಜ್

Update: 2020-01-24 16:52 GMT

ಉಡುಪಿ, ಜ.24: ಮಹಿಳೆಯರು ಸ್ವಾವಲಂಬಿಯಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಉಡುಪಿ ತಾಪಂ ಅಧ್ಯಕ್ಷೆ ನಿೀತಾ ಗುರುರಾಜ ಪೂಜಾರಿ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಮಲ್ಪೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹೆಣ್ಣು-ಗಂಡು ಲಿಂಗ ಅಸಮಾನತೆ ಹೋಗಲಾಡಿಸಲು ಹೆಣ್ಣು ಭ್ರೂಣ ಹತ್ಯೆ ತಡೆ ಕಾನೂನನ್ನು ತರಲಾಗಿದೆ. ಮಹಿಳೆಯರಿಗಾಗಿ ಇರುವ ಸರಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗದಂತೆ ಮತ್ತು ಅರ್ಹರಿಗೆ ತಲುಪು ವಂತೆ ಇಲಾಖೆಗಳು ಶ್ರಮ ವಹಿಸುತ್ತಿವೆ. ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊ್ಳಬೇಕಾಗಿದೆ ಎಂದವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸುವಂತಹ ಪರಿಸ್ಥಿತಿ ನಮಗೇಕೆ ಬಂತು ಎನ್ನುವುದನ್ನು ನಾವು ಯೋಚಿಸಬೇಕಾಗಿದೆ. ಅವಿಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೇರಳ, ಪಶ್ಚಿಮ ಬಂಗಾಳದ ಕೆಲವು ಪ್ರದೇಶ ಮತ್ತು ಅಸ್ಸಾಂನಲ್ಲಿ ಮಾತೃ ಪ್ರಧಾನ ವ್ಯವಸ್ಥೆಯನ್ನು ಹೊರತುಪಡಿಸಿದರೆ, ದೇಶದಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಇದೆ. ವರದಕ್ಷಿಣೆ ಪಿಡುಗಿನಿಂದಾಗಿ, ಹೆಣ್ಣೆಂದರೆ ಹೊರೆ ಎನ್ನುವ ಬಾವನೆ ಬಲವಾಗಿ ಬೇರೂರಿರುವುದರಂದ ಹೆಣ್ಣು ಬ್ರೂಣ ಹತ್ಯೆ ನಡೆದು ಹೆಣ್ಣು ಗಂಡಿನ ಲಿಂಗಾನುಪಾತದಲ್ಲಿ ಅಸಮಾನತೆ ಕಂಡು ಬರುತ್ತಿರುವುದರಿಂದ ಇಂದು ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಪರಿಸ್ಥಿತಿ ಬಂದಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್.ಶೇಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋದ, ಮಲ್ಪೆ ವಾರ್ಡ್ ನಗರಸಭಾ ಸದಸ್ಯೆ ಎಡ್ಲಿನ್ ಕರ್ಕೆಡ, ಕೊಳ ವಾರ್ಡ್ ಸದಸ್ಯೆ ಲಕ್ಷ್ಮಿ ಮಂಜುನಾಥ್, ವಿಜಯಕುಮಾರ ಕೊಡವೂರು, ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News