ಹಿರಿಯಡ್ಕ ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆಗೆ ಭೇಟಿ

Update: 2020-01-24 16:54 GMT

ಉಡುಪಿ, ಜ.24: ಇತ್ತೀಚಿನ ದಿನಗಳಲ್ಲಿ ಸಮಾಜದ ಭದ್ರತೆ, ಶಾಂತಿ ಸೌಹಾರ್ದತೆಯು ಸವಾಲಿನ ಸಂಗತಿಯಾಗಿದ್ದು, ಶಾಂತಿ ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯೊಂದಿಗೆ ಯುವ ಜನತೆ ಕೈಜೋಡಿಸಬೇಕು ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರಿಯಡಕ ಪೊಲೀಸ್ ಠಾಣೆಗೆ ಶೈಕ್ಷಣಿಕ ಭೇಟಿ ನೀಡಿದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿರಿಯಡಕ ಪೋಲೀಸ್ ಠಾಣೆಯು ಜನಸ್ನೇಹಿ ಪೊಲೀಸ್ ಠಾಣೆ ಎಂಬ ಹಿರಿಮೆಯನ್ನು ಹೊಂದಿದ್ದು ಠಾಣೆಯ ಅಧಿಕಾರಿ ಗಳು ಮತ್ತು ಸಿಬ್ಬಂದಿ ವರ್ಗದ ಸಹಕಾರ ಮತ್ತು ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.

ಹಿರಿಯಡಕ ಪೊಲೀಸ್ ಠಾಣೆಯ ಠಾಣಾ ಬರಹಗಾರರಾದ ಸಂತೋಷ್, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ತಂಡಕ್ಕೆ ಠಾಣೆಯ ಕಾರ್ಯ ನಿರ್ವಹಣೆಯ ವಿಧಾನ, ನಿರ್ವಹಿಸಬೇಕಾದ ದಾಖಲೆಗಳು, ವಿದ್ಯಾರ್ಥಿಗಳು ಹೊಂದಿರಬೇಕಾದ ಕಾನೂನಿನ ಅರಿವು ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಭೇಟಿಗೆ ಅವಕಾಶ ನೀಡಿದ ಠಾಣಾಧಿಕಾರಿ ಸುಧಾಕರ ತಾಮಸೆ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸುಜಯಾ ಕೆ ಎಸ್, ಐಕ್ಯೂಎಸಿ ಸಂಚಾಲಕಿ ಸುಮನಾ ಬಿ., ಸುಬಾಷ್ ಹೆಚ್.ಕೆ, ಅನಿಲ್‌ ಕುಮಾರ್ ಕೆ.ಎಸ್., ಸಹಾಯಕ ಸಬ್ ಇನ್ಸ್‌ಪೆಕ್ಟರ್ ವೇದಾವತಿ, ಠಾಣಾ ಬರಹಗಾರರಾದ ಸಂತೋಷ್, ಫಾತಿಮಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News