ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ

Update: 2020-01-24 16:56 GMT

ಉಡುಪಿ, ಜ.24: ಕಳೆದೊಂದು ದಶಕದಿಂದ ಸ್ಥಗಿತಗೊಂಡಿರುವ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವ ಉದ್ದೇಶದಿಂದ ಸ್ಥಳೀಯ ಶಾಸಕ ರಘುಪತಿ ಭಟ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಇತ್ತೀಚೆಗೆ ಸಕ್ಕರೆ ಕಾರ್ಖಾನೆಗೆ ಕರೆತಂದು ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಯ ವಿವರಗಳನ್ನು ನೀಡಿದರು.

ಈ ಸಕ್ಕರೆ ಕಾರ್ಖಾನೆ ಪುನರಾರಂಭದಿಂದ ಉಡುಪಿ ಹಾಗೂ ದ.ಕ. ಜಿಲ್ಲೆಯ ಸಾವಿರಾರು ರೈತ ಮತ್ತು ಕಾರ್ಮಿಕ ಕುಟುಂಬಗಳ ಜೀವನಕ್ಕೆ ಸಹಕಾರಿ ಯಾಗುವುದರೊಂದಿಗೆ ಬ್ರಹ್ಮಾವರವೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು. ಆದ್ದರಿಂದ ಕಾರ್ಖಾನೆಯ ಪುನಶ್ಚೇತನಕ್ಕೆ ಸರಕಾರದಿಂದ ಆರ್ಥಿಕ ಸಹಾಯ ಮಂಜೂರು ಮಾಡಿಸುವಂತೆ ಸಚಿವರನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಚಿವರಿಗೆ ಕಾರ್ಖಾನೆಯ ಅಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ ರೈತರ ಪರವಾಗಿ ಮನವಿ ಪತ್ರವನ್ನು ನೀಡಿದರು. ವಾರಾಹಿ ನೀರಾವರಿ ಯೋಜನೆಯಿಂದಾಗಿ ರೈತರ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ವಾಗಿದ್ದು, ರೈತರು ಲಾಭದಾಯಕ ಬೆಳೆಯಾದ ಕಬ್ಬು ಬೆಳೆಸಲು ಮುಂದಾಗಿ ದ್ದಾರೆ. ಈ ಸಕ್ಕರೆ ಕಾರ್ಖಾನೆ ಆರಂಭವಾಗದಿದ್ದಲ್ಲಿ ರೈತರ ಆರ್ಥಿಕ ಸ್ಥಿತಿ ಕುಂಠಿತ ವಾಗುವುದಲ್ಲದೆ, ರೈತರ ಜಮೀನಿಗೆ ಹರಿಯುವ ನೀರು ವ್ಯರ್ಥವಾಗುವುದು. ಈ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಪುನಶ್ಚೇತನಕ್ಕೆ ಸರಕಾರದಿಂದ ಆರ್ಥಿಕ ನೆರವು ಮಂಜೂರು ಮಾಡಿಸುವಂತೆ ಸಚಿವರನ್ನು ವಿನಂತಿಸಿದರು.

ಸಚಿವರು ಸಕ್ಕರೆ ಕಾರ್ಖಾನೆ ಪುನಶ್ಚೇತನದ ಬಗ್ಗೆ ಸಹಮತ ವ್ಯಕ್ತಪಡಿಸಿ, ಕೇವಲ ಸಕ್ಕರೆ ಉತ್ಪಾದನೆ ಮಾಡುವುದರಿಂದ ಕಾರ್ಖಾನೆಯನ್ನು ನಷ್ಟವಿಲ್ಲದೆ ನಡೆಸುವುದು ಅಸಾಧ್ಯ. ಸಕ್ಕರೆಯೊಂದಿಗೆ ಇಥೆನಾಲ್ ಉತ್ಪಾದನೆ ಮಾಡುವುದರಿಂದ ಮಾತ್ರ ಕಾರ್ಖಾನೆಯನ್ನು ಲಾಭದಾಯಕವಾಗಿ ನಡೆಸಬಹುದು. ಇಥೆನಾಲ್ ಘಟಕ ವನ್ನು ಅಳವಡಿಸಲು ಸಾಕಷ್ಟು ಹಣ ಬೇಕಾಗಬಹುದು. ಸರಕಾರದಿಂದ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಕಡಿಮೆ. ಈ ಸಕ್ಕರೆ ಕಾರ್ಖಾನೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಖಾಸಗಿಯವರು ಲೀಸ್‌ನಲ್ಲಿ ನಡೆಸಲು ಮುಂದೆ ಬರುವ ಸಾಧ್ಯತೆಗಳಿವೆ.ಕಾರ್ಖಾನೆಯನ್ನು ಲೀಸ್‌ಗೆ ವಹಿಸುವ ಮೂಲಕ ಪುನಶ್ಚೇತನಕ್ಕೆ ಸಹಕರಿಸುವುದಾಗಿ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ, ರಾಜೇಶ್ ಶೆಟ್ಟಿ ಬಿರ್ತಿ, ಸತ್ಯನಾರಾಯಣ ಉಡುಪ ಜಪ್ತಿ, ರಾಜೀವ ಶೆಟ್ಟಿ ಹೆಬ್ರಿ, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ದಿನಕರ ಶೆಟ್ಟಿ, ಮೇಘರತ್ನ ಶೆಟ್ಟಿ, ರಮಾನಂದ ಹೆಗ್ಡೆ, ಆಸ್ತಿಕ ಶಾಸ್ತ್ರಿ, ವಸಂತಿ ಆರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News