ಬೆಂಗಳೂರಿನ ಪಿಇಎಸ್ ವಿವಿ ತಂಡಕ್ಕೆ ಟ್ಯಾಪ್ಮಿ ‘ಕ್ವಿಝ್ ಆನ್ ಬೀಚ್’ ಪ್ರಶಸ್ತಿ

Update: 2020-01-24 17:37 GMT

ಮಣಿಪಾಲ, ಜ.24: ಬೆಂಗಳೂರು ಪಿಇಎಸ್ ವಿಶ್ವವಿದ್ಯಾಲಯದ ಪ್ರೀತಮ್ ಉಪಾಧ್ಯ ಹಾಗೂ ಅಖಿಲ್ ಸಿದ್ಧಾರ್ಥ ತಂಡ, ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನಡೆದ 17ನೇ ವರ್ಷದ ‘ಕ್ವಿಝ್ ಆನ್ ದಿ ಬೀಚ್’ ಕ್ವಿಝ್ ಸ್ಪರ್ಧೆಯನ್ನು ಜಯಿಸಿ ಅಗ್ರಪ್ರಶಸ್ತಿಯನ್ನು ಸತತ ಎರಡನೇ ವರ್ಷವೂ ಗೆದ್ದುಕೊಂಡಿತು.

ಮಲ್ಪೆ ಕಡಲ ಕಿನಾರೆಯಲ್ಲಿ ನಡೆದ ಕ್ವಿಝ್ ಸ್ಪರ್ಧೆಯ ಫೈನಲ್ ಹಂತದಲ್ಲಿ ಪ್ರೀತಮ್-ಅಖಿಲ್ ಜೋಡಿ ಉಳಿದೆಲ್ಲಾ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯುವ ಮೂಲಕ ವಿವಿಗೆ ಸತತ ಎರಡನೇ ವರ್ಷವೂ ಪ್ರಶಸ್ತಿ ಗೆಲ್ಲಿಸಿಕೊಟ್ಟರು. ಮುಂಬಯಿಯ ಎನ್‌ಎಂಐಎಂಎಸ್‌ನ ಜಯ ರಾಣಾ ಹಾಗೂ ಸಿದ್ಧಾರ್ಥ ಮಿಶ್ರಾ ತಂಡ ರನ್ನರ್ ಅಫ್ ಪ್ರಶಸ್ತಿ ಪಡೆದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಂಬಯಿ ಐಸಿಐಸಿಐ ಬ್ಯಾಂಕಿನ ಡಾ.ಸಂಜಯ್ ಚೌಗುಲೆ ಅವರು ವಿಜಯಿ ತಂಡಗಳಿಗೆ ಒಟ್ಟು ಎರಡು ಲಕ, ರೂ.ಗಳ ಬಹುಮಾನ ಮೊತ್ತವನ್ನು ವಿತರಿಸಿದರು.

ಟ್ಯಾಪ್ಮಿ 2003ರಲ್ಲಿ ಪ್ರಾರಂಭಿಸಿರುವ ಈ ಕ್ವಿಝ್ ಸ್ಪರ್ಧೆಯಲ್ಲಿ ಈ ಬಾರಿ ಐಐಎಂ, ಐಐಟಿ, ಎನ್‌ಐಟಿ, ಎಸ್ಪಿ ಜೈನ್, ಐಐಎಫ್‌ಟಿ, ಬಿಟ್ಸ್ ಪಿಲಾನಿ ಸೇರಿದಂತೆ ದೇಶದ ಅಗ್ರಗಣ್ಯ 400 ವಿದ್ಯಾಸಂಸ್ಥೆಗಳು ಭಾಗವಹಿಸಿದ್ದು, ಅರ್ಹತಾ ಸುತ್ತಿನಲ್ಲಿ ಒಟ್ಟು 1500 ಮಂದಿ ಪಾಲ್ಗೊಂಡಿದ್ದರು.

ಮಲ್ಪೆಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಗೆ ಓಸ್ಮಾನಿಯಾ ಮೆಡಿಕಲ್ ಕಾಲೇಜು, ದಿಲ್ಲಿ ಸ್ಕೂಲ್ ಆಫ್ ಇಕಾನಾಮಿಕ್ಸ್, ಯುನಿವರ್ಸಿಟಿ ಕಾಲೇಜು ತಿರುವನಂತಪುರಂ, ಎನ್‌ಎಂಐಎಂಎಸ್ ಮುಂಬೈ, ಪಿಇಎಸ್‌ವಿವಿ ಬೆಂಗಳೂರು, ಎಂಐಟಿ ಮಣಿಪಾಲ ಹಾಗೂ ಟ್ಯಾಪ್ಮಿ ತಂಡಗಳು ತೇರ್ಗಡೆ ಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News