ಧಾರ್ಮಿಕ ದತ್ತಿ ಇಲಾಖೆಯಲ್ಲಿ ‘ಇ-ಆಫೀಸ್’ ವ್ಯವಸ್ಥೆ ಜಾರಿ: ಕೋಟ ಶ್ರೀನಿವಾಸ ಪೂಜಾರಿ

Update: 2020-01-24 17:46 GMT

ಮಂಗಳೂರು, ಜ. 24: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ರಾಕ್ಯದ 34,562 ದೇವಾಲಯಗಳ ಕೋಟ್ಯಂತರ ರೂ. ಬೆಲೆಬಾಳುವ ಚರ- ಸ್ಥಿರ ಆಸ್ತಿ ಮತ್ತು ಅತ್ಯಮೂಲ್ಯ ದಾಖಲೆಗಳ ರಕ್ಷಣೆ ಹಾಗೂ ಪಾರದರ್ಶಕ ನಿರ್ವಹಣೆಯ ದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇ- ಆಫೀಸ್ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಶುಕ್ರವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಲಾಖೆಯ ದೈನಂದಿನ ಕಾರ್ಯಚಟು ವಟಿಕೆಗಳು ಸುಗಮವಾಗಿ ನಿರ್ವಹಿಸುವ ಸಲುವಾಗಿ ಇ-ಆಫೀಸ್, ವೆಬ್‌ಬೇಸ್ಡ್ ಅಪ್ಲಿಕೇಷನ್/ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ಮತ್ತು ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಾಮನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದೆ ಎಂದರು.

ದಾಖಲೆಗಳಲ್ಲಿರುವ ದೇವಾಲಯಗಳ ಆಸ್ತಿ ವಿವರ ಹಾಗೂ ವಾಸ್ತವ ಸಂಗತಿ ವಿಭಿನ್ನವಾಗಿದೆ. ಈ ಸಮಸ್ಯೆಗೆ ಹೊಸ ವ್ಯವಸ್ಥೆಯಿಂದ ಪರಿಹಾರ ದೊರಕುವ ವಿಶ್ವಾಸವಿದೆ ಎಂದು ಸಚಿವ ಕೋಟ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಜಲಾಭಿಷೇಕ ಯೋಜನೆ: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯದ ಕೊಳ, ಕೆರೆ, ಸರೋವರ, ಕಲ್ಯಾಣಿಗಳನ್ನು ಜಲಾಭಿಷೇಕ ಯೋಜನೆಯಡಿ ಅಭಿವೃದ್ಧಿಪಡಿಸಿ ಜೀರ್ಣೋದ್ಧಾರಗೊಳಿಸಲು ಉದ್ದೇಶಿಸಲಾಗಿದೆ. ದೇವಾಲಯಗಳ ನಿಧಿ, ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಈ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು.

ಸಂಸ್ಕೃತ ವೇದ, ಆಗಮ ಶಿಕ್ಷಣ: ಆರ್ಥಿಕವಾಗಿ ಸಬಲರಾಗಿರುವ ಮತ್ತು ಸ್ಥಳಾವಕಾಶವಿರುವ ದೇವಾಲಯಗಳ ವತಿಯಿಂದ ಸಂಸ್ಕೃತ ಮತ್ತು ಆಗಮ ಶಾಲೆಗಳನ್ನು ತೆರೆಯುವ, ಆಗಮ ಶಿಕ್ಷಣದ ಐದು ವರ್ಷ ಕಾಲಾವಧಿ ಮಿತಗೊಳಿಸುವ ಮತ್ತು ಒಂದು ವರ್ಷದ ವಿಶೇಷ ಕೋರ್ಸ್‌ಗಳನ್ನು ತೆರೆಯಲು ಸಮಿತಿ ರಚಿಸಲಾಗಿದೆ. ಇಲಾಖೆ ವ್ಯಾಪ್ತಿಗೆ ಒಳಪಡುವ ‘ಸಿ’ ದರ್ಜೆಯ ಅಧಿಸೂಚಿತ ಸಂಸ್ಥೆಗಳ ಅರ್ಚಕರಿಗೆ ವೇದ ಮತ್ತು ಆಗಮ ಶಾಸ್ತ್ರಗಳ ಶಿಕ್ಷಣವನ್ನು ಇಲಾಖೆ ವತಿಯಿಂದ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಯೋಜನೆ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ವಿದ್ವಾಂಸರಾದ ಎಸ್.ಗೋವಿಂದ ಭಟ್, ಕೆ.ಸೂರ್ಯನಾರಾಯಣ ಭಟ್, ಡಾ.ಮಹರ್ಷಿ ಆನಂದ ಗುರೂಜಿ, ಇಲಾಖೆಯ ಆಯುಕ್ತರ ಕಚೇರಿಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ ಕುಮಾರ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಸಚಿವ ಕೋಟ ತಿಳಿಸಿದರು.

28 ದೇವಾಲಯಗಳಿಗೆ ಸಮಿತಿ: ವ್ಯವಸ್ಥಾಪನಾ ಸಮಿತಿ ಅವಧಿ ಪೂರ್ಣಗೊಂಡ 28 ದೇವಾಲಯಗಳಿಗೆ ಹೊಸ ಸಮಿತಿ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಗಿದೆ. ‘ಎ’ ಪ್ರವರ್ಗದ ಅಧಿಸೂಚಿತ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಗಳ ಅವಧಿಯು 2020ರ ಮಾರ್ಚ್‌ಗೆ ಮುಕ್ತಾಯಗೊಳ್ಳಲಿದೆ ಎಂದರು.

ಸರಳ ವಿವಾಹಕ್ಕೆ ಪ್ರೋತ್ಸಾಹ: ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಇಲಾಖೆಯ ಪ್ರೋತ್ಸಾಹಧನ, ಕೊಡುಗೆಗಳ ಜತೆ ನಡೆಸಲು ಉದ್ದೇಶಿಸಿರುವ ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು. ಇಂತಹ ಸಾಮೂಹಿಕ ವಿವಾಹಗಳಲ್ಲಿ ಬಡವರ ಜತೆ, ಸರಳ ರೀತಿ ಮದುವೆಯಾಗಲು ಬಯಸುವ ಶ್ರೀಮಂತರು ಕೂಡ ವಿವಾಹವಾಗುವ ಮೂಲಕ ಮಾದರಿಯಾಗಬೇಕು. ಯೋಜನೆ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯ ಜೊತೆ ಚರ್ಚೆ ನಡೆಸಿರುವುದಾಗಿ ಸಚಿವ ಕೋಟ ತಿಳಿಸಿದರು.
*ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ‘ಸಿ’ ಪ್ರವರ್ಗದ ದೇವಾಲಯಗಳಾದ ಪುತ್ತೂರು ಶಿರಾಡಿ ಗ್ರಾಮದ ಅಮ್ಮಾಜೆ ಶ್ರೀದುರ್ಗಾಪರಮೇಶ್ವರಿ ದೇವಾಲಯ ಮತ್ತು ಬೆಳ್ತಂಗಡಿಯ ಬೈಲಂಗಡಿ ಶ್ರೀಸೋಮನಾಥೇಶ್ವರ ದೇವಾಲಯಗಳನ್ನು ಐದು ವರ್ಷಗಳ ಅವಧಿಗೆ ದತ್ತು ತೆಗೆದುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ದೇವಾಲಯಕ್ಕೆ ಗರಿಷ್ಟ 50 ಲಕ್ಷ ರೂ.ಗಳ ಮಿತಿಗೆ ಒಳಪಟ್ಟು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ನವೆಂಬರ್‌ನಲ್ಲಿ ಸ್ಥಳೀಯಾಡಳಿತ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆಯಿಂದಾಗಿ ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅರ್ಹರಿಗೆ ನೀಡಲು ಆಗಿರಲಿಲ್ಲ. ಹಾಗಾಗಿ ಈ ಪ್ರಶಸ್ತಿಯನ್ನು ಜ.26ರ ಗಣರಾಜ್ಯೋತ್ಸವದ ಸಂದರ್ಭ ನೀಡಲಾಗು ವುದು ಎಂದು ಸಚಿವ ಕೋಟ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News