ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ

Update: 2020-01-24 18:14 GMT

ದುಬೈ, ಜ.24: ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ನಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಉಪ ನಾಯಕ ಅಜಿಂಕ್ಯ ರಹಾನೆ 8ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಕೊಹ್ಲಿ(928 ಅಂಕ)ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ರನ್ ಯಂತ್ರ ಸ್ಟೀವ್ ಸ್ಮಿತ್‌ಗಿಂತ 17 ಅಂಕ ಮುನ್ನಡೆಯಲ್ಲಿದ್ದಾರೆ. 791 ಅಂಕದೊಂದಿಗೆ ಚೇತೇಶ್ವರ ಪೂಜಾರ ಆರನೇ ಸ್ಥಾನದಲ್ಲಿದ್ದರೆ, ರಹಾನೆ 759 ಅಂಕ ಗಳಿಸಿ 8ನೇ ಸ್ಥಾನಕ್ಕೇರಿದ್ದಾರೆ. ಇದೀಗ ಭಾರತದ ಮೂವರು ಆಟಗಾರರು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

794 ಅಂಕ ಗಳಿಸಿರುವ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಆರನೇ ಸ್ಥಾನದಲ್ಲಿದ್ದು, ಭಾರತದ ಅಗ್ರ ರ್ಯಾಂಕಿನ ಬೌಲರ್ ಆಗಿ ಹೊರಹೊಮ್ಮಿದ್ದಾರೆ.ರವಿಚಂದ್ರನ್ ಅಶ್ವಿನ್ 8ನೇ ಸ್ಥಾನದಲ್ಲಿದ್ದರೆ, ಮುಹಮ್ಮದ್ ಶಮಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

438 ಅಂಕ ಗಳಿಸಿರುವ ರವೀಂದ್ರ ಜಡೇಜ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ವಶಪಡಿಸಿಕೊಂಡಿದ್ದಾರೆ.ಶ್ರೀಲಂಕಾ ತಂಡ ಝಿಂಬಾಬ್ವೆ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದ ಆ್ಯಂಜೆಲೊ ಮ್ಯಾಥ್ಯೂಸ್ ಅಗ್ರ-20ರಲ್ಲಿ ಸ್ಥಾನ ಪಡೆದಿದೆ. ಪೋರ್ಟ್ ಎಲಿಝಬೆತ್‌ನಲ್ಲಿ ನಡೆದ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 135 ರನ್ ಗಳಿಸಿದ್ದ ಇಂಗ್ಲೆಂಡ್‌ನ ಒಲ್ಲಿ ಪೋಪ್ 52 ಸ್ಥಾನ ಭಡ್ತಿ ಪಡೆದು 61ನೇ ಸ್ಥಾನ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News