ಮೊದಲ ಟ್ವೆಂಟಿ-20 : ಪಾಕಿಸ್ತಾನಕ್ಕೆ 5 ವಿಕೆಟ್ ಜಯ

Update: 2020-01-24 18:17 GMT

ಲಾಹೋರ್, ಜ.24: ಶುಐಬ್ ಮಲಿಕ್ ಅವರ ಸೊಗಸಾದ ಅರ್ಧಶತಕದ ಕೊಡುಗೆ ನೆರವಿನಿಂದ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಐದು ವಿಕೆಟ್‌ಗಳ ಅಂತರದಿಂದ ಜಯಿಸಿತು.

ಇಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಟನೇ ಅರ್ಧಶತಕ ಸಿಡಿಸಿದ ಮಲಿಕ್(ಔಟಾಗದೆ 58, 45 ಎಸೆತ)ಪಾಕಿಸ್ತಾನ ತಂಡ 19.3 ಓವರ್‌ಗಳಲ್ಲಿ 142 ರನ್ ಗುರಿ ತಲುಪಲು ನೆರವಾದರು. ಈ ಮೂಲಕ ಪಾಕ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬಾಂಗ್ಲಾದೇಶ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುಹಮ್ಮದ್ ನಯೀಮ್(43,41 ಎಸೆತ) ಹಾಗೂ ತಮೀಮ್ ಇಕ್ಬಾಲ್(39,34 ಎಸೆತ)ಪಾಕಿಸ್ತಾನದ ವೇಗದ ದಾಳಿಯನ್ನು ಸಶಕ್ತವಾಗಿ ನಿಭಾಯಿಸಿದರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಈ ಗೆಲುವಿನೊಂದಿಗೆ ಪಾಕ್ ತಂಡ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಶನಿವಾರ ಹಾಗೂ ಸೋಮವಾರ ನಡೆಯಲಿರುವ ಇನ್ನೆರಡು ಪಂದ್ಯಗಳಲ್ಲಿ ಪಾಕ್ ಸೋತರೆ,ಆಸ್ಟ್ರೇಲಿಯ ಅಗ್ರಸ್ಥಾನಕ್ಕೇರಲಿದೆ.

 ಪಾಕ್ ಕಳೆದ 7 ಟ್ವೆಂಟಿ-20 ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದು, ಒಂದು ಪಂದ್ಯ ಮಳೆಗಾಹುತಿಯಾಗಿತ್ತು. ಇದೀಗ ಪಾಕ್ ಸತತ ಸೋಲಿನ ಸುಳಿಯಿಂದ ಹೊರ ಬಂದಿದೆ. ಮಲಿಕ್ ಕಳೆದ ವರ್ಷ ಫೆಬ್ರವರಿಯಲ್ಲಿ ಕೊನೆಯ ಬಾರಿ ಪಂದ್ಯ ಆಡಿದ್ದರು.45 ಎಸೆತಗಳಲ್ಲಿ ಔಟಾಗದೆ 58 ರನ್ ಗಳಿಸಿದ ಮಲಿಕ್ ಇನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News