ನ್ಯೂಝಿಲ್ಯಾಂಡ್ ಗೆ ಸೋತ ಭಾರತ ‘ಎ’

Update: 2020-01-24 18:26 GMT

ಕ್ರೈಸ್ಟ್‌ಚರ್ಚ್, ಜ.24: ಭಾರತ ಎ ತಂಡದ ಅಗ್ರಸರದಿಯ ಬ್ಯಾಟ್ಸ್‌ಮನ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ಎ ತಂಡ ಇಲ್ಲಿ ಶುಕ್ರವಾರ ನಡೆದ ಎರಡನೇ ಅನಧಿಕೃತ ಏಕದಿನ ಪಂದ್ಯವನ್ನು 29 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಝಿಲ್ಯಾಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 295 ರನ್ ಗಳಿಸಿದೆ. ಆರಂಭಿಕ ಆಟಗಾರ ಜಾರ್ಜ್ ವರ್ಕರ್(135) ಹಾಗೂ ಮೆಕ್‌ಕಾನ್‌ಚಿ(56)ಕಿವೀಸ್ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.

ಗೆಲ್ಲಲು 296 ರನ್ ಗುರಿ ಬೆನ್ನಟ್ಟಿದ ಪ್ರವಾಸಿ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ಎ ತಂಡ ಆರಂಭದಲ್ಲಿ ಗೆಲುವಿನ ಸವಿ ಉಂಡಿತು. ಮುಹಮ್ಮದ್ ಸಿರಾಜ್ ಅವರು ರಚಿನ್ ರವೀಂದ್ರ(0)ರನ್ನು ಬೇಗನೆ ಔಟ್ ಮಾಡಿದರು.

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಗ್ಲೆನ್ ಫಿಲಿಪ್ಸ್ ವಿಕೆಟ್ ಪಡೆದಾಗ ನ್ಯೂಝಿಲ್ಯಾಂಡ್ ಎ ತಂಡದ ಸಂಕಷ್ಟ ಹೆಚ್ಚಾಯಿತು. ಮಧ್ಯಮ ಓವರ್‌ನಲ್ಲಿ ಇಶಾನ್ ಪೊರೆಲ್ ಹಲವು ವಿಕೆಟ್ ಪಡೆದರು. ಆಗ ಕಿವೀಸ್ 22ನೇ ಓವರ್‌ನಲ್ಲಿ 96 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. 25ನೇ ಓವರ್‌ನಲ್ಲಿ ಕಿವೀಸ್ 109 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ವರ್ಕರ್, ಜಿಮ್ಮಿ ನೀಶಾಮ್(33) ಹಾಗೂ ಮೆಕ್‌ಕಾಂಚಿ ತಂಡದ ನೆರವಿಗೆ ಧಾವಿಸಿದರು. 144 ಎಸೆತಗಳ ಇನಿಂಗ್ಸ್‌ನಲ್ಲಿ ವರ್ಕರ್ 6 ಸಿಕ್ಸರ್ ಹಾಗೂ 12 ಬೌಂಡರಿ ಬಾರಿಸಿದರು. 56 ರನ್ ಗಳಿಸಿದ ಮೆಕ್‌ಕಾಂಚಿ 54 ಎಸೆತಗಳ ಇನಿಂಗ್ಸ್‌ನಲ್ಲಿ 8 ಬೌಂಡರಿ ಗಳಿಸಿದರು. ರನ್ ಚೇಸಿಂಗ್ ವೇಳೆ ಭಾರತ ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ(2)ವಿಕೆಟನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ ಮಾಯಾಂಕ್ ಅಗರ್ವಾಲ್ 42 ಎಸೆತಗಳಲ್ಲಿ 37 ರನ್ ಗಳಿಸಿದರು. ಇಶಾನ್ ಕಿಶನ್ 55 ಎಸೆತಗಳಲ್ಲಿ 44 ರನ್ ಗಳಿಸಿದರು. ಆಲ್‌ರೌಂಡರ್ ವಿಜಯ ಶಂಕರ್ 53 ಎಸೆತಗಳಲ್ಲಿ 41 ರನ್ ಕಲೆ ಹಾಕಿದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೃನಾಲ್ ಪಾಂಡ್ಯ 48 ಎಸೆತಗಳಲ್ಲಿ 51 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News