ಅಮಿತ್ ಶಾ ಸಹಿತ 503 ಸಂಸದರು ಈವರೆಗೆ ಕೊಟ್ಟಿಲ್ಲ ಆಸ್ತಿ ವಿವರ !

Update: 2020-01-25 06:17 GMT

ಡೆಹ್ರಾಡೂನ್, ಜ.25: ಕಳೆದ ವರ್ಷದ ಮೇನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾಗಿರುವ 543 ಸದಸ್ಯರ ಪೈಕಿ ಗೃಹ ಸಚಿವ ಅಮಿತ್ ಶಾ ಸಹಿತ 503 ಸದಸ್ಯರುಗಳು ತಮ್ಮ ಆಸ್ತಿ ವಿವರಗಳನ್ನು ಈ ತನಕ ಸಲ್ಲಿಸಿಲ್ಲ ಎಂಬ  ಅಂಶ ಆರ್‌ಟಿಐ ವಿಚಾರಣೆಯಿಂದ ಬಹಿರಂಗವಾಗಿದೆ.

ಲೋಕಸಭಾ ಸದಸ್ಯರುಗಳ ಆಸ್ತಿ ಘೋಷಣೆಯ ನಿಯಮ 2004ರ ಪ್ರಕಾರ ಪ್ರತಿ ಸದಸ್ಯನು ತಾನು ಚುನಾವಣೆಯಲ್ಲಿ ಆಯ್ಕೆಯಾದ 90 ದಿನಗಳಲ್ಲಿ ತನ್ನ ಆಸ್ತಿ ವಿವರಗಳನ್ನು ಸಲ್ಲಿಸಬೇಕು.

ಕಾಯ್ದೆಯ ನಿಯಮ-3ರ ಪ್ರಕಾರ ಪ್ರತಿಯೊಬ್ಬ ಚುನಾಯಿತ ಲೋಕಸಭಾ ಸದಸ್ಯನು ಪ್ರಮಾಣವಚನ ಸ್ವೀಕಾರ ಬಳಿಕ ಅಥವಾ ಲೋಕಸಭೆಯ ಆಸನವನ್ನು ಸ್ವೀಕರಿಸಿದ 90 ದಿನಗಳೊಳಗೆ ತನ್ನ, ತನ್ನ ಪತ್ನಿ ಹಾಗೂ ತನ್ನನ್ನು ಅವಲಂಬಿತ ಮಕ್ಕಳ ಚರ ಹಾಗೂ ಸ್ಥಿರಾಸ್ತಿಗಳು, ಜಂಟಿ ಅಥವಾ ವಿವಿಧ ಮಾಲಕರುಗಳ ಅಥವಾ ಫಲಾನುಭವಿಗಳ ಸಾರ್ವಜನಿಕ ಹಣಕಾಸು ಸಂಸ್ಥೆಗಳಲ್ಲಿನ ಹೊಣೆಗಾರಿಕೆ,ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹೊಣೆಗಾರಿಕೆಯ ಬಗ್ಗೆ ಮಾಹಿತಿ ನೀಡಬೇಕು. ಉಧಂಸಿಂಗ್ ನಗರ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ನದಿಮುದ್ದೀನ್ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು.

ಲೋಕಸಭಾ ಕಾರ್ಯದರ್ಶಿ ನೀಡಿದ ಉತ್ತರದಲ್ಲಿ 2019ರ ಡಿಸೆಂಬರ್ 10ರ ತನಕ 543 ಸದಸ್ಯರುಗಳ ಪೈಕಿ ಕೇವಲ 36 ಸಂಸದರು ನಿಗದಿತ ಸಮಯದೊಳಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. 36 ಸಂಸದರ ಪೈಕಿ 25 ಸಂಸದರು ಬಿಜೆಪಿ ಪಕ್ಷದವರಾಗಿದ್ದು, 8 ತೃಣಮೂಲ ಕಾಂಗ್ರೆಸ್, ಬಿಜೆಡಿ, ಎಐಎಡಿಎಂಕೆ ಹಾಗೂ ಶಿವಸೇನೆಯ ತಲಾ ಒಂದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಎಚ್‌ಆರ್‌ಡಿ ಸಚಿವ ರಮೇಶ್ ಪೊಖ್ರಿಯಲ್ ನಿಶಾಂಕ್, ಜವಳಿ ಖಾತೆಯ ಸಚಿವೆ ಸ್ಮೃತಿ ಇರಾನಿ ಹಾಗೂ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮಾಹಿತಿ ಒದಗಿಸಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಕಾಂಗ್ರೆಸ್‌ನ ಯಾವೊಬ್ಬ ಸಂಸತ್ ಸದಸ್ಯನೂ ಆಸ್ತಿ ವಿವರ ನೀಡಿಲ್ಲ. ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಸಹಿತ ಹಲವು ಪ್ರಮುಖ ನಾಯಕರು ತಮ್ಮ ಆಸ್ತಿ ವಿವರಗಳನ್ನು ಈ ತನಕ ಸಲ್ಲಿಸಿಲ್ಲ.

‘‘ಎಲ್ಲ ವಿಚಾರದಲ್ಲೂ ತಮ್ಮ ನಡವಳಿಕೆ ಅತ್ಯಂತ ಮುಖ್ಯ ಎನ್ನುವುದನ್ನು ನಮ್ಮ ಸಂಸದರು ತಿಳಿದುಕೊಂಡಿರಬೇಕು. ಪಾರದರ್ಶಕತೆ ಕುರಿತು ಬರೇ ಮಾತನಾಡಿದರೆ ಏನೂ ಪ್ರಯೋಜನವಿಲ್ಲ. ಅವರು ನುಡಿದಂತೆ ನಡೆಯಬೇಕು. ಹೀಗಾದರೆ ಮಾತ್ರ ಜನತೆ ಅವರ ಮೇಲೆ ನಂಬಿಕೆ ಇಡಲು ಸಾಧ್ಯ. ಆರ್‌ಟಿಐ ಉತ್ತರದ ಪ್ರಕಾರ ಒಟ್ಟು 543 ಲೋಕಸಭಾ ಸದಸ್ಯರ ಪೈಕಿ ನಾಲ್ವರು ಸಂಸದರಿಗೆ ಆಸ್ತಿ ವಿವರ ನೀಡಲು ಕಾಲಾವಕಾಶ ನೀಡಲಾಗಿದೆ. ಈ ನಾಲ್ವರು ಸಂಸದರು ಇತ್ತೀಚೆಗೆ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ತಾಂತ್ರಿಕವಾಗಿ ಅವರಿಗೆ ಆಸ್ತಿ ವಿವರ ನೀಡಲು ಕಾಲಾವಕಾಶವಿದೆ’’ ಎಂದು ನದಿಮುದ್ದೀನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News