ಮುಸ್ಲಿಮರನ್ನು ವಿಮಾನದಿಂದ ಕೆಳಗೆ ಇಳಿಸಿದ ಡೆಲ್ಟಾ ಏರ್‌ಲೈನ್ಸ್‌ಗೆ ದಂಡ

Update: 2020-01-25 16:00 GMT

ವಾಶಿಂಗ್ಟನ್, ಜ. 25: ವಿಮಾನಗಳಿಂದ ಕೆಳಗಿಳಿಯುವಂತೆ ಮೂವರು ಮುಸ್ಲಿಮ್ ಪ್ರಯಾಣಿಕರಿಗೆ ಆದೇಶ ನೀಡುವ ಮೂಲಕ ಅವರ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಿರುವುದಕ್ಕಾಗಿ ಡೆಲ್ಟಾ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗೆ ಅಮೆರಿಕದ ಸಾರಿಗೆ ಇಲಾಖೆ ಶುಕ್ರವಾರ 50,000 ಡಾಲರ್ (ಸುಮಾರು 35.60 ಲಕ್ಷ ರೂಪಾಯಿ) ದಂಡ ವಿಧಿಸಿದೆ.

ಮೂವರು ಪ್ರಯಾಣಿಕರನ್ನು ವಿಮಾನದಿಂದ ಹೊರಹಾಕುವ ಮೂಲಕ ಡೆಲ್ಟಾ ಸಂಸ್ಥೆಯು ತಾರತಮ್ಯ ಕೃತ್ಯದಲ್ಲಿ ತೊಡಗಿದೆ ಹಾಗೂ ತಾರತಮ್ಯ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದೆ ಎನ್ನುವುದು ಸಾಬೀತಾಗಿದೆ ಎಂದು ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಒಂದು ಘಟನೆಯಲ್ಲಿ, 2016 ಜುಲೈ 26ರಂದು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ವಿಮಾನವೊಂದರಿಂದ ಮುಸ್ಲಿಮ್ ದಂಪತಿಯೊಂದನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತು. ದಂಪತಿಯ ವರ್ತನೆಯಿಂದ ನಾನು ಗಾಬರಿಯಾಗಿದ್ದೇನೆ ಎಂದು ಪ್ರಯಾಣಿಕ ಮಹಿಳೆಯೊಬ್ಬರು ವಿಮಾನ ಸಿಬ್ಬಂದಿಗೆ ದೂರಿದ ಬಳಿಕ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತು.

 2016 ಜುಲೈ 31ರಂದು ನಡೆದ ಇನ್ನೊಂದು ಘಟನೆಯಲ್ಲಿ, ಆ್ಯಮ್‌ ಸ್ಟರ್‌ ಡ್ಯಾಮ್‌ ನಲ್ಲಿ ನ್ಯೂಯಾರ್ಕ್‌ಗೆ ಹೋಗುತ್ತಿದ್ದ ಡೆಲ್ಟಾ ವಿಮಾನವೊಂದರಿಂದ ಮುಸ್ಲಿಮ್ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಲಾಗಿತ್ತು.

ಇತರ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಮುಸ್ಲಿಮ್ ಪ್ರಯಾಣಿಕನ ವಿರುದ್ಧ ದೂರು ನೀಡಿದರೂ, ಮೊದಲ ಉಸ್ತುವಾರಿ ಅಧಿಕಾರಿಗೆ ಪ್ರಯಾಣಿಕನಲ್ಲಿ ಯಾವುದೇ ಅಸಹಜತೆ ಕಾಣಲಿಲ್ಲ. ಹಾರಾಟಕ್ಕೆ ಕ್ಯಾಪ್ಟನ್ ಮುಂದಾದರೂ, ಬಳಿಕ ವಿಮಾನವನ್ನು ವಾಪಸ್ ಗೇಟ್‌ಗೆ ತಂದು ಆ ಪ್ರಯಾಣಿಕನನ್ನು ಕೆಳಗಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News