ಮಕ್ಕಳ ಅಶ್ಲೀಲ ಸೈಟ್‌ಗಳನ್ನು ಹತ್ತಿಕ್ಕಲು ಎಲ್ಲ ಆ್ಯಪ್‌ಗಳ ಮೇಲೆ ನಿಗಾಯಿರಿಸಬೇಕು:ಸಂಸದೀಯ ಸಮಿತಿ

Update: 2020-01-25 16:05 GMT

ಹೊಸದಿಲ್ಲಿ,ಜ.25: ಕಾಂಗ್ರೆಸ್ ಸಂಸದ ಜೈರಾಮ ರಮೇಶ ನೇತೃತ್ವದ ರಾಜ್ಯಸಭಾ ಸಮಿತಿಯೊಂದು ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಯಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ತಾಣಗಳಿಗೆ ಪ್ರವೇಶ ಮತ್ತು ಪ್ರಸಾರವನ್ನು ತಡೆಯಲು ಎಲ್ಲ ಸಾಧನಗಳಲ್ಲಿಯ ಆ್ಯಪ್‌ಗಳ ಮೇಲೆ ನಿಗಾಯಿರಿಸುವುದನ್ನು ಕಡ್ಡಾಯಗೊಳಿಸುವುದು ಮತ್ತು ಪೊಕ್ಸೊ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರುವುದು ಸೇರಿದಂತೆ 40 ಶಿಫಾರಸುಗಳನ್ನು ಮಾಡಿದೆ. ಸಮಿತಿಯು ತನ್ನ ವರದಿಯನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದೆ.

ವ್ಯಾಪಕ ಸಾಮಾಜಿಕ ಕಳವಳವನ್ನು ಸೃಷ್ಟಿಸಿರುವ ಈ ಸಮಸ್ಯೆಯನ್ನು ಪರಿಶೀಲಿಸಿ,ವರದಿಯನ್ನು ಸಲ್ಲಿಸಲು ಸಮಿತಿಯೊಂದನ್ನು ರಚಿಸುವ ಮೂಲಕ ನಾಯ್ಡು ಅವರು ಮೊದಲ ಬಾರಿಗೆ ಇಂತಹ ಕ್ರಮಕ್ಕೆ ನಾಂದಿ ಹಾಡಿದ್ದು ಸರ್ವತ್ರ ಶ್ಲಾಘನೆಗೊಳಗಾಗಿತ್ತು.

ಇದೊಂದು ಉತ್ತಮ ಮಾದರಿಯಾಗಿದ್ದು,ಸದಸ್ಯರು ಜ್ವಲಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಗಾಗ್ಗೆ ಚರ್ಚಿಸುವಂತೆ ಮಾಡಲು ಅನುಕರಣೀಯವಾಗಿದೆ ಎಂದು ರಮೇಶ ವರದಿಯಲ್ಲಿ ಹೇಳಿದ್ದಾರೆ.

ಮಕ್ಕಳ ಪೊರ್ನೊಗ್ರಫಿಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಸಮಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸೈಟ್‌ಗಳ ಅಪಾಯಗಳು ಹಾಗೂ ಮಕ್ಕಳು ಮತ್ತು ಒಟ್ಟಾರೆಯಾಗಿ ಸಮಾಜದ ಮೇಲೆ ಅದರ ದುಷ್ಪರಿಣಾಮಗಳನ್ನು ತಡೆಯಲು ಪೊಕ್ಸೊ ಮತ್ತು ಐಟಿ ಕಾಯ್ದೆಗಳಿಗೆ ತಿದ್ದುಪಡಿಗಳ ಜೊತೆಗೆ ಹಲವಾರು ತಾಂತ್ರಿಕ,ಸಾಂಸ್ಥಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಮಗಳನ್ನು ಶಿಫಾರಸು ಮಾಡಿದೆ.

ತನ್ನ ಮುಂಬರುವ ‘ಮನ್ ಕಿ ಬಾತ್’ ಕಾರ್ಯಕ್ರಮಗಳಲ್ಲಿ ಮಕ್ಕಳ ಪೊರ್ನೊಗ್ರಫಿ ಮತ್ತು ಅದನ್ನು ತಡೆಯಲು ಅಗತ್ಯ ಕ್ರಮಗಳ ಬಗ್ಗೆ ಪ್ರಸ್ತಾಪಿಸುವಂತೆ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News