ಕಿತ್ತಳೆ ಹೊತ್ತ 'ಅಕ್ಷರ ಸಂತ': ಹರೇಕಳ ಹಾಜಬ್ಬರ ಯಶೋಗಾಥೆ

Update: 2020-01-25 18:01 GMT

ಮಂಗಳೂರು: ಅಕ್ಷರ ಸಂತ ಬಿರುದಾಂಕಿತ ಹರೇಕಳ ಹಾಜಬ್ಬರ ಯಶೋಗಾಥೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಂಡಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿಯ ಚಿಲುಮೆಯಾಗಲಿದ್ದಾರೆ.

ಒಂದೂವರೆ ದಶಕದ ಹಿಂದೆ ಕಿತ್ತಳೆ ಹಣ್ಣಿನ ಬುಟ್ಟಿಯನ್ನು ದಿನದ ಕೆಲವು ತಾಸಿನ ಮಟ್ಟಿಗೆ ಬದಿಗೆ ಸರಿಸಿ ತನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡುವ ಹಂಬಲದೊಂದಿಗೆ ಶಾಲೆ ಕಟ್ಟಲು ಮುಂದಾದ ಹರೇಕಳ ಹಾಜಬ್ಬ ಬೆಳೆದು ಬಂದ ಪರಿ ಆಶ್ಚರ್ಯ ಹುಟ್ಟಿಸುವಂತದ್ದು.

ಸ್ವತಃ ತಾನು ಅನಕ್ಷರಸ್ಥನಾದರೂ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಶಾಲೆ ಕಟ್ಟುವ ತನ್ನ ಕನಸಿಗಾಗಿ ಅಧಿಕಾರಿಗಳ, ಜನಪ್ರತಿನಿಧಿಗಳ, ಶ್ರೀಮಂತರ ಮನೆ, ಕಚೇರಿ ಬಾಗಿಲು ಬಡಿದು ಅದರಲ್ಲಿ ಯಶ ಕಂಡ ಹಾಜಬ್ಬ ತನ್ನ ನಿಸ್ವಾರ್ಥ ಸೇವೆಯಿಂದಾಗಿ ಇಂದೂ ಕೂಡ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಹಾಜಬ್ಬ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸಿಎನ್‌ಎನ್-ಐಬಿಎನ್ ಕೂಡ ಹಾಜಬ್ಬನ್ನು ಕರೆಸಿ ಸನ್ಮಾನಿಸಿದೆ. 2004ರಲ್ಲಿ ‘ಕನ್ನಡ ಪ್ರಭ’ ಇವರ ಸಾಧನೆಯನ್ನು ಪರಿಗಣಿಸಿ ಮೊತ್ತ ಮೊದಲ ವರ್ಷದ ವ್ಯಕ್ತಿ ಪ್ರಶಸ್ತಿ ಘೋಷಿಸಿದ ಬಳಿಕ ದೇಶ, ವಿದೇಶದ ನಾನಾ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿದೆ. ಅನಕ್ಷರಸ್ಥ ಎಂಬುದಕ್ಕಿಂತಲೂ ಅವರ ಸರಳತೆ ಎಲ್ಲರ ಹೃದಯ ತಟ್ಟಿತು. ವೈಯಕ್ತಿಕವಾಗಿ ಬಂದ ಪ್ರಶಸ್ತಿಯ ಮೊತ್ತವನ್ನು ಕೂಡ ಶಾಲೆಗೆ ಸುರಿದರು. ಎಲ್ಲೆಲ್ಲಾ ತನಗೆ ಅವಮಾನವಾಯಿತೋ ಅಲ್ಲಿಂದಲೇ ಸನ್ಮಾನಿತರಾದರು.

ನೂರಾರು ಮಂದಿ ಇವರ ಸೇವೆಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ. ಅನೇಕ ಕಡೆ ಸನ್ಮಾನ, ಸಮ್ಮೇಳನ, ಉದ್ಘಾಟನೆ ಭಾಗ್ಯವೂ ಲಭಿಸಿದೆ. ಇವರ ಯಶೋಗಾಥೆಯ ಬಗ್ಗೆ ಇಸ್ಮತ್ ಫಜೀರ್ ರಚಿಸಿದ ಕೃತಿಯನ್ನು ಕಾಂತಾವರದ ಕನ್ನಡ ಸಂಘ ಇತ್ತೀಚೆಗೆ ಪ್ರಕಟಿಸಿದೆ.
ಈ ಶೈಕ್ಷಣಿಕ ವರ್ಷದಿಂದಲೇ ಎರಡೂ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಹರೇಕಳ ಹಾಜಬ್ಬರ ಕುರಿತ ಬದುಕು ಚಿತ್ರಣ ವಿದ್ಯಾರ್ಥಿಗಳ ಪಾಲಿಗೆ ಪಠ್ಯವಾಗಲಿದೆ. ಧಾರಾವಾಡ ವಿ.ವಿ.ಯ ವಾಣಿಜ್ಯ ವಿಭಾಗದ ನಾಲ್ಕನೆ ಸೆಮಿಸ್ಟರ್‌ಗೆ ಹಾಜಬ್ಬರ ಸಾಧನೆಯು ‘ಸಾಹಿತ್ಯ ಸ್ಪಂದನ ಭಾಗ-2’ರಲ್ಲಿ ಕನ್ನಡ ಪಠ್ಯವಾಗಿದೆ.

ಹಾಜಬ್ಬ ಅವರ ಕುರಿತು ಇಸ್ಮತ್ ಪಜೀರ್ ಅವರು ಬರೆದ ಲೇಖನ ಮಂಗಳೂರು ವಿವಿಯ ಬಿ.ಕಾಂ ಪದವಿಗೆ 2013ರಿಂದ 2016ರವರೆಗೆ 'ನುಡಿವಣಿ' ಪಠ್ಯವಾಗಿತ್ತು. ಕೇರಳ ಸರಕಾರದ ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಇಸ್ಮತ್ ಅವರು ಬರೆದ ಲೇಖನ ಈಗಲೂ ಪಠ್ಯವಾಗಿದೆ.

ಅಂದಹಾಗೆ ‘ಅಡಕೆ’ ಪತ್ರಿಕೆಯ ಸಂಪಾದಕ ನಾ. ಕಾರಂತ ಪೆರಾಜೆ ಹಾಜಬ್ಬರ ಬಗ್ಗೆ ‘ಅಭಿವೃದ್ಧಿಗೆ ನೆರವಾದ ಮಾಧ್ಯಮ ಬೆಳಕು’ ಎಂಬ ಶೀರ್ಷಿಕೆಯಡಿ ಬರೆದ ಲೇಖನ 8 ಪುಟದಲ್ಲಿ ಅಡಕವಾಗಿದೆ.

ಅನಕ್ಷರಸ್ಥನಿಂದ ಶಾಲೆ ಆರಂಭ!

ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ನ್ಯೂಪಡ್ಪುವಿನ ಮದ್ರಸವೊಂದರಲ್ಲಿ 1999ರಲ್ಲಿ ಹಾಜಬ್ಬರು ಶಾಲೆಯೊಂದನ್ನು ತೆರೆದಾಗ ಸ್ಥಳೀಯರಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕೋಲು ಶರೀರದ, ಲುಂಗಿಧಾರಿ ಹಾಜಬ್ಬ ಮಾಡಿದರೆ ಏನೆಲ್ಲ ಮಾಡಿಯಾನು ಎಂಬ ತಾತ್ಸಾರ ಹೆಚ್ಚಿನವರಲ್ಲಿತ್ತು. ಆದರೆ, ಹಾಜಬ್ಬರು ಹಿಂತಿರುಗಿ ನೋಡಲಿಲ್ಲ. ತಾನು ಅನಕ್ಷರಸ್ಥನಾದರೂ ತನ್ನ ಮಕ್ಕಳು ಮಾತ್ರವಲ್ಲ ಪರಿಸರದ ಯಾರು ಕೂಡ ಅಕ್ಷರ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಮುಂದಡಿ ಇಟ್ಟರು.

ಮಂಗಳೂರಿನ ಬೀದಿ ಬೀದಿ ಅಲೆದು ಕಿತ್ತಳೆ ಹಣ್ಣು ಮಾರುತ್ತಾ, ಅವರಿವರಲ್ಲಿ ತನ್ನ ಶಾಲೆಗೆ ಬೇಕಾದ ಕಟ್ಟಡ ಕಟ್ಟಲು, ಜಾಗ ಖರೀದಿಸಲು, ಧ್ವಜಸ್ತಂಭ, ಶೌಚಾಲಯ, ಆಟದ ಮೈದಾನ, ತಡೆಗೋಡೆ... ಹೀಗೆ ಶಾಲೆಗೆ ಬೇಕಾದವುಗಳಿಗಾಗಿ ಸಹಾಯಧನ ಯಾಚಿಸಿದರು. ಅಧಿಕಾರಿಗಳ ಬೆನ್ನ ಹಿಂದೆ ಬಿದ್ದರು. ಜನಪ್ರತಿನಿಧಿಗಳ ಮೊರೆ ಹೊಕ್ಕರು. ಮೊದ ಮೊದಲು ಇವರನ್ನು ಕಂಡವರು ಮುನಿಸಿಕೊಂಡರು. ಆದರೆ, ಹಾಜಬ್ಬ ಹಿಂಜರಿಯಲೇ ಇಲ್ಲ. ತನಗೆ ಅವಮಾನವಾದರೂ ಎಲ್ಲವನ್ನೂ ಸಹಿಸಿಕೊಂಡು ಮತ್ತೆ ಮತ್ತೆ ಮುಂದಡಿ ಇಟ್ಟರು.
ಪ್ರತೀ ವರ್ಷ ಒಂದೊಂದೇ ತರಗತಿ ಏರಿಸಿಕೊಂಡು ಹೋದರು. ಪ್ರಾಥಮಿಕ ಹಂತ ಮುಗಿದೊಡನೆ ಪ್ರೌಢ ವಿಭಾಗ ತೆರೆಯಲು ಅನುಮತಿ ಕೋರಿದರು. ಅಕ್ಷರ ಸಂತನ ಯಶೋಗಾಥೆಯನ್ನು ಮನಗಂಡ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರೌಢ ವಿಭಾಗ ತೆರೆಯಲು ಅವಕಾಶ ಮಾಡಿಕೊಡಲಾಯಿತು. ಪದವಿ ಪೂರ್ವ ಕಾಲೇಜಿನ ಅನುಮತಿ ಪಡೆಯಲು ಓಡಾಡಬೇಕಾದ ಸಂದರ್ಭವೇ ಅನಿರೀಕ್ಷಿತವಾಗಿ ಎರಗಿ ಬಂದ ಮಗಳ ಅನಾರೋಗ್ಯ ಹಾಜಬ್ಬರನ್ನು ಕಂಗೆಡಿಸಿತ್ತು. ಆದರೂ ಹಾಜಬ್ಬರ ಶಿಕ್ಷಣ ಪ್ರೇಮ ಕುಂದಿಲ್ಲ.

ಅಸಾಮಾನ್ಯ ವ್ಯಕ್ತಿತ್ವದ ಹಾಜಬ್ಬ

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ನ್ಯೂಪಡು ಜನಿಸಿದ ಹರೇಕಳ ಹಾಜಬ್ಬರು ಅದ್ವಿತೀಯ ಸಾಧಕರು. ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಹಾಜಬ್ಬ ಅವರಿಗೆ ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾಗಿತ್ತು. ಆದರೆ ಇವರೊಬ್ಬ ಅಕ್ಷರ ಪ್ರೇಮಿಯಾದರು. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120 ರೂ. ಹಾಜಬ್ಬ ಅವರು ಬೆಳಗಾಗುತ್ತಲೇ ಬಿಳಿ ಆಂಗಿ ಬಿಳಿ ಪಂಚೆ ಧರಿಸಿ ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಹಣ್ಣು ಮಾರುವ ಕಾಯಕ ಮುಂದುವರಿಸಿದ್ದಾರೆ.

ಧಣಿವರಿಯದ ಸಾಧಕ, ಶಿಕ್ಷಣಪ್ರೇಮಿ ಹಾಜಬ್ಬ
ಇಂದಿಗೂ ಕಿತ್ತಳೆ ಮಾರುವುದನ್ನು ಬಿಟ್ಟಿಲ್ಲ!

ಹಾಜಬ್ಬ ಅವರು ಎಂದಿನಂತೆ ಬೀದಿಯಲ್ಲಿ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್‌ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗುವುದಿಲ್ಲ. ಇದರಿಂದ ಮನನೊಂದ ಹಾಜಬ್ಬ ಅವರಿಗೆ ಶಿಕ್ಷಣದ ಮೌಲ್ಯ ಅರಿವಾಯಿತು.

ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗುವ ಶಾಲೆ ಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಹೇಗಾದರೂ ಮಾಡಿ ಶಾಲೆ ಕಟ್ಟಲೇಬೇಕು ಎಂದು ನಿರ್ಧಾರ ಮಾಡುತ್ತಾರೆ. ಶಾಲೆ ಕಟ್ಟಲು, ಜಾಗಕ್ಕಾಗಿ ಸರಕಾರಿ ಕಚೇರಿಗಳನ್ನು ಅಲೆಯಲು ಆರಂಭಿಸಿದರು.

ಮೂರು ದಿನಗಳ ನಂತರ ಹಾಜಬ್ಬರ ಆಸೆಯಂತೆ ಸರಕಾರದಿಂದ ಸ್ವಲ್ಪ ಜಾಗ ಸಿಕ್ಕಿತು. ಜಾಗ ಸಿಕ್ಕ ನಂತರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದುಕೊಂಡರು. ಆದರೆ ಹಾಜಬ್ಬ ಅಲ್ಲಿಗೇ ಸುಮ್ಮನಾಗುವುದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರಲು ಅಣಿಯಾಗುತ್ತಾರೆ.

ಕಿತ್ತಳೆ ಹಣ್ಣು ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನು ಸಾಕಬೇಕಿತ್ತು. ಇನ್ನು ಹಣ್ಣು ಮಾರಿ ಬಂದ ನಂತರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನು ಸಮತಟ್ಟು ಮಾಡುವ ಕೆಲಸ ಆರಂಭಿಸುತ್ತಾರೆ. ಇದಾದ ನಂತರ ಹೆಚ್ಚುಹೊತ್ತು ಹಣ್ಣು ಮಾರಿ ಕೂಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ, ಸಿಮೆಂಟ್ ಇಟ್ಟಿಗೆ ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ.

1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಯಿತು. ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಟ್ಟರು. 1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತದೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿವುದು, ತೊಳೆಯುವ ಕೆಲಸವನ್ನು ತಾವೇ ಮಾಡುತ್ತಾರೆ.

ಕಿತ್ತಳೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಂಡರು. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಂಡಿತು. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕಿದರು.

ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಂಡರು. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡಿದರು. ಅಂತೂ ಹಾಜಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಚಿಕ್ಕ ಮಗುವಿನಂತೆ ಕುಣಿದರು. ಪ್ರತಿದಿನ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿದರು. ಕಿತ್ತಳೆ ವ್ಯಾಪಾರಕ್ಕೂ ಪೂರ್ಣವಿರಾಮ ಇಡಲಿಲ್ಲ. ಎರಡು ದೋಣಿಗಳ ಮೇಲೂ ಸವಾರಿ ಮಾಡುತ್ತಿದ್ದರು. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಟ್ಟಿತ್ತು. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಸೆ ಚಿಗುರಿತು. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು.

ಒಂದು ಸರಕಾರ ಮಾಡಬೇಕಾದ ಎಲ್ಲ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸಿದವು. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು, ಜಲ್ಲಿ, ಮರಳು, ಸಿಮೆಂಟಿಗೆ.

ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪೆನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿವೆ. ಒಂದೆರಡು ಲಕ್ಷ ರೂ. ದಾನ ಮಾಡಿ ಗೋಡೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ.

ಒಮ್ಮೆ ಕಟ್ಟಡದ ಕಾಂಕ್ರಿಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿದರು. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಂಡಿತು.

ಹಾಜಬ್ಬ ಇಷ್ಟೆಲ್ಲ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕಾಗಿ. ಅಲ್ಲಿರುವುದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು.
ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಸದ್ಯ ತಾನೇ ಕಟ್ಟಿದ ಶಾಲೆಗೆ ತಾನೊಬ್ಬ ‘ಸಾರ್ವಜನಿಕ’ ಮಾತ್ರ. ಹಾಜಬ್ಬ ಅವರು ಈಗಲೂ ಬೆಳಗ್ಗೆ 10 ಗಂಟೆಗೆ ಶಾಲೆಗೆ ಹೋಗಿ ಸ್ವಚ್ಛತೆ ನಿರ್ವಹಿಸಿ ನಂತರ ಕಿತ್ತಳೆ ಹಣ್ಣು ಮಾರಲು ಮಂಗಳೂರಿಗೆ ಹೋಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News