ಗಣರಾಜ್ಯೋತ್ಸವ: ಕೇರಳದ ಮಸೀದಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು, ಸಂವಿಧಾನ ವಾಚಿಸಲು ನಿರ್ಧಾರ

Update: 2020-01-25 17:43 GMT

ತಿರುವನಂತಪುರಂ, ಜ.25: ರಾಷ್ಟ್ರೀಯ ಭಾವೈಕ್ಯತೆಗೆ ಉತ್ತೇಜನ ನೀಡುವ ಕ್ರಮವಾಗಿ ಇದೇ ಪ್ರಥಮ ಬಾರಿಗೆ ಗಣರಾಜ್ಯೋತ್ಸವದಂದು ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮತ್ತು ಸಂವಿಧಾನದ ಪೀಠಿಕೆಯನ್ನು ವಾಚಿಸಲು ನಿರ್ಧರಿಸಲಾಗಿದೆ.

ಈ ಕುರಿತ ಸುತ್ತೋಲೆಯನ್ನು ಕೇರಳ ವಕ್ಫ್ ಮಂಡಳಿ ರವಾನಿಸಿದ್ದು ಎಲ್ಲಾ ಮಸೀದಿಗಳಿಗೂ ಸುತ್ತೋಲೆಯ ಜತೆಗೆ ಸಂವಿಧಾನದ ಪೀಠಿಕೆಯನ್ನೂ ಕಳುಹಿಸಲಾಗಿದೆ. ಮಸೀದಿಗಳಲ್ಲಿ ಬೆಳಿಗ್ಗೆ 8:30ಕ್ಕೆ ತ್ರಿವರ್ಣ ಧ್ವಜ ಹಾರಿಸಲಾಗುವುದು. ಬಳಿಕ ದೇಶದ ಸಂವಿಧಾನ ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸಲಾಗುವುದು.

  ದೇಶವೀಗ ನಿರ್ಣಾಯಕ ಘಟ್ಟದ ಮೂಲಕ ಸಾಗುತ್ತಿದೆ. ಇನ್ನೂ ಹೆಚ್ಚು ಸಮಯ ನಾವು ಮೌನವಾಗಿರುವಂತಿಲ್ಲ. ಮುಸ್ಲಿಮ್ ಸಮುದಾಯದವರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಭದ್ರತೆ ಕಾಡುತ್ತಿದೆ. ಹೀಗಿರುವಾಗ ರಾಷ್ಟ್ರೀಯ ಭಾವೈಕ್ಯತೆಗೆ ಉತ್ತೇಜನ ನೀಡುವ ಕಾರ್ಯದಿಂದ ಅವರಲ್ಲಿ ವಿಶ್ವಾಸ ಮೂಡಲಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಟಿಕೆ ಹಂಝ ಹೇಳಿದ್ದಾರೆ. ವಕ್ಫ್ ಮಂಡಳಿ ಸುತ್ತೋಲೆ ಕಳುಹಿಸುವ ಮೊದಲೇ ಉತ್ತರ ಕೇರಳದಲ್ಲಿ ಹಲವು ಧಾರ್ಮಿಕ ಸಂಘಟನೆಗಳು ಈ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದವು.

ಈ ಮಧ್ಯೆ, ಗಣರಾಜ್ಯೋತ್ಸವ ಸಂದರ್ಭ ರಾಜ್ಯದಲ್ಲಿ ಮಾನವ ಸರಪಳಿ ರಚಿಸಲು ಆಡಳಿತಾರೂಢ ಎಲ್‌ಡಿಎಫ್ ನಿರ್ಧರಿಸಿದೆ. ರಾಜ್ಯದ 10 ಜಿಲ್ಲಾ ವ್ಯಾಪ್ತಿಯಲ್ಲಿ ಸಾಗುವ ಮಾನವ ಸರಪಳಿಯಲ್ಲಿ ಕನಿಷ್ಟ 7 ಮಿಲಿಯನ್ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ . ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಾಲಿಟ್‌ಬ್ಯೂರೊ ಸದಸ್ಯರು ಹಾಗೂ ಹಲವು ಬುದ್ಧಿಜೀವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಲ್‌ಡಿಎಫ್ ಸಂಯೋಜಕ ಎ ವಿಜಯರಾಘವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News