ದ.ಕ. ಜಿಲ್ಲಾ ವತಿಯಿಂದ ಗಣರಾಜ್ಯೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ

Update: 2020-01-26 12:04 GMT

ಮಂಗಳೂರು, ಜ.26: ದುಷ್ಟಶಕ್ತಿಗಳು ತಲೆ ಎತ್ತದಂತೆ ನೋಡಿಕೊಳ್ಳುವುದರ ಜೊತೆಗೆ ಸರ್ವಧರ್ಮಗಳನ್ನು ಗೌರವಿಸಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ದ.ಕ.ಜಿಲ್ಲಾಡಳಿತ ಮತ್ತು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಿತಿಯ ವತಿಯಿಂದ ನಗರದ ನೆಹರೂ ಮೈದಾನಿನಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಅವರು ಸಂದೇಶ ನೀಡಿದರು.

ಸಮಾಜದ ಶಾಂತಿಗೆ ಭಂಗ ತರುವ ಚಟುವಟಿಕೆಗಳಿಗೆ ಅವಕಾಶ ಕೊಡದ ಸರ್ವಧರ್ಮೀಯರು ಸಮನ್ವಯದಿಂದ ಬಾಳಲು ಪ್ರತಿಜ್ಞೆ ಮಾಡಬೇಕಿದೆ. ಜಾತಿ ಮತ ಭೇದವಿಲ್ಲದೆ ಐಕ್ಯತೆ ಕಾಪಾಡಿಕೊಳ್ಳುವುದರ ಮೂಲಕ ಬಲಿಷ್ಠ ಭಾರತ ಕಟ್ಟಲು ಪಣತೊಡಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ.ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 1,33,247 ರೈತರು ಫಲಾನುಭವಿಗಳಾಗಿದ್ದಾರೆ. ಕೇಂದ್ರದಿಂದ 6 ಸಾವಿರ ರೂ. ಹಾಗೂ ರಾಜ್ಯದಿಂದ ಹೆಚ್ಚವರಿಯಾಗಿ 4 ಸಾವಿರ ರೂ.ಗಳನ್ನು ಈ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದು, ಈಗಾಗಲೇ ಮೂರು ಕಂತುಗಳ ನೆರವು ಪಾವತಿಯಾಗಿದೆ. 4ನೇ ಹಂತದ ನೆರವಿನ ಮೊತ್ತವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 893 ಕೋ.ರೂ. ನಷ್ಟ ಅಂದಾಜಿಸಲಾಗಿದ್ದು, ಸಂಪೂರ್ಣ ಹಾನಿಗೊಳಗಾದ 1,914 ಸಂತ್ರಸ್ತ ಕುಟುಂಬಗಳಿಗೆ ಅವಶ್ಯ ವಸ್ತು ಖರೀದಿಗೆ ಆರ್ಥಿಕ ನೆರವು ನೀಡಲಾಗಿದೆ. ಸಹಕಾರ ಸಂಘಗಳಿಂದ ನೇಕಾರರು ಪಡೆದಿರುವ 50 ಸಾವಿರ ರೂ. ಸಾಲ ಮನ್ನಾ ಮಾಡಲಾಗಿದೆ. ರೈತರು ಸಹಕಾರ ಸಂಘಗಳ ಮೂಲಕ ಪಡೆದ ಅಲ್ಪಾವಧಿ ಬೆಳೆ ಸಾಲವನ್ನು 1 ಲಕ್ಷ ರೂ.ಗಳವರೆಗೆ ಮನ್ನಾ ಯೋಜನೆಯಡಿ ಜಿಲ್ಲೆಯ 67,620 ರೈತರ 52,647 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಕೋಟ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಹಾಗೂ ಮಾರ್ಗ ಮಧ್ಯೆ ಬರುವ ಗ್ರಾಮಗಳಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ಮಾಡುವ ಸುಮಾರು 198 ಕೋ.ರೂ. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ 2051ನೇ ಜನಸಂಖ್ಯೆಯ ಅನ್ವಯ ನಿರಂತರ ನೀರು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.

ಕರಾವಳಿಯ ಸುಮಾರು 23 ಸಾವಿರ ಮೀನುಗಾರ ಮಹಿಳೆಯರು ಪಡೆದಿರುವ 60.54 ಕೋ.ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ಕೃಷಿಕರಿಗೆ ನೀಡುತ್ತಿದ್ದ ಕ್ರೆಡಿಟ್ ಕಾರ್ಡ್‌ನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಮೀನುಗಾರರಿಗೆ ನೀಡುವ ಮೂಲಕ ಅವರಿಗೆ ಹೊಸ ಶಕ್ತಿ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ 954 ಯಾಂತ್ರೀಕೃತ ದೋಣಿಗಳಿಗೆ 28.09 ಕೋ.ರೂ. ಡೀಸೆಲ್ ಮೇಲಿನ ಮಾರಾಟ ಕರ ಸಹಾಯಧನವನ್ನು ದೋಣಿ ಮಾಲಕರು ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. 1,291 ನಾಡದೋಣಿಗಳಿಗೆ ಎಪ್ರಿಲ್-ಸೆಪ್ಟಂಬರ್‌ವರೆಗೆ 7.92 ಲಕ್ಷ ಲೀ. ಸೀಮೆಎಣ್ಣೆ ವಿತರಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕರಾದ ಯು.ಟಿ. ಖಾದರ್, ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಐವನ್ ಡಿಸೋಜ, ಭೋಜೇಗೌಡ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಉಪಸ್ಥಿತರಿದ್ದರು.

ದ.ಕ. ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ರವಿವಾರ ನಡೆದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶಭಕ್ತಿ-ಗಾಯನ-ನೃತ್ಯದ ಸಂಗಮವು ಸಾರ್ವಜನಿಕ ಕಣ್ಮನ ವಿದ್ಯಾರ್ಥಿಗಳು ಸಾಕ್ಷಿಯಾದರು. ಸಭಾ ಕಾರ್ಯಕ್ರಮದ ಬಳಿಕ ಕೋಟೆಕಾರು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕುಲಶೇಖರ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ, ವಾಮಂಜೂರು ಶುಭೋದಯ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ನಡೆಯಿತು. ರಾಷ್ಟ್ರಧ್ವಜದ ಬಣ್ಣವಾದ ಕೇಸರಿ, ಬಿಳಿ, ಹಸಿರು ಬಣ್ಣಗಳ ಧಿರಿಸು ಧರಿಸಿ ನೃತ್ಯ ಪ್ರದರ್ಶನ ನೀಡಿದರು. ಓರ್ವ ವಿದ್ಯಾರ್ಥಿ ನೃತ್ಯ ಮುಗಿಯುವ ವೇಳೆಗೆ ಅಂಬೇಡ್ಕರ್ ಚಿತ್ರ ರಚಿಸಿ ಗಮನ ಸೆಳೆದರು. 

ಆಕರ್ಷಕ ಪಥ ಸಂಚಲನ
18 ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್ಸಾರ್ಪಿ, ಸಿಎಆರ್, ಸಿವಿಲ್ ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತುಸೇವೆ, ಕರಾವಳಿ ನಿಯಂತ್ರಣ ದಳ, ಎನ್‌ಸಿಸಿ ಆರ್ಮಿ ಸೀನಿಯರ್, ಎನ್‌ಸಿಸಿ ಏರ್‌ವಿಂಗ್ ಸೀನಿಯರ್, ಎನ್‌ಸಿಸಿ ನೇವಲ್ ಸೀನಿಯರ್, ಸ್ಕೌಟ್ಸ್, ಭಾರತ ಸೇವಾದಳ ಸೀನಿಯರ್ ಸೇರಿದಂತೆ ವಿವಿಧ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಎನ್‌ಸಿಸಿ ಏರ್‌ವಿಂಗ್ ಸೀನಿಯರ್ ಪ್ರಥಮ ಹಾಗೂ ಎನ್‌ಸಿಸಿ ಆರ್ಮಿ ಸೀನಿಯರ್ ದ್ವಿತೀಯ ಸ್ಥಾನ ಗಳಿಸಿತು.

ಪಾರಂಪರಿಕ ವಿಂಟೇಜ್ ಕಾರು ರ್ಯಾಲಿ
ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿಂಟೇಜ್ ಕಾರು ರ್ಯಾಲಿ ಆಯೋಜಿಸಲಾಯಿತು. ಹಳೆಯ ಮಾದರಿಯ ಬಜಾಜ್ ಆಟೋ ರಿಕ್ಷಾ, ಲ್ಯಾಂಬ್ರೆಟ್ಟಾ ಆಟೋರಿಕ್ಷಾ, 1952ರ ಮೋರಿಸ್ ಕಾರು, 1929ರ ೆರ್ಡ್, 1936ರ ಜೀಪ್, 1982ರ ಪಿಯಟ್ ಕಾರು ಸಹಿತ ವಿವಿಧ ಮಾದರಿಯ ಕಾರುಗಳು, ಸ್ಕೂಟರ್, ಮೋಟಾರ್ ಬೈಕ್‌ಗಳ ರ್ಯಾಲಿ ನಡೆಯಿತು. ರ್ಯಾಲಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಚಾಲನೆ ನೀಡಿದರು.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ದ.ಕ. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದಾನ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಕಾರ್ಮಿಕ ಅಧಿಕಾರಿ ವಿಲ್ಮಾ ಎಲಜಬೆತ್ ತಾವ್ರೊ, ಮಂಗಳೂರು ತಾಲೂಕು ಕಚೇರಿಯ ಉಪ ತಹಶೀಲ್ದಾರ್ ವತ್ಸಲಾ, ಕಲ್ಲಮುಂಡ್ಕೂರ್ ಪಿಡಿಒ ಬಿ. ಉಗ್ಗಪ್ಪ ಮೂಲ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಇಂಜಿನಿಯರ್ ಆನಂದ ಎಸ್. ಭಂಜನ್, ವೆನ್ಲಾಕ್ ಆಸ್ಪತ್ರೆ ಶುಶ್ರೂಷಕಿ ಸುಮಂಗಲಾ, ಶಿರಸ್ತೇದಾರ್ ಪ್ರಕಾಶ್ ನಾಯಕ್, ವಾಣಿಜ್ಯ ತೆರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ರತ್ನಾಕರ ಕೊಠಾರಿ, ಬೆಳ್ತಂಗಡಿ ಇಳಂತಿಲ ಗ್ರಾಮ ಲೆಕ್ಕಾಧಿಕಾರಿ ಕುಮಾರಸ್ವಾಮಿ, ಕೃಷಿ ಇಲಾಖೆ ಹಿರಿಯ ವಾಹನ ಚಾಲಕ ಎಂ. ದೇವದಾಸ ಪ್ರಶಸ್ತಿ ಸ್ವೀಕರಿಸಿದರು.

ಹಾಜಬ್ಬರಿಗೆ ಸನ್ಮಾನ - 27 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಭಾರತ ಸರಕಾರದಿಂದ ಕೊಡ ಮಾಡುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮನಪಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನ.1ರಂದು ನೀಡಲಾಗದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವ ದಿನವಾದ ರವಿವಾರ ಪ್ರದಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ 27 ಮಂದಿ ಪ್ರಶಸ್ತಿ ಸ್ವೀಕರಿಸಿದರು. ಎಚ್.ಕೆ. ನಯನಾಡು (ಕಲೆ ಮತ್ತು ಸಾಹಿತ್ಯ), ಪ್ರಶಾಂತ್ ಜೋಗಿ (ಕಲಾ ಕ್ಷೇತ್ರ), ಅಶೋಕ್ ಪೊಳಲಿ (ಕಲಾ ಕ್ಷೇತ್ರ), ಏಳಿಂಜೆ ವೈ. ಯೋಗೀಶ್ ರಾವ್ (ಸಮಾಜಸೇವೆ), ಮೂಲ್ಕಿಯ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ (ಸಾಹಿತ್ಯ ಕ್ಷೇತ್ರ), ಮೂಡುಬಿದಿರೆಯ ವಿದ್ವಾನ್ ಎ. ರಘುನಾಥ ಸೇರಿಗಾರ (ಕಲಾ ಕ್ಷೇತ್ರ), ಪುತ್ತೂರಿನ ಎಸ್.ಕೆ. ಆನಂದ ಕುಮಾರ್ (ಸಮಾಜ ಸೇವೆ), ಪುತ್ತೂರಿನ ಜಗದೀಶ್ ಆಚಾರ್ಯ (ಕಲಾ ಕ್ಷೇತ್ರ), ರಾಜೇಶ್ ವಿಟ್ಲ (ಕಲಾ ಕ್ಷೇತ್ರ), ಮಂಗಳೂರಿನ ನ ಋತ್ವಿಕ್ ಅಲೆವೂರಾಯ ಕೆ.ವಿ. (ಕ್ರೀಡಾ ಕ್ಷೇತ್ರ), ಬೆಳ್ತಂಗಡಿ ತಾಲೂಕಿನ ಶ್ರೀಧರ ಗೌಡ ಕೆಂಗುಡೇಲು (ಸಮಾಜಸೇವೆ), ಬೆಳ್ತಂಗಡಿಯ ವಸಂತ ಸಾಲಿಯಾನ್(ಸಮಾಜ ಸೇವೆ), ಕಡಬದ ಸುರೇಶ್ ರೈ ಸೂಡಿಮುಳ್ಳು (ಸಮಾಜಸೇವೆ), ಬಂಟ್ವಾಳ ತಾಲೂಕಿನ ವೆಂಕಪ್ಪ ಕಾಜವ (ಸಮಾಜಸೇವೆ), ಮಂಗಳೂರು ತಾಲೂಕಿನ ಎನ್.ಎಸ್. ಉಮೇಶ ದೇವಾಡಿಗ (ಸಮಾಜಸೇವೆ), ಪ್ರದೀಪ್ ಕುಮಾರ್ (ಕ್ರೀಡಾ ಕ್ಷೇತ್ರ), ರಕ್ಷಿತ್ ಶೆಟ್ಟಿ (ಕ್ರೀಡಾ ಕ್ಷೇತ್ರ), ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳ (ಕಲಾ ಕ್ಷೇತ್ರ -ಸಂಘ ಸಂಸ್ಥೆ), ಗಂಗಾಧರ ಪುತ್ರನ್ ಯಾನೆ ಗಂಗೇಶ್ ಬೋಳಾರ್ (ಪರಿಸರವಾದಿ), ಅನಘ ( ಕ್ರೀಡಾ ಕ್ಷೇತ್ರ), ಲಕ್ಷ್ಮೀ ನಾರಾಯಣ ಯಾನೆ ಅಣ್ಣು ಪೂಜಾರಿ (ಕಲಾ ಕ್ಷೇತ್ರ), ಶ್ರೀ ವಿನಾಯಕ ಪ್ರೆಂಡ್ಸ್ ಕ್ಲಬ್ (ಸಮಾಜಸೇವೆ ಸಂಘ ಸಂಸ್ಥೆ), ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘ ಮಂಗಳೂರು (ಸಮಾಜಸೇವೆ-ಸಂಘ ಸಂಸ್ಥೆ) ಬೆಳ್ತಂಗಡಿ ತಾಲೂಕಿನ ಸೇವಾ ಭಾರತಿ ಸಂಸ್ಥೆ (ಸಮಾಜಸೇವೆ -ಸಂಘ ಸಂಸ್ಥೆ), ಬಿರುವೆರ್ ಕುಡ್ಲ ಮಂಗಳೂರು (ಸಮಾಜಸೇವೆ -ಸಂಘ ಸಂಸ್ಥೆ), ಎಂ. ಅದ್ವಿಕಾ ಶೆಟ್ಟಿ (ಕಲಾ ಕ್ಷೇತ್ರ). ಸುಳ್ಯ ತಾಲೂಕಿನ ಡಾ. ಉಮ್ಮರ್ ಬೀಜದಕಟ್ಟೆ (ಸಮಾಜಸೇವೆ), ಸ್ಟ್ಯಾನ್ಲಿ ಪಿಂಟೊ (ಪತ್ರಿಕೋದ್ಯಮ), ಅನ್ನು ಮಂಗಳೂರು (ಪತ್ರಿಕೋದ್ಯಮ), ನಾರಾಯಣ ನಾಯಕ್ ಹಾಗೂ ಭರತ್‌ಕುಮಾರ್ (ಸಮಾಜಸೇವೆ), ತಾರನಾಥ ಪಂಬದ (ಕಲಾ ಕ್ಷೇತ್ರ) ಅವರು ಪ್ರಶಸ್ತಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News