ಭಿನ್ನತೆಯನ್ನು ಬದಿಗೊತ್ತಿ ರಾಷ್ಟ್ರದ ಹಿತಕ್ಕಾಗಿ ಶ್ರಮಿಸಬೇಕು : ಕಾಪು ತಹಶೀಲ್ದಾರ್

Update: 2020-01-26 10:31 GMT

ಕಾಪು: ಜಾತಿ, ಧರ್ಮ, ಭಾಷೆ, ಪ್ರದೇಶಗಳ ಭಿನ್ನತೆಯನ್ನು ಬದಿಗೊತ್ತಿ ಪರಸ್ಪರ ತಿಳುವಳಿಕೆ, ಸಹನೆ, ಸಹಕಾರದೊಂದಿಗೆ ರಾಷ್ಟ್ರದ ಹಿತಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಕಾಪು ತಹಶೀಲ್ದಾರ್  ಮುಹಮ್ಮದ್ ಇಸ್ಹಾಕ್ ಕರೆ ನೀಡಿದರು.

ಅವರು ರವಿವಾರ ಕಾಪು ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ನೇತೃತ್ವದಲ್ಲಿ ಜರಗಿದ 71ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ನಾವು ವಾಸಿಸುತ್ತಿರುವ ಪರಿಸರದಲ್ಲಿನ ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು. ಬಡವರ, ದೀನದಲಿತರ ಹಾಗೂ ಗ್ರಾಮಾಂತರ ಜನರ ಸಮಸ್ಯೆಗಳಿಗೆ ಸ್ಪಂಧಿಸುವುದು, ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳುವುದುರ ಜತೆಗೆ ಸೌಹಾರ್ದತೆ ಸಹಕಾರ ಮನೋಭಾವ ಸಹಜೀವನ ಇವುಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅವಶ್ಯಕತೆ ಎಂದರು. 

ಪೌರತ್ವದ ಬಗ್ಗೆ ಅಪಪ್ರಚಾರ ಬೇಡ: ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಂವಿಧಾನದಲ್ಲಿ  ಸ್ಥಿತಿಗತಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶಗಳು ಬಂದಾಗ ನೂರಾರು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಪೌರತ್ವ ಕಾಯ್ದೆಯಂತಹ ಹೊಸ ಹೊಸ ಕಾಯ್ದೆಗಳನ್ನು ದೇಶದಲ್ಲಿ ತರಲಾಗುತ್ತಿದೆ. ದೇಶಕ್ಕೆ ಹಲವಾರು ವರ್ಷಗಳ ಹಿಂದೆಯೇ ವಲಸೆ ಬಂದ ಸಂದರ್ಭ ನಿರಾಶ್ರಿತರಾದವರಿಗೆ ಭಾರತೀಯ ಪೌರತ್ವ ನೀಡುವ ಹಿನ್ನಲೆಯಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಅಳವಡಿಸಲಾಗಿದೆ. ಈ ಕಾಯ್ದೆಯಿಂದ ದೇಶದ ಮೂಲನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಗೊಂದಲ ಉಂಟು ಮಾಡಬೇಡಿ ಎಂದು ಮನವಿ ಮಾಡಿದರು.

ಕಾಪು ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ, ವಿವಿಧ ಬಹುಮಾನ ವಿತರಣೆ, ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ಹಸ್ತಾಂತರ, ವಿವಿಧ ಸವಲತ್ತು ವಿತರಣೆ ನಡೆಯಿತು.

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ,  ತಾ.ಪಂ. ಸದಸ್ಯೆ ಶಶಿಪ್ರಭಾ ಶೆಟ್ಟಿ, ಕಾಪು ಎಸ್ಸೈ ರಾಜಶೇಖರ ಸಾಗನೂರು, ಕ್ರೈಂ ಎಸ್ಸೈ ಜಯ ಕೆ.,  ಪುರಸಭಾ ಸದಸ್ಯರಾದ ರಮಾ ವೈ. ಶೆಟ್ಟಿ, ಶಾಂಭವಿ ಕುಲಾಲ್, ಸುಧಾ ರಮೇಶ್, ಮಮತಾ ಕುಶ ಸಾಲ್ಯಾನ್, ಕಿರಣ್ ಆಳ್ವ, ಶಿಕ್ಷಣ ಸಂಯೋಜಕ ಶಂಕರ್ ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News