ಜಿಲ್ಲೆಯ ಶಾಂತಿ, ಸುವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ: ಬಸವರಾಜ ಬೊಮ್ಮಾಯಿ

Update: 2020-01-26 12:30 GMT

ಉಡುಪಿ, ಜ.26: ಕರಾವಳಿಯ ಶಾಂತಿ, ಸುವ್ಯವಸ್ಥೆಗೆ ಸರಕಾರ ಮೊದಲ ಪ್ರಾಶಸ್ತ್ಯವನ್ನು ನೀಡುತ್ತದೆ. ಅಲ್ಲದೇ, ಸರ್ವರನ್ನೂ ಸಮಾನತೆಯಿಂದ ನೋಡುತ್ತದೆ. ಜನತೆಯೂ ಈ ನಿಟ್ಟಿನಲ್ಲಿ ನಮಗೆ ಸಹಕಾರ ನೀಡಬೇಕು ಎಂದು ರಾಜ್ಯದ ಗೃಹ ಮತ್ತು ಸಹಕಾರ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದೇಶದ 71ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡುತಿದ್ದರು.

ಕರ್ನಾಟಕ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದೆ ಎಂದ ಬೊಮ್ಮಾಯಿ, ಇದು ರಾಜ್ಯದ ಅರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಪುಷ್ಟಿ ನೀಡುವ ವಲಯವಾಗಿದೆ. ಆದರೆ ಕರಾವಳಿಯ ಸಂಪೂರ್ಣ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.

ಕರಾವಳಿಯ ಬಂದರುಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕಾಗಿದೆ. ಇದರ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವ ಮೂಲಕ ಆಮದು ರಫ್ತು ಪ್ರಮಾಣವನ್ನು ಹೆಚ್ಚಿಸಬೇಕಿದೆ. ಇದರೊಂದಿಗೆ ಕರಾವಳಿ ಮತ್ತು ಒಳನಾಡು ಸಂಪರ್ಕ ಕಲ್ಪಿಸುವ ಸವಾಲು ಇದ್ದು, ಶೀಘ್ರದಲ್ಲಿ ಇದನ್ನು ಕೈಗೊಳ್ಳಬೇಕಾಗಿದೆ. ಅಲ್ಲದೇ ಕರಾವಳಿಯ ಮೀನುಗಾರರು ಹಾಗೂ ಮೀನುಗಾರಿಕೆಯನ್ನೂ ಅಭಿವೃಧ್ದಿಗೊಳಿಸಬೇಕಿದೆ. ಅವರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಒದಗಿಸುವ ಮೂಲಕ ಸಹಾಯ ಮಾಡಬೇಕಿದೆ ಎಂದು ಗೃಹ ಸಚಿವರು ನುಡಿದರು.

ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ನಮಗೆ ಇದನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರವಾಸೋದ್ಯವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ದೇಶ-ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕಿದೆ. ಇಲ್ಲಿ ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಂನ್ನು ಅಭಿವೃಧಿ ಪಡಿಸಬೇಕಾಗಿದೆ. ಈ ಮೂಲಕ, ಕರಾವಳಿ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಲು ಚಿಂತನೆ ನಡೆದಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಕಳೆದ ಸಾಲಿನ ನೆರೆ ಹಾವಳಿಯಿಂದ ಸಂಭವಿಸಿದ ಹಾನಿಗಾಗಿ ಪಂಚಾಯತ್‌ರಾಜ್ ಇಲಾಖೆಯಿಂದ 29 ಕೋಟಿರೂ. ಬಿಡುಗಡೆ ಮಾಡಲಾಗಿದ್ದು, ವಿವಿಧ ಕಾಮಗಾರಿಗಳಿಗಾಗಿ 32 ಕೋಟಿ ರೂ. ಬಿಡುಗಡೆ ಗೊಂಡಿದೆ. ಜಿಲ್ಲೆಯ 1.90 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸ ಲಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1.39 ಲಕ್ಷ ರೈತರಿಗೆ ತಲಾ 10ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ 50 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಎಸ್‌ಎಫ್‌ಸಿ ಅನುದಾನದ ಮೂಲಕ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಭಿವೃಧ್ದಿ ನಡೆಯುತ್ತಿದೆ. ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ದಿನದ 24ಗಂಟೆ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ 157 ಕೋಟಿ ರೂ. ವೆಚ್ಚದಲ್ಲಿ 194 ಕಿ.ಮೀ ರಸ್ತೆ ಪೂರ್ಣಗೊಂಡಿದೆ ಎಂದು ಬೊಮ್ಮಾಯಿ ತಿಳಿಸಿದರು.

ದೇಶದ ಅಭಿವೃಧ್ದಿಯನ್ನು ಕೆಲವು ಶಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪದೇ ಪದೇ ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸ ಲಾಗಿದೆ. ಇಂತಹ ಯಾವುದೇ ಕೃತ್ಯಗಳಿಗೆ ಅವಕಾಶ ನೀಡದೇ ದೇಶವನ್ನು ಭಯೋತ್ಪಾದನಾ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಸಂಕಲ್ಪ ಮಾಡ ಬೇಕು ಎಂದು ಸಚಿವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ವಿವಿಧ ಇಲಾಖೆಗಳ ಹತ್ತು ಮಂದಿ ಸರಕಾರಿ ನೌಕರರನ್ನು ಗುರುತಿಸಿ ಅವರಿಗೆ ಜಿಲ್ಲಾ ಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ನೀಡಿ ಉಸ್ತುವಾರಿ ಸಚಿವ ಬಸರಾಜ ಬೊಮ್ಮಾಯಿ ಸನ್ಮಾನಿಸಿದರು.

ಕೃಷಿ ಪ್ರಶಸ್ತಿ ಯೋಜನೆಯಡಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ವಿವಿಧ ತಾಲೂಕುಗಳ ಒಟ್ಟು 13 ಮಂದಿ ರೈತರನ್ನು ಗುರುತಿಸಿ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ನಡೆದ ‘ಖೇಲೋ ಇಂಡಿಯಾ’ ಕ್ರೀಡಾಕೂಟದ 21 ವರ್ಷದೊಳಗಿನ ಬಾಲಕರ ವಿಭಾಗದ 200ಮೀ. ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಎಂಜಿಎಂ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಅಭಿನ್ ದೇವಾಡಿಗನನ್ನು ಸಹ ಸಚಿವರು ಸನ್ಮಾನಿಸಿದರು.

ಕೊನೆಯಲ್ಲಿ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಥ ಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಮಾರಂದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕ ರಘುಪತಿ ಭಟ್, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿವಿಷ್ಣುವರ್ಧನ, ಕರಾವಳಿ ಕಾವಲು ಪಡೆಯ ಎಸ್ಪಿಆರ್. ಚೇತನ್, ಎಎಸ್ಪಿ ಕುಮಾರ ಚಂದ್ರ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News