ಎನ್ ಆರ್‌ ಸಿ ಮೂಲಕ ಮೂಲನಿವಾಸಿಗಳನ್ನೇ ವಿದೇಶಿಗಳನ್ನಾಗಿಸುವ ಷಡ್ಯಂತರ: ಪ್ರೊ.ವಿಲಾಸ ಖಾರಾತ್‌

Update: 2020-01-26 13:16 GMT

ಉಡುಪಿ, ಜ.25: ಎನ್‌ಆರ್‌ಸಿ ಕಾಯಿದೆ ಮೂಲಕ ವಿದೇಶದಿಂದ ಬಂದಿರುವ ಬ್ರಾಹ್ಮಣರು ಇಲ್ಲಿನ ಮೂಲನಿವಾಸಿಗಳನ್ನೇ ವಿದೇಶಿಯನ್ನರಾಗಿಸುವ ಷಡ್ಯಂತರ ಮಾಡುತ್ತಿದ್ದಾರೆ. ಇಂತಹ ಕಾಯಿದೆಗಳ ಮೂಲಕ ಆರೆಸ್ಸೆಸ್ ಹಾಗೂ ಬಿಜೆಪಿ ಈ ದೇಶದ ಸಂವಿಧಾನವನ್ನೇ ನಾಶ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಭಾರತೀಯ ಮುಕ್ತಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ.ವಿಲಾಸ ಖಾರಾತ್ ಹೇಳಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ರಾಜ್ಯ ಸಮಿತಿಯ ವತಿಯಿಂದ ಅಂಬೇಡ್ಕರ್ ಮಂಡಿಸಿದ ಸಂವಿಧಾನವು ಜಾರಿಯಾದ 71ನೇ ವರ್ಷಾಚರಣೆಯ ಪ್ರಯುಕ್ತ ರವಿವಾರ ಉಡುಪಿ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೊರಿಯಂನಲ್ಲಿ ಆಯೋಜಿಸಲಾದ ಏಕತೆಗಾಗಿ ಸ್ವಾಭಿಮಾನದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಿಎಎ, ಎನ್‌ಆರ್‌ಸಿ ಬಗ್ಗೆ ದಲಿತರು, ಹಿಂದುಳಿದ ವರ್ಗದವರಿಗೆ ಸರಿಯಾದ ಮಾಹಿತಿಯೇ ಇಲ್ಲ. ಇದು ಕೇವಲ ಮುಸ್ಲಿಮರಿಗೆ ಸಂಬಂಧಟ್ಟ ಸಮಸ್ಯೆ ಆಗಿದೆ ಎಂಬುದಾಗಿ ಇವರೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಈ ದೇಶದ ಬಹುಜನರ ವಿರೋಧಿಯಾಗಿದೆ. ದಾಖಲೆಗಳಿಂದ ನಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದುದರಿಂದ ಇದು ಕೇವಲ ಮುಸ್ಲಿಮರದ್ದು ಮಾತ್ರವಲ್ಲ ದೇಶದ ಬಹುಜನರ ಸಮಸ್ಯೆಯಾಗಿದೆ ಎಂದರು.

1947ರ ಸ್ವಾತಂತ್ರವು ಸಾವಿರಾರು ವರ್ಷಗಳಿಂದ ನಮ್ಮ ಮೇಲೆ ದೌರ್ಜನ್ಯ, ಅನ್ಯಾಯ ಎಸಗುತ್ತಿರುವರಿಗೆ ದೊರೆತಿದೆಯೇ ಹೊರತು ಈ ದೇಶದ ಬಹು ಸಂಖ್ಯಾತರಾದ ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರಿಗೆ ಇನ್ನು ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರು ಸಂಘಟಿತರಾಗಬೇಕಾದ ಅವಶ್ಯಕತೆ ಎದುರಾಗಿದೆ. ದಲಿತರು ಕೇವಲ ಜೈ ಭೀಮ್ ಘೋಷಣೆಗಳನ್ನು ಹಾಕುವುದರಿಂದ ಯಾವುದೇ ಕ್ರಾಂತಿ ಮಾಡಲು ಸಾಧ್ಯವಿಲ್ಲ. ಆದುದರಿಂದ ಅಂಬೇಡ್ಕರ್ ವಿಚಾರಗಳನ್ನು ನಮ್ಮ ತಲೆಯಲ್ಲಿ ತುಂಬಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಇಂದು ದೇಶದ ಸಂವಿಧಾನವನ್ನೇ ನಾಶ ಮಾಡುವ ಕೆಲಸ ನಡೆಸಲಾಗುತ್ತಿದೆ. ಎಲ್ಲ ಸರಕಾರಿ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿಯನ್ನು ತೆಗೆದುಹಾಕಲಾಗುತ್ತಿದೆ. ಆದುದರಿಂದ ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಸಲು ನಾವೆಲ್ಲ ಒಂದಾಗಬೇಕು ಎಂದ ಅವರು, ಇವಿಎಂ ಷಡ್ಯಂತರದಿಂದ ಬಿಜೆಪಿಯು ಈ ಹಿಂದಿನ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದರು. ನಮ್ಮ ಮತವನ್ನು ಕಳವು ಮಾಡುತ್ತಿದ್ದರೂ ನಾವು ಮಾತ್ರ ಎಚ್ಚರಗೊಳ್ಳುತ್ತಿಲ್ಲ ಎಂದರು.

ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ವಹಿಸಿದ್ದರು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಧರ್ಮ ಗುರು ಫಾ.ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಸುಮಲತಾ ಬಜಗೋಳಿ, ಗುರುಮಿಠಕಲ್ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವನಜಾಕ್ಷಿ ಅಶೋಕ್, ದಲಿತ ಚಿಂತಕ ನಾರಾಯಣ ಮಣೂರು, ಬಹುಜನ್ ಮುಕ್ತಿ ಮೋರ್ಚಾದ ವಿಭಾಗ ಸಂಯೋಜಕ ತೌಫಿಕ್ ಮುಖ್ಯ ಅತಿಥಿಗಳಾಗಿದ್ದರು.

ದಸಂಸ ರಾಜ್ಯ ಖಜಾಂಚಿ ಕೃಷ್ಣಪ್ಪ ಕೋಲಾರ, ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಅಬ್ದುಲ್ ಬಾಶಿತ್ ಗಂಗೊಳ್ಳಿ, ನೀಲಿ ಸೈನ್ಯ ಉಪಾಧ್ಯಕಷ ಸದ್ದಾಂ ಹುಸೇನ್, ದಸಂಸ ಮುಖಂಡರಾದ ಮರಿಯಪ್ಪ ಕನ್ಯೆ, ಮಂಜುನಾಥ್ ತೂದೂರ್, ಪ್ರಭಾಕರ ಮೂಡಬಿದ್ರೆ, ಆರ್.ಮೂರ್ತಿ, ಅಂಬಿಕಾ ಮೊದಲಾದವರು ಉಪಸ್ಥಿತರಿದ್ದರು.

ದಸಂಸ ಬೆಂಗಳೂರು ಜಿಲ್ಲಾ ಸಂಚಾಲಕ ಜಿ.ಎ.ನಾಗಪ್ಪ ಸ್ವಾಗತಿಸಿದರು. ಗುಲ್ಬರ್ಗ ವಿಭಾಗದ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಹೊರಟು ಕೆ.ಎಂ. ಮಾರ್ಗ, ಹಳೆ ಡಯಾನ ಸರ್ಕಲ್, ಕೋರ್ಟ್ ರಸ್ತೆ, ಮಿಷನ್ ಆಸ್ಪತ್ರೆ ಮಾರ್ಗವಾಗಿ ಸಭಾಂಗಣದವರೆಗೆ ನಡೆದ ನೀಲಿ ಸೈನ್ಯದ ಪಥ ಸಂಚಲನಕ್ಕೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಚಾಲನೆ ನೀಡಿದರು.

‘ಅಂಬೇಡ್ಕರ್‌ರ ಭಕ್ತರಲ್ಲ, ಅನುಯಾಯಿಗಳಾಗಿ’

ನಾವು ಅಂಬೇಡ್ಕರ್ ಅವರ ಅನುಯಾಯಿಗಳಾಗುವ ಬದಲು ಭಕ್ತರಾಗಿ ಅವರ ಆಂದೋಲನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಭಕ್ತಿಯಿಂದ ಯಾವುದೇ ಆಂದೋಲನ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಪ್ರೊ.ವಿಲಾಸ ಖಾರಾತ್ ತಿಳಿಸಿದರು.

ಎಸ್‌ಸಿ, ಎಸ್‌ಟಿ, ಹಿಂದುಳಿದವರ್ಗದವರು ಸಂಘಟಿತರಾಗದಿದ್ದರೆ ಶೇ.3 ರಷ್ಟಿರುವ ಬ್ರಾಹ್ಮಣರನ್ನು ಸೋಲಿಸಲು ಸಾಧ್ಯವಿಲ್ಲ. ನಮ್ಮನ್ನು ಮತ್ತೆ ಮನುಸ್ಮಿತಿಯ ಗುಲಾಮಗಿರಿಗೆ ಕಡೆ ಕೊಂಡೊಯ್ಯುವ ಷಡ್ಯಂತರ ನಡೆಸಲಾಗುತ್ತಿದೆ. ನಾವು ಈಗಲೇ ಎಚ್ಚೆತ್ತುಕೊಂಡರೇ ಮಾತ್ರ ಈ ಗುಲಾಮಗಿರಿಯಿಂದ ಹೊರ ಬರಲು ಸಾಧ್ಯ. ಆದುದರಿಂದ ಅಂಬೇಡ್ಕರ್‌ರ ವಿಚಾರಗಳೊಂದಿಗೆ ನಾವೆಲ್ಲ ಸಂಘಟಿತರಾಗಬೇಕು ಎಂದರು.

‘ಈ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು, ಅಲ್ಪ ಸಂಖ್ಯಾತರು, ಹಿಂದುಳಿದವರ್ಗದವರಿಗೆ ಕಾಗದದ ಮೂಲಕ ತಮ್ಮ ಭಾರತೀಯ ತೆಯನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ. ನಮ್ಮ ಡಿಎನ್‌ಎ ಈ ದೇಶದ ಮಣ್ಣಿನ ಗುಣದಲ್ಲಿ ಹೋಲಿಕೆಯಾದರೆ, ಬ್ರಾಹ್ಮಣರು, ವೈಶ್ಯರು ಹಾಗೂ ಕ್ಷತ್ರಿಯರ ಡಿಎನ್‌ಎಯು ವಿದೇಶಿಯರ ರಕ್ತವನ್ನು ಹೋಲುತ್ತದೆ. ಆದುದರಿಂದ ಎನ್‌ಆರ್‌ಸಿಯನ್ನು ದಾಖಲೆಗಳ ಬದಲು ಡಿಎನ್‌ಎ ಆಧಾರದಲ್ಲಿ ನಡೆಸಬೇಕು. ಆಗ ಭಾರತೀಯರಲ್ಲದ ವಿದೇಶದಿಂದ ಬಂದಿರುವ ಶೇ.3ರಷ್ಟಿರುವ ಬ್ರಾಹ್ಮಣರು ಈ ದೇಶದಿಂದ ಹೊರಹೋಗಬೇಕಾಗುತ್ತದೆ’

- ಪ್ರೊ.ವಿಲಾಸ ಖಾರಾತ್, ರಾಷ್ಟ್ರೀಯ ಕಾರ್ಯದರ್ಶಿ, ಭಾರತೀಯ ಮುಕ್ತಿ ಮೋರ್ಚಾ, ದೆಹಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News