ಆದಿತ್ಯ ರಾವ್ ಪ್ರಕರಣದ ನಿಷ್ಪಕ್ಷಪಾತ ತನಿಖೆ: ಗೃಹ ಸಚಿವ ಬೊಮ್ಮಾಯಿ

Update: 2020-01-26 15:07 GMT

ಉಡುಪಿ, ಜ.26: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕವನ್ನಿರಿಸಿದ ಆದಿತ್ಯ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ವಿರುದ್ಧ ಟೀಕೆಗೆ ಯಾವುದೇ ಕಾರಣಗಳಿಲ್ಲ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾದರೂ ನ್ಯಾಯ ಸಮ್ಮತ ತನಿಖೆ ಮಾಡುತ್ತೇವೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

‘ನಾನು ಈ ಬಗ್ಗೆ ಮೊದಲ ದಿನವೇ ಹೇಳಿದ್ದೆ. ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಮೇಲೂ ನಾನು ದೋಷಾರೋಪ ಮಾಡಿರಲಿಲ್ಲ. ಸಿಸಿಟಿವಿ ದಾಖಲೆ ಹಿಡಿದು ಪೊಲೀಸರು ನಡೆಸಿದ ತೀವ್ರ ತನಿಖೆಗೆ ಹೆದರಿಯೇ ಆತ (ಆದಿತ್ಯ ರಾವ್) ಶರಣಾಗತನಾಗಿದ್ದಾನೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ದಕ್ಷತೆಯಿಂದ ತನಿಖೆಯಾಗಿದ್ದರಿಂದಲೇ ಆರೋಪಿ ಪತ್ತೆಯಾಗಿದ್ದಾನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಅಪರಾಧ.. ಅಪರಾಧವೇ. ಅಪರಾಧಿ.. ಅಪರಾಧಿಯೇ ಅನ್ನೋದು ನಮ್ಮ ನಂಬಿಕೆ. ಈ ವಿಷಯದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು.’ ಎಂದು ಅವರು ಮನವಿ ಮಾಡಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಗೊಂದಲ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲಾ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲಿದೆ. ಮುಖ್ಯಮಂತ್ರಿಗಳು ಸೂಕ್ತ ಚಿಂತನೆ ಮಾಡುತ್ತಾರೆ. ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗಿದೆ. ಪಕ್ಷದ ವರಿಷ್ಟರ ಜೊತೆಗೆ ಚರ್ಚೆ ಮಾಡಿ, ಸೂಕ್ತ ಕ್ರಮ ಜರಗಿಸುತ್ತಾರೆ ಎಂದು ಅವರು ಹೇಳಿದರು.

ಇತ್ತೀಚೆಗೆ ನಿಧನರಾದ ಶ್ರೀಪೇಜಾವರ ಸ್ವಾಮೀಜಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು, ಅತೀ ಹೆಚ್ಚು ಬಾರಿ ಕೃಷ್ಣ ಪೂಜೆ ಮಾಡಿದ ಶ್ರೇಷ್ಠ ಗುರುಗಳು ಪೇಜಾವರಶ್ರೀ. ದೇಶಾದ್ಯಂತ ಸಂಚರಿಸಿ ಧರ್ಮಜಾಗೃತಿ ಮೂಡಿಸಿದ ಕೀರ್ತಿ ಅವರದ್ದು. ಅಸ್ಪೃಶ್ಯತೆ ದೂರ ಮಾಡಿದವರಲ್ಲಿ ಪೇಜಾವರ ಸ್ವಾಮೀಜಿ ಪ್ರಮುಖರು ಎಂದರು.

ಬಿಜೆಪಿ ದೇಶಾದ್ಯಂತ ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದ ಸಚಿವರು, ನಾಳೆ ರಾಜನಾಥ್ ಸಿಂಗ್ ಮಂಗಳೂರಿಗೆ ಬರುತ್ತಿದ್ದಾರೆ. ಮಂಗಳೂರು ಹೊರವಲಯದಲ್ಲಿ ಜಾಗೃತಿ ಸಮಾವೇಶ ನಡೆಯುತ್ತಿದೆ. ಶಾಂತಿ, ಕಾನೂನು ಸುವ್ಯವಸ್ಥೆಗೆ ನಮ್ಮ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News