ಉಡುಪಿ: ಸೇತುವೆಯಿಂದ ನದಿಗೆ ಹಾರಿದ ಉದ್ಯಮಿ

Update: 2020-01-26 15:51 GMT

ಉಡುಪಿ, ಜ.26: ಉದ್ಯಮಿಯೊಬ್ಬರು ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆ ಇಂದು ಸಂಜೆ 5ಗಂಟೆ ಸುಮಾರಿಗೆ ಕುಂದಾಪುರ ಸಂಗಮ್ ಹೇರಿಕುದ್ರು ಎಂಬಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಕುಂದಾಪುರ ಚಿಕನ್‌ಸಾಲ್ ರಸ್ತೆಯ ಕೆ.ಜಿ.ಗಣೇಶ್ (50) ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿ ಬಂದ ಇವರು, ಸೇತುವೆಗಿಂತ ಸ್ವಲ್ಪ ದೂರವೇ ಇಳಿದು, ಬಳಿಕ ಸೇತುವೆ ಬಳಿ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸೇತುವೆ ಮೇಲೆ ತನ್ನ ಪರ್ಸ್, ಕನ್ನಡಕ ಹಾಗೂ ಚಪ್ಪಲಿ ಇಟ್ಟು ಮೇಲಿನಿಂದ ಕೆಳಗೆ ನೀರಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಇವರ ಗುರುತು ಪತ್ತೆಯಾಗಿದೆ. ಕೂಡಲೇ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು, ಕೆ.ಜಿ.ಗಣೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಅಗ್ನಿಶಾಮಕದಳದವರು ಕೂಡ ಶೋಧ ಕಾರ್ಯ ನಡೆಸಿದ್ದಾರೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿದ್ದಾರೆ.

ಕಳೆದ 25ವರ್ಷಗಳ ಕಾಲ ಮುಂಬಯಿಯಲ್ಲಿ ಹೊಟೇಲ್ ನಡೆಸುತ್ತಿದ್ದ ಇವರು, ನಾಲ್ಕೈದು ವರ್ಷಗಳ ಹಿಂದೆ ಹೊಟೇಲನ್ನು ಲೀಸ್‌ಗೆ ನೀಡಿ, ಊರಿಗೆ ಬಂದು ನೆಲೆಸಿದ್ದರು. ಕುಡಿತದ ಚಟ ಹಾಗೂ ಮಾನಸಿಕ ಖಿನ್ನತೆಯೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಇವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News