ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನ

Update: 2020-01-27 09:59 GMT

ಮಂಗಳೂರು, ಜ.27: ಹಿರಿಯ ರಾಜಕಾರಣಿ, ಜೆಡಿಎಸ್ ಮುಖಂಡ, ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಎರಡು ವಾರಗಳ ಹಿಂದೆ ನಗರದ ಎ.ಜೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅಮರನಾಥ ಶೆಟ್ಟಿ 10 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ 3 ಬಾರಿ ಗೆಲುವು ಸಾಧಿಸಿದ್ದರು.  ಗೆಲುವು ಕಂಡ ಮೂರು ಬಾರಿಯೂ ಅವರು ಸಚಿವರಾಗಿದ್ದರು. ಜನತಾ ಪಕ್ಷದಿಂದ 1983 ಮತ್ತು 1985ರಲ್ಲಿ ಶಾಸಕರಾಗಿದ್ದ ಶೆಟ್ಟಿ, 1994ರಲ್ಲಿ ಜನತಾ ದಳದಿಂದ ಶಾಸಕರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮುಖ್ಯಮಂತ್ರಿ ಸಂತಾಪ 

ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅಮರನಾಥ ಶೆಟ್ಟಿ ಒಬ್ಬ ಸರಳ ಸಜ್ಜನ ರಾಜಕಾರಣಿ ಆಗಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸಂತಾಪ
ಅಮರನಾಥ ಶೆಟ್ಟಿ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 
ಅಮರನಾಥ ಶೆಟ್ಟಿ ಅವರು ಗ್ರಾಮ ಪಂಚಾಯತ್ ನಿಂದ ತೊಡಗಿ ರಾಜ್ಯದ ಸಚಿವರ ತನಕ ನಾನಾ ಸ್ತರಗಳಲ್ಲಿ ಜನಸೇವೆಯನ್ನು ಮಾಡಿರುವ ಅಪರೂಪದ ಜನನಾಯಕ. ಗ್ರಾಮ ಪಂಚಾಯತ್, ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ, ಸಹಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸಮುದಾಯದ ನಾಯಕರಾಗಿ ಹೀಗೆ ವಿವಿಧ ಜವಾಬ್ದಾರಿಗಳಲ್ಲಿ ಕರ್ತವ್ಯ ಹಾಗೂ ನಿಸ್ವಾರ್ಥ ಸೇವೆಯನ್ನು ಅವರು ಮಾಡಿದ್ದಾರೆ. ಮೂಡುಬಿದಿರೆ ಸೇರಿದಂತೆ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ಅವರು ಶ್ರಮಿಸಿದ್ದಾರೆ. ಅವರ ನಿಧನದಿಂದ ಕರಾವಳಿ ಒಬ್ಬ ಹಿರಿಯ ರಾಜಕೀಯ ಧುರೀಣರನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ, ಬಂಧುಗಳಿಗೆ ಹಾಗೂ ಅಭಿಮಾನಿಗಳಿಗೆ ಅವರ ಅಗಲುವಿಕೆ ದು:ಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News