ಪಂಪ್‌ವೆಲ್ ಮೇಲ್ಸೇತುವೆ ಜಿಲ್ಲಾಡಳಿದಿಂದಲೇ ಪೂರ್ಣ: ಐವನ್ ಡಿಸೋಜ

Update: 2020-01-27 07:49 GMT

ಮಂಗಳೂರು, ಜ.27: ನಗರದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಹಲವು ವರ್ಷಗಳಿಂದ ಕೇಳುತ್ತಿದ್ದೆವು. ಆದರೆ ಸಂಸದರು ಕೈಚೆಲ್ಲಿದರು. ಬಳಿಕ ಇದೀಗ ಜಿಲ್ಲಾಡಳಿತದಿಂದಲೇ ಈ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸೋಮವಾರ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ, ಪರಿಶೀಲನೆ ನಡೆಸಿತು. ಸಮಿತಿಯ ನೇತೃತ್ವದ ವಹಿಸಿದ್ದ ಐವನ್ ಡಿಸೋಜ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 10 ವರ್ಷಗಳ ಬಳಿಕ ಪಂಪ್‌ವೆಲ್ ಮೇಲ್ಸೇತುವೆ ಈಗ ವಾಹನಗಳ ಸಂಚಾರಕ್ಕೆ ಸಿದ್ಧಗೊಂಡಿರುವುದಕ್ಕೆ ಸಂಸದರಲ್ಲ, ಬದಲಾಗಿ ಜಿಲ್ಲಾಡಳಿತ ಕಾರಣ ಎಂದು ಹೇಳಿದರು.

ಹತ್ತು ವರ್ಷಗಳ ಹಿಂದೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಮೇಲ್ಸೇತುವೆ ಉದ್ಘಾಟನೆಯ ಕುರಿತು ಸಂಸದ ನಳಿನ್ ಕುಮಾರ್ ಕಟೀಲು ಅನೇಕ ಬಾರಿ ಗಡುವು ನೀಡಿದ್ದರು. ಆದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಕಳೆದ ಜನವರಿ 1ರಂದು ಕೊನೆಯ ಗಡುವು ನೀಡಿದರು. ಆದರೂ ಕಾಮಗಾರಿ ಪೂರ್ತಿಯಾಗದೆ ಅವರು ಕೈಚೆಲ್ಲಿದ್ದರು ಎಂದು ಹೇಳಿದರು.

‘ನಾನು ಹೇಳಿದರೂ ಕೇಳುವುದಿಲ್ಲ’ ಎಂಬ ಮಾತನ್ನು ಸಂಸದರು ಅಸಹಾಯಕತೆಯಿಂದ ಹೇಳಿದ್ದರು. ನಂತರ ಈ ಕಾಮಗಾರಿಯನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿತ್ತು. ಆ ಬಳಿಕ ಇದೀಗ ವಾಹನ ಸಂಚಾರಕ್ಕೆ ಸಾಧ್ಯವಾಗುವಷ್ಟು ಮೇಲ್ಸೇತುವೆ ಸಿದ್ಧಗೊಂಡಿದೆ. ಸಂಸದರು ಕೈಬಿಟ್ಟ ಮೇಲಾದರೂ ಕಾಮಗಾರಿ ಇಷ್ಟಾದರೂ ಪ್ರಗತಿ ಆಯ್ತಲ್ಲ. ಅದಕ್ಕಾಗಿ ಜಿಲ್ಲಾಡಳಿತವನ್ನು ಅಭಿನಂದಿಸುವುದಾಗಿ ಐವನ್ ಹೇಳಿದರು.
ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಜ.31ಕ್ಕೆ ಮೇಲ್ಸೇತುವೆಯನ್ನು ಬಿಟ್ಟುಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕೂಡ ಅದೇ ದಿನಾಂಕವನ್ನು ಹೇಳಿದ್ದಾರೆ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಇಷ್ಟರ ಮಟ್ಟಿಗಾದರೂ ಪೂರ್ತಿ ಆಗಿರುವುದಕ್ಕೆ ಸಂತೃಪ್ತಿ ಇದೆ ಎಂದರು.

ಸಂಸದರು ಹಕ್ಕು ಚಲಾಯಿಸುವಂತಿಲ್ಲ: ಪಂಪ್‌ವೆಲ್ ಮೇಲ್ಸೇತುವೆ ವಾಹನ ಸಂಚಾರಕ್ಕೆ ಸಿದ್ಧಗೊಂಡಿದ್ದರೂ ಅಂಡರ್ ಪಾಸ್ ಎತ್ತರ, ಸರ್ವಿಸ್ ರಸ್ತೆ ಸಹಿತ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಇನ್ನು ಮಳೆಗಾಲ ಬಂದರೆ ಈ ಪ್ರದೇಶದಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಎಲ್ಲ ಕಾಮಗಾರಿಗಳು ಶೀಘ್ರಗತಿಯಲ್ಲಿ ಪೂರ್ತಿಯಾಗಬೇಕು. ಅಲ್ಲಿಯವರೆಗೆ ಮೇಲ್ಸೇತುವೆ ಪೂರ್ತಿಯಾಗಿದೆ ಎಂದು ಸಂಸದರು ಸೇರಿದಂತೆ ಯಾರೂ ಕೂಡ ಹಕ್ಕು ಚಲಾಯಿಸುವಂತಿಲ್ಲ ಎಂದು ವಿಧಾನ ಪರಿಷತ ಸದಸ್ಯ ಐವನ್ ಡಿಸೋಜ ಎಂದು ತಿಳಿಸಿದರು.

ಈ ರಾಷ್ಟ್ರೀಯ ಹೆದ್ದಾರಿ ಈಗ ಅಪೂರ್ಣ ಸ್ಥಿತಿಯಲ್ಲೇ ಇದೆ. ಪಂಪ್‌ವೆಲ್ ಪ್ರದೇಶದ ಬಾಕಿ ಕಾಮಗಾರಿಗಳು ಸೇರಿದಂತೆ ನಂತೂರು ಜಂಕ್ಷನ್‌ನಲ್ಲಿ ಅಥವಾ ಅಂಡರ್ ಪಾಸ್‌ಗೆ ಇನ್ನು ಯೋಜನೆಯೇ ತಯಾರಾಗಿಲ್ಲ. ಕೂಡಲೇ ಈ ಕುರಿತು ಸಂಸದರು ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸದಸ್ಯರಾದ ಪ್ರವೀಣ್ ಆಳ್ವ, ನವೀನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಕೇಶವ್ ಮರೋಳಿ, ಆಶಿತ್ ಪಿರೇರ, ನೀರಜ್ ಚಂದ್ರ ಪಾಲ್, ಜಯಶೀಲ ಅಡ್ಯಂತಾಯ, ಶಂಸುದ್ದೀನ್ ಬಂದರ್, ಹೇಮಂತ ಗರೋಡಿ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಮತ್ತಿತರರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News