ದ.ಕ.ದಲ್ಲಿ ಉತ್ತರಾಖಂಡದ ಯುವ ಪ್ರತಿನಿಧಿಗಳು !

Update: 2020-01-27 10:23 GMT

ಮಂಗಳೂರು, ಜ.27: ‘‘ನಮ್ಮ ಊರಿನ ಹಾಗೂ ಇಲ್ಲಿನ ಆಹಾರ ಸಂಪೂರ್ಣ ವಿಭಿನ್ನ. ಹಾಗಾಗಿ ದಕ್ಷಿಣ ಭಾರತದ ಆಹಾರದ ಬಗ್ಗೆ ಕುತೂಹಲವಿತ್ತು. ನಮಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ ಎಂಬ ಅಳುಕಿತ್ತು. ಆದರೆ ಇಲ್ಲಿನ ಇಡ್ಲಿ- ವಡೆ, ಉಪಮಾ ನಮಗೆ ತುಂಬಾ ಹಿಡಿಸಿದೆ. ಅದರಲ್ಲೂ ಇಲ್ಲಿ ಹಿಂದೆಲ್ಲಾ ಪುರುಷ ಕಲಾವಿದರಿಗೆ ಸೀಮಿತವಾಗಿದ್ದ, ಸದ್ಯ ಮಹಿಳೆಯರೂ ಭಾಗವಹಿಸುತ್ತಿರುವ ಯಕ್ಷಗಾನ ತುಂಬಾ ಮುದ ನೀಡಿತು’’. ಉತ್ತರಾಖಂಡದ ಯುವ ಪ್ರತಿನಿಧಿ ಅನೂಪ್ ಎಂಬವರು ದಕ್ಷಿಣ ಕನ್ನಡದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದು ಹೀಗೆ.

ನೆಹರೂ ಯುವ ಕೇಂದ್ರದ ವತಿಯಿಂದ ಅಂತಾರಾಜ್ಯ ಯುವ ವಿನಿಯಮ ಕಾರ್ಯಕ್ರಮದಡಿ ಜ.24ರಂದು ಮಂಗಳೂರಿಗೆ ಆಗಮಿಸಿ, ದ.ಕ. ಜಿಲ್ಲೆಯ ವಿವಿಧ ಕಡೆ ಭೇಟಿ ನೀಡಿರುವ ಉತ್ತರಾಖಂಡದ 50 ಯುವ ಪ್ರತಿನಿಧಿಗಳ ತಂಡದ ಸದಸ್ಯರಲ್ಲಿ ಅನೂಪ್ ಓರ್ವರು. ಅವರು ಇಂದು ಮಧ್ಯಾಹ್ನ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ತಂಡದ ಇತರ ಸದಸ್ಯರ ಜತೆ ದಕ್ಷಿಣ ಕನ್ನಡ ಜಿಲ್ಲೆಯ ಭೇಟಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಜನವರಿ 20ರಿಂದ ಫೆ.3ರವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಭೇಟಿಯ ನಿಮಿತ್ತ ಉತ್ತರಾಖಂಡದ ಐದು ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಈ ಯುವಕ- ಯುವತಿಯರ ತಂಡ ಜ.24ರಂದು ಮಂಗಳೂರಿಗೆ ಭೇಟಿ ನೀಡಿದೆ.

ತಮ್ಮ ನಾಲ್ಕು ದಿನಗಳ ದ.ಕ. ಜಿಲ್ಲೆಯ ಭೇಟಿಯ ಸಂದರ್ಭ ತಂಡ ನಗರದ ಉಳ್ಳಾಲ ದರ್ಗಾ, ನಗರದ ಕೆಲವು ಯೂತ್ ಕ್ಲಬ್‌ಗಳು, ಗ್ರಾಮ ಪಂಚಾಯತ್‌ಗಳು, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ, ಸಂತ ಅಲೋಶಿಯಸ್ ಚಾಪೆಲ್, ಕಾರ್ಕಳದ ಅನಾಥಾಶ್ರಮ, ಅತ್ತೂರು ಚರ್ಚ್, ಜೈನ ಬಸದಿಗೆ ಭೇಟಿ ನೀಡಿ ಇಲ್ಲಿನ ಕಲೆ, ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದೆ.

ಯಕ್ಷಗಾನದ ಬಗ್ಗೆ ಬಹುವಾಗಿ ಪ್ರಭಾವಿತಗೊಂಡಿರುವ ತಂಡದ ಸದಸ್ಯರು ಕನ್ನಡದ ಜಾನಪದ ಕಲೆಯ ಬಗ್ಗೆಯೂ ತಿಳಿಯುವ ಪ್ರಯತ್ನ ಮಾಡಿದ್ದಾರೆ. ಮಾತ್ರವಲ್ಲದೆ, ಇಂದು ಸಂವಾದ ಕಾರ್ಯಕ್ರಮದ ವೇಳೆ ಕನ್ನಡದಲ್ಲಿ ತಾವು ಕಲಿತ ‘ಸೋಜಿಗದ ಸೂಜಿ ಮಲ್ಲಿಗೆ’ ಜನಪದ ಹಾಡನ್ನು ಹಾಡಿದರಲ್ಲದೆ, ಕೆಲವೊಂದು ಕನ್ನಡ ಪದಗಳನ್ನು ಗುನುಗುಣಿಸಿದರು. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ರನ್ನು ಭೇಟಿಯಾದ ತಂಡ ಅವರ ಜತೆಗೂ ಸಂವಾದ ನಡೆಸಿದೆ.

ಕರ್ನಾಟಕ ರಾಜ್ಯಕ್ಕೆ 15 ದಿನಗಳ ಈ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿರುವ ಈ ತಂಡ ಇಂದು ರಾತ್ರಿ ಮೈಸೂರಿಗೆ ಪ್ರಯಾಣ ಬೆಳೆಸಲಿದೆ. ಜ.24ರಂದು ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಶಾಸಕ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಉದ್ಘಾಟನೆಯೊಂದಿಗೆ ತಂಡದ ಜಿಲ್ಲಾ ಭೇಟಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಅನಾಥಾಶ್ರಮಕ್ಕೆ ತೆರಳಿದ ತಂಡ- ಕರಗಿದ ಮನ!
 ‘‘ಕಾರ್ಕಳಕ್ಕೆ ಭೇಟಿ ನೀಡಿದ್ದ ವೇಳೆ ಹಿರಿಯರಿಗೆ ಆಶ್ರಯ ನೀಡುವ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಹಿರಿಯರನ್ನು ಕಂಡು ಮನಸ್ಸಿಗೆ ತುಂಬಾ ನೋವಾಯಿತು. ನಮ್ಮಲ್ಲಿ ಹೆತ್ತವರನ್ನು ಈ ರೀತಿಯಾಗಿ ನಮ್ಮಿಂದ ದೂರ ಇರಿಸುವುದು ಬಲು ಅಪರೂಪ. ಹಾಗಾಗಿ ಅಲ್ಲಿನ ಹಿರಿ ಜೀವಗಳನ್ನು ಕಂಡು ಮನಸ್ಸು ಕರಗಿತು. ಯುವಕರು ಈ ಬಗ್ಗೆ ಗಮನಹರಿಸಬೇಕು’’ ಎಂದು ತಂಡದ ಸದಸ್ಯರೊಬ್ಬರು ಇಲ್ಲಿನ ಯುವಕರಿಗೆ ಮನವಿ ಮಾಡಿಕೊಂಡರು. ತಂಡದ ಸದಸ್ಯರು ಆ ಆಶ್ರಮಕ್ಕೆ ತಮ್ಮ ಕಿರು ದೇಣಿಗೆಯನ್ನು ಕೂಡಾ ನೀಡಿದ್ದಾರೆ ಎಂದು ನೆಹರು ಯುವ ಕೇಂದ್ರದ ಪ್ರತಿನಿಧಿ ಜಿ.ಎಸ್.ಹಿರೇಮಠ್ ತಿಳಿಸಿದರು.

ದ.ಕ. ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾದಿಕಾರಿ ರಘುವೀರ್ ಸೂಟರ್‌ಪೇಟೆ, ವಾರ್ತಾಧಿಕಾರಿ ಖಾದರ್ ಷಾ, ಯೆನೆಪೊಯ ವಿವಿಯ ಡಾ.ಅಶ್ವಿನಿ ಶೆಟ್ಟಿ ಹಾಗೂ ಉತ್ತರಾಖಂಡದ ಯುವ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News