Breaking News: 80 ಪ್ರಯಾಣಿಕರಿದ್ದ ವಿಮಾನ ಪತನ

Update: 2020-01-27 16:45 GMT

ಗಝನಿ,ಜ.27: ಪೂರ್ವ ಅಫ್ಘಾನಿಸ್ತಾನದ ಗಝನಿ ಪ್ರಾಂತದಲ್ಲಿ ವಿಮಾನವೊಂದು ಪತನಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಆದರೆ ವಿಮಾನವು ಸೇನಾ ವಿಮಾನವೇ ಅಥವಾ ಪ್ರಯಾಣಿಕ ವಿಮಾನವೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

‘‘ ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ವೇಳೆಗೆ ವಿಮಾನವೊಂದು ಗಝನಿ ಪ್ರಾಂತದ ದೇಹ್‌ ಯಾಕ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಗ್ರಾಮಸ್ಥರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಮಿಲಿಟರಿ ವಿಮಾನವೇ ಅಥವಾ ವಾಣಿಜ್ಯ ವಿಮಾನವೇ ಎಂಬುದು ನಮಗೆ ಇನ್ನೂ ತಿಳಿದುಬಂದಿಲ್ಲ’’ ಎಂದು ಗಝನಿಯ ಗವರ್ನರ್ ಅವರ ವಕ್ತಾರ ಅರೀಫ್ ನೂರಿ ತಿಳಿಸಿದ್ದಾರೆ.

 ಗಝನಿ ಪ್ರಾಂತದ ಪೊಲೀಸ್ ವಕ್ತಾರ ಕೂಡಾ ವಿಮಾನ ಪತನಗೊಂಡಿರುವುದನ್ನು ದೃಢಪಡಿಸಿದ್ದಾರೆ. ಅದಾಗ್ಯೂ ಅಪಘಾತಕ್ಕೀಡಾದ ವಿಮಾನವನ್ನು ಗುರುತಿಸಲು ಅವರಿಗೆ ಸಾಧ್ಯವಾಗಿಲ್ಲ. ಗಝನಿ ಪ್ರಾಂತದ ಗ್ರಾಮೀಣ ಪ್ರದೇಶಗಳಲ್ಲಿರುವ ವಿಶಾಲವಾದ ಭೂಪ್ರದೇಶವು ತಾಲಿಬಾನ್ ಬಂಡುಕೋರರ ನಿಯಂತ್ರಣದಲ್ಲಿ ಅಥವಾ ಪ್ರಭಾವಕ್ಕೊಳಗಾಗಿದೆ. ಹೀಗಾಗಿ ಆ ಪ್ರದೇಶದೊಂದಿಗೆ ಸಂಪರ್ಕ ಸಾಧಿಸುವುದು ಸರಕಾರಿ ಅಧಿಕಾರಿಗಳಿಗೆ ಕಷ್ಟಕರವಾಗಿದೆ.

 ಪತನಗೊಂಡ ವಿಮಾನವು ಸರಕಾರಿ ಸ್ವಾಮ್ಯದ ಅರಿಯಾನ್ ಅಫ್ಘಾನ್ ಏರ್‌ಲೈನ್ಸ್ ಗೆ ಸೇರಿದ್ದಾಗಿದೆಯೆಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳು ಹರಿದಾಡಿದ್ದವು. ಆದರೆ ವಾಯುಯಾನ ಸಂಸ್ಥೆಯ ಆನಂತರ ಹೇಳಿಕೆ ನೀಡಿ, ಈ ವರದಿಗಳು ನಿಜವಲ್ಲವೆಂದು ಸ್ಪಷ್ಟಪಡಿಸಿದೆ.

ಅಮೆರಿಕ ಸೇನಾ ವಿಮಾನ ಪತನ: ತಾಲಿಬಾನ್

  ಗಝನಿ,ಜ.27: ಪೂರ್ವ ಅಫ್ಘಾನಿಸ್ತಾನದ ಗಝನಿ ಪ್ರಾಂತದಲ್ಲಿ ಅಮೆರಿಕ ಸೇನಾಪಡೆಯ ವಿಮಾನವು ಪತನಗೊಂಡಿರುವುದಗಿ ತಾಲಿಬಾನ್ ಹೇಳಿದೆ. ಅಮೆರಿಕದ ಆಕ್ರಮಣಕಾರರಿದ್ದ ವಿಮಾನವು ಗಝನಿ ಪ್ರಾಂತದಲ್ಲಿ ಅಪಘಾತಕ್ಕಡಾಗಿದೆ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾನೆ. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆಂದು ಆತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾನೆ.

ಆದರೆ ಈಇದನ್ನು ಅಮೆರಿಕ ನೇತೃತ್ವದ ಸೇನಾಮೈತ್ರಿಕೂಟ ನ್ಯಾಟೋ ಇನ್ನೂ ದೃಢಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News